ಬೆಂಗಳೂರು: ಡಿಜಿಪಿ ರವೀಂದ್ರನಾಥ್ರನ್ನು ಉದ್ದೇಶಪೂರ್ವಕವಾಗಿ ಟಾರ್ಗೆಟ್ ಮಾಡಲಾಗಿದೆ. ಇದರಿಂದ ನೊಂದು ಅವರು ರಾಜೀನಾಮೆ ನೀಡಿದ್ದಾರೆ ಎಂದು ಕೆಪಿಸಿಸಿ ಅಧ್ಯಕ್ಷ ಡಿ ಕೆ ಶಿವಕುಮಾರ್ ಆರೋಪಿಸಿದರು. ನಗರದ ಕ್ವೀನ್ಸ್ ರಸ್ತೆಯ ಕೆಪಿಸಿಸಿ ಕಚೇರಿಯಲ್ಲಿ ಮಾಧ್ಯಮಗೋಷ್ಟಿ ನಡೆಸಿ ಮಾತನಾಡಿದ ಅವರು, ರವೀಂದ್ರನಾಥ್ ಪ್ರಾಮಾಣಿಕ ಅಧಿಕಾರಿ. ಸುಳ್ಳು ದಾಖಲೆ ನೀಡಿದವರ ವಿರುದ್ಧ ನೋಟಿಸ್ ನೀಡಿದ್ದಕ್ಕೆ ಟಾರ್ಗೆಟ್ ಆಗಿದ್ದಾರೆ ಎಂದರು.
ಅಕ್ರಮವನ್ನು ಬಯಲಿಗೆ ತಂದಿದ್ದಕ್ಕೆ ಉದ್ದೇಶಪೂರ್ವಕವಾಗಿ ಅವರನ್ನು ವರ್ಗಾವಣೆ ಮಾಡಲಾಗಿದೆ. ಹೀಗಾಗಿ ಇದರ ಸಮಗ್ರ ತನಿಖೆಯಾಗಬೇಕು. ರವೀಂದ್ರನಾಥ್ ರಾಜೀನಾಮೆ ಅಂಗೀಕರಿಸಬಾರದು ಎಂದು ಸರ್ಕಾರವನ್ನು ಒತ್ತಾಯಿಸಿದರು.
ನಿವೃತ್ತ ಐಪಿಎಸ್ ಅಧಿಕಾರಿಯೊಬ್ಬರ ಸುಳ್ಳು ಜಾತಿ ಪತ್ರ ಸಲ್ಲಿಕೆ ವಿಚಾರ ಮಾತನಾಡಲು ಡಿಕೆಶಿ ನಿರಾಕರಿಸಿದರು. ಯಾರೇ ಆದ್ರೂ ಕ್ರಮ ಜರುಗಿಸಲಿ. ಸುಳ್ಳು ದಾಖಲೆ ನೀಡಿದ 1097 ಕೇಸ್ ಇವೆ. ಇದರ ಬಗ್ಗೆ ತನಿಖೆಯಾಗಬೇಕು. ನ್ಯಾಯದ ಪರ ಹೋರಾಟ ಮಾಡುವವರನ್ನ ಬಿಡಬೇಡಿ. ಇಂತಹ ಅಧಿಕಾರಿಗಳನ್ನು ಕೈಬಿಡಬೇಡಿ ಎಂದು ಸರ್ಕಾರಕ್ಕೆ ಒತ್ತಾಯಿಸಿ ರವೀಂದ್ರನಾಥ್ ಪರ ವಾದ ಮಾಡಿದರು.
ಸಿದ್ದರಾಮಯ್ಯ ಮುಂದಿನ ಸಿಎಂ ಎಂಬ ಜಮೀರ್ ಪ್ರಾರ್ಥನೆ ವಿಚಾರವಾಗಿ ಕೇಳಿದ ಪ್ರಶ್ನೆಗೆ ಡಿಕೆಶಿ ಉತ್ತರಿಸಲು ಹಿಂದೇಟು ಹಾಕಿದಾಗ ವಿಧಾನಪರಿಷತ್ ಪ್ರತಿಪಕ್ಷ ನಾಯಕ ಬಿ ಕೆ ಹರಿಪ್ರಸಾದ್ ಮಾತನಾಡಿ, ಜಮೀರ್ ಹೇಳಿದ್ದು ಅವರ ವೈಯಕ್ತಿಕ ಅಭಿಪ್ರಾಯ. ಸಿಎಂ ಯಾರು ಅನ್ನೋದು ಅವರು ತೀರ್ಮಾನಿಸಲ್ಲ. ಹೈಕಮಾಂಡ್ ಈ ಬಗ್ಗೆ ತೀರ್ಮಾನ ಮಾಡುತ್ತೆ. ಚುನಾವಣೆಗೆ ಇನ್ನೂ ಒಂದು ವರ್ಷ ಕಾಲಾವಧಿ ಇದೆ. ಆಮೇಲೆ ಅವರಿಗೆ ಈ ಮಾತನ್ನು ಹೇಳಲು ತಿಳಿಸಿ. ಸಿದ್ದರಾಮಯ್ಯ ಸಿಎಂ ಆಗಲಿ ಎಂದು ಅವರೊಬ್ಬರೇ ಹೇಳಿದ್ದಾರೆ. ನಾವು 80 ಜನ ಏನೂ ಹೇಳಿಲ್ಲ ಎಂದರು.
ಓದಿ: ಎಂ ಬಿ ಪಾಟೀಲ್- ಸಚಿವ ಅಶ್ವತ್ಥ್ ನಾರಾಯಣ್ ಭೇಟಿ ಬಗ್ಗೆ ನೋ ಕಮೆಂಟ್ಸ್: ಸಿದ್ದರಾಮಯ್ಯ