ಬೆಂಗಳೂರು: ನಮ್ಮ ಪಕ್ಷ ಅಧಿಕಾರದಲ್ಲಿದ್ದಾಗ ಅಕ್ರಮಗಳು ನಡೆದಿದ್ದೇ ಆದಲ್ಲಿ, ಆಗ ಪ್ರತಿಪಕ್ಷ ಸ್ಥಾನದಲ್ಲಿದ್ದ ಬಿಜೆಪಿ ನಾಯಕರು ಏಕೆ ಧ್ವನಿ ಎತ್ತಲಿಲ್ಲ? ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಪ್ರಶ್ನಿಸಿದ್ದಾರೆ. ಕಾಂಗ್ರೆಸ್ ಕಾರ್ಯಕಾರಿ ಸಮಿತಿ ಸದಸ್ಯ ಅಭಿಷೇಕ್ ಮನು ಸಿಂಘ್ವಿ ಅವರ ಜತೆ ಮಾಧ್ಯಮಗೋಷ್ಠಿಯಲ್ಲಿ ಮಾತನಾಡಿದ ಅವರು, ಕಾಂಗ್ರೆಸ್ ಸರ್ಕಾರದ ಅವಧಿಯಲ್ಲಿನ ಅಕ್ರಮಗಳ ದಾಖಲೆ ಬಹಿರಂಗ ಮಾಡುವುದಾಗಿ ಮುಖ್ಯಮಂತ್ರಿಗಳು ಹೇಳಿಕೆ ನೀಡಿರುವ ಕುರಿತು ಉತ್ತರಿಸಿದರು.
"ನಮ್ಮ ಸರ್ಕಾರ ಅಧಿಕಾರದಲ್ಲಿದ್ದಾಗ ಅವರು ವಿರೋಧ ಪಕ್ಷದ ಸ್ಥಾನದಲ್ಲಿ ಕೂತಿದ್ದರು. ಅವರ ಬಳಿ ದಾಖಲೆ ಇದ್ದರೆ ಕಳೆದ ಐದಾರೂ ವರ್ಷಗಳಿಂದ ಸುಮ್ಮನೆ ಇದ್ದದ್ದು ಯಾಕೆ?, ಅವರು ತಮ್ಮ ತಪ್ಪನ್ನು ಮುಚ್ಚಿಕೊಳ್ಳಲು ಈ ರೀತಿ ಹೇಳುತ್ತಿದ್ದಾರೆ. ಅವರು ತಮ್ಮ ಸಮಾಧಾನ ಹಾಗೂ ಖುಷಿಗೆ ಮಾತನಾಡುತ್ತಿರುವಾಗ ನಾವು ಏಕೆ ಬೇಡ ಅನ್ನೋಣ" ಎಂದರು.
ಖ್ಯಾತ ಸಾಹಿತಿ ದೇವನೂರು ಮಹಾದೇವ ಅವರ ಆರ್ಎಸ್ಎಸ್ ಆಳ ಮತ್ತು ಅಗಲ ಪುಸ್ತಕ ಕಾಂಗ್ರೆಸ್ ಪ್ರಾಯೋಜಿತ ಎಂಬ ಬಿಜೆಪಿ ಆರೋಪಕ್ಕೆ ಸಂಬಂಧಿಸಿದ ಪ್ರಶ್ನೆಗೆ ಪ್ರತಿಕ್ರಿಯಿಸಿ, "ದೇವನೂರು ಮಹಾದೇವ ಅವರು ಚಿಂತಕರು, ಹಿರಿಯ ಬರಹಗಾರರು, ನೇರ ನಡೆ, ನುಡಿ ಹಾಗೂ ಬರವಣಿಗೆ ಮೂಲಕ ಹೆಸರು ಮಾಡಿರುವವರು. ಈ ಪುಸ್ತಕದ ವಿಚಾರವಾಗಿ ಅವರನ್ನೇ ಪ್ರಶ್ನೆ ಕೇಳಿ" ಎಂದು ಉತ್ತರಿಸಿದರು.
ರಾಜ್ಯ ಹೈಕೋರ್ಟ್ ನ್ಯಾಯಾಧೀಶರು ತಮ್ಮ ವಿರುದ್ಧದ ಬೆದರಿಕೆ ಕುರಿತು ಹೇಳಿಕೊಂಡಿರುವ ವಿಡಿಯೋ ಹಂಚಿಕೊಂಡ ರಾಹುಲ್ ಗಾಂಧಿ ವಿರುದ್ಧ ದೂರು ದಾಖಲಿಸುವ ಬಗ್ಗೆ ಬಿಜೆಪಿ ನೀಡಿರುವ ಹೇಳಿಕೆಗೆ ಉತ್ತರಿಸಿದ ಅವರು, "ಈ ವಿಡಿಯೋ ಸಾರ್ವಜನಿಕ ವೇದಿಕೆಗಳಲ್ಲಿ ಪ್ರಕಟವಾಗಿದ್ದು, ಅದು ಸಾರ್ವಜನಿಕ ಆಸ್ತಿಯಾಗಿ ಉಳಿದಿದೆ. ಲಕ್ಷಾಂತರ ಜನ ನೋಡಿದ್ದಾರೆ. ಈ ಹಿನ್ನೆಲೆಯಲ್ಲಿ ರಾಹುಲ್ ಗಾಂಧಿ ಅವರು ಸಾಮಾಜಿಕ ಜಾಲತಾಣಗಳಲ್ಲಿ ಹಂಚಿಕೊಂಡು ಈ ವಿಚಾರದ ಗಂಭೀರತೆಯನ್ನು ದೇಶದ ಜನರಿಗೆ ತಿಳಿಸಿದ್ದಾರೆ. ಬಿಜೆಪಿ ನಾಯಕರುಗಳು ಈ ವಿಚಾರದಲ್ಲಿ ಪ್ರಕರಣ ದಾಖಲಿಸಿದರೆ ದಾಖಲಿಸಲಿ, ಆಗ ಮತ್ತಷ್ಟು ಜನರಿಗೆ ಬಿಜೆಪಿ ಸರ್ಕಾರದ ದುರಾಡಳಿತ, ಬಿಜೆಪಿಯ ಸ್ಥಿತಿ ಏನು?, ನ್ಯಾಯಾಂಗ ವ್ಯವಸ್ಥೆ ಮೇಲೆ ಬಿಜೆಪಿ ಹೇಗೆ ದಾಳಿ ನಡೆಸುತ್ತಿದೆ ಎಂಬುದು ತಿಳಿಯುತ್ತದೆ. ಅವರು ಪ್ರಕರಣ ದಾಖಲಿಸಲಿ, ಕಾನೂನು ತನ್ನ ಕ್ರಮ ಕೈಗೊಳ್ಳಲಿದೆ" ಎಂದು ಉತ್ತರಿಸಿದರು.
ಇದನ್ನೂ ಓದಿ: 'ಬಿಜೆಪಿ ಸರ್ಕಾರದ ಬೊಕ್ಕಸದಲ್ಲಿ ಹಣವಿದೆ, ಬೊಮ್ಮಾಯಿ ಸರ್ಕಾರ ಹೆಚ್ಚು ತೆರಿಗೆ ಸಂಗ್ರಹಿಸಿದೆ'