ಕೆಆರ್ ಪುರ : ಬೆಂಗಳೂರಿನ ಕೆ.ಆರ್. ಪುರ ಕ್ಷೇತ್ರದ ಕುಟುಂಬಗಳಿಗೆ ಒಂದು ಲಕ್ಷ ದಿನಸಿ ಕಿಟ್ ವಿತರಿಸುವ ಕೆಲಸಕ್ಕೆ ಸ್ಥಳೀಯ ಶಾಸಕ ಹಾಗೂ ನಗರಾಭಿವೃದ್ಧಿ ಖಾತೆ ಸಚಿವ ಬಿ.ಎ. ಬಸವರಾಜ ಮುಂದಾಗಿದ್ದಾರೆ.
ಕೆ.ಆರ್. ಪುರ ಕ್ಷೇತ್ರದ 9 ವಾರ್ಡುಗಳಿಗೆ ತಲಾ 10 ಸಾವಿರ ಕಿಟ್ ವಿತರಿಸಲಾಗುತ್ತಿದ್ದು, ಈ ಕಾರ್ಯಕ್ರಮಕ್ಕೆ ಇಂದು ಕೇಂದ್ರ ಸಚಿವ ಡಿ.ವಿ. ಸದಾನಂದ ಗೌಡ ಚಾಲನೆ ನೀಡಿದರು.
ಕೊತ್ತನೂರಿನ ನಂಜುಂಡೇಶ್ವರ ಕಲ್ಯಾಣ ಮಂಟಪ, ವಿಜಿನಾಪುರದ ಸೈನಿಕ ಭವನ, ಕಲ್ಕೆರೆಯ ಎನ್.ಆರ್.ಐ. ಲೇಔಟ್, ಟಿ.ಸಿ. ಪಾಳ್ಯದ ಸಂತ ಅಂತೋಣಿ ಶಾಲೆ, ಕುರುಡುಸೊಣ್ಣೆನಹಳ್ಳಿಯ ಲೇಕ್ ಮೌಂಟ್ ಶಾಲೆ, ಎಚ್.ಎ.ಎಲ್ ನ ವಿಭೂತಿಪುರ ಶಾಲೆ, ಉದಯ ನಗರದ ಜೈನ ಭವನ, ಎ. ನಾರಾಯಣಪುರದ ಎಮ್.ಇ.ಜಿ ಲೇಔಟ್, ದೇವಸಂದ್ರದ ಕೆಂಪೇಗೌಡ ಕ್ರೀಡಾಂಗಣದಲ್ಲಿ ಕೇಂದ್ರ ಸಚಿವ ಡಿ.ವಿ ಸದಾನಂದ ಗೌಡ ಮತ್ತು ನಗರಾಭಿವೃದ್ಧಿ ಸಚಿವ ಭೈರತಿ ಬಸವರಾಜ ಸಾಮೂಹಿಕವಾಗಿ ಚಾಲನೆ ನೀಡಿದರು.
ಕೆ.ಆರ್. ಪುರ ಕ್ಷೇತ್ರದಲ್ಲಿ ಕೋವಿಡ್ನಿಂದಾಗಿ ಮೃತಪಟ್ಟವರ ಕುಟುಂಬದವರಿಗೆ ಒಂದು ಲಕ್ಷ ರೂಪಾಯಿ ಪರಿಹಾರ ನೀಡುವುದಾಗಿ ನಗರಾಭಿವೃದ್ಧಿ ಸಚಿವ ಬಿ.ಎ. ಬಸವರಾಜ್ ಇದೇ ಸಂದರ್ಭದಲ್ಲಿ ಘೋಷಿಸಿದರು.
ನಂತರ ಮಾತನಾಡಿದ ಕೇಂದ್ರ ಸಚಿವ ಸದಾನಂದ ಗೌಡ, ಕೊರೊನಾ ಲಾಕ್ ಡೌನ್ನಿಂದ ಸಂಕಷ್ಟಕ್ಕೆ ಸಿಲುಕಿರುವ ಕೆ.ಆರ್. ಪುರ ವಿಧಾನ ಸಭಾ ಕ್ಷೇತ್ರದ ಜನರಿಗೆ ಒಂದು ಲಕ್ಷ ಆಹಾರ ಪದಾರ್ಥ ಕಿಟ್ಗಳನ್ನು ಬೈರತಿ ಬಸವರಾಜ್ ವಿತರಣೆ ಮಾಡುತ್ತಿರುವುದು ಪುಣ್ಯದ ಕೆಲಸ ಎಂದರು.
ಪ್ರಧಾನಮಂತ್ರಿ ನರೇಂದ್ರ ಮೋದಿಯವರು ಕೊರೊನಾ ನಿಯಂತ್ರಣ ಕುರಿತು ಸಭೆ ಕರೆದಾಗಲ್ಲೆಲ್ಲ ನಾನು ಕೆ.ಆರ್. ಪುರ ಕ್ಷೇತ್ರದ ಬಗ್ಗೆ ಮತ್ತು ಬೈರತಿ ಬಸವರಾಜ್ ಅವರು ಅಲ್ಲಿ ಕೈಗೊಂಡಿರುವ ಕೆಲಸ ಕಾರ್ಯಗಳ ಬಗ್ಗೆ ಮಾಹಿತಿ ನೀಡಿದ್ದೇನೆ. ಹೀಗಾಗಿ ಬಸವರಾಜ ಅವರ ಕಾರ್ಯವೈಖರಿ ಬಗ್ಗೆ ಪ್ರಧಾನಿ ನರೇಂದ್ರ ಮೋದಿ ಅವರಿಗೂ ತಿಳಿದಿದೆ ಎಂದರು.