ಬೆಂಗಳೂರು: ವಸತಿ ಮಹಾಮಂಡಲದ ಚುನಾವಣೆಯಲ್ಲಿ ಭಾಗವಹಿಸಲು ಮುಂಬೈನಿಂದ ನಗರಕ್ಕೆ ಆಗಮಿಸಿರುವ ಕಾಂಗ್ರೆಸ್ ಅತೃಪ್ತ ಶಾಸಕ ಎಸ್.ಟಿ. ಸೋಮಶೇಖರ್ ಅವರನ್ನು ಭೇಟಿಯಾಗುವ ಪ್ರಯತ್ನದಲ್ಲಿ ಸಚಿವ ಡಿ.ಕೆ. ಶಿವಕುಮಾರ್ ಅವರಿಗೆ ನಿರಾಶೆಯಾಗಿದೆ.
ನಿನ್ನೆ ಮುಂಬೈಗೆ ತೆರಳಿದ್ದ ಡಿ.ಕೆ.ಶಿವಕುಮಾರ್, ಅತೃಪ್ತರ ಮನವೊಲಿಸಲು ಪ್ರಯತ್ನಿಸಿದ್ದರು. ಬಂಡಾಯ ಶಾಸಕರು ಡಿಕೆಶಿಗೆ ಮನ್ನಣೆ ನೀಡದ ಕಾರಣ ಮನವೊಲಿಸಲು ಸಾಧ್ಯವಾಗಿರಲಿಲ್ಲ. ನಿನ್ನೆ ರಾತ್ರಿ ನಗರಕ್ಕೆ ಆಗಮಿಸಿದ ಎಸ್.ಟಿ. ಸೋಮಶೇಖರ್ ಅವರನ್ನು ಹೇಗಾದರೂ ಮನವೊಲಿಸಬೇಕೆಂಬ ಉದ್ದೇಶದಿಂದ ಡಿಕೆಶಿ ನೇರವಾಗಿ ಸೋಮಶೇಖರ್ ನಿವಾಸಕ್ಕೆ ತೆರಳಿ ಕಾದು ಕುಳಿತಿದ್ದರು. ಈ ವಿಚಾರ ತಿಳಿದ ಸೋಮಶೇಖರ್ ಬೇರೆಡೆ ಅಜ್ಞಾತ ಸ್ಥಳಕ್ಕೆ ತೆರಳಿದರು. ಬಹಳ ಹೊತ್ತು ಕಾದು ಕುಳಿತಿದ್ದ ಡಿಕೆಶಿ, ತಮ್ಮ ಮನೆಯಿಂದ ತೆರಳಿದ ನಂತರವೇ ಸೋಮಶೇಖರ್ ನಿವಾಸಕ್ಕೆ ವಾಪಸಾದರು ಎಂದು ಹೇಳಲಾಗ್ತಿದೆ.
ಅತೃಪ್ತರನ್ನು ಸಂಪರ್ಕಿಸಿ ಮನವೊಲಿಸುವ ಹರಸಾಹಸವನ್ನು ಡಿ.ಕೆ. ಶಿವಕುಮಾರ್ ನಡೆಸಿದ್ದು, ನಿನ್ನೆ ರಾತ್ರಿ ಒಂದು ಗಂಟೆಗೂ ಹೆಚ್ಚು ಕಾಲ ಕಾದು ಕಾದು ಸುಸ್ತಾಗಿ ವಾಪಸ್ ತೆರಳಿದರು. ಬಳಿಕ ನಿವಾಸಕ್ಕೆ ಬಂದು ಅಲ್ಲಿಂದ ರಾತ್ರಿಯೇ ತೆರಳಿರುವ ಸೋಮಶೇಖರ್ ಎಲ್ಲಿದ್ದಾರೆ ಎಂಬ ಮಾಹಿತಿ ಇಲ್ಲ. ಯಾರ ಸಂಪರ್ಕಕ್ಕೂ ಸಿಗದ ಅವರು ಎಲ್ಲಿದ್ದಾರೆ ಎನ್ನುವ ಮಾಹಿತಿಯೂ ಇಲ್ಲ.
ಎಂಬಿಟಿ ಮತ್ತು ಸುಧಾಕರ್ ಅವರನ್ನು ಭೇಟಿಯಾಗ್ತಾರಾ?: ನಿನ್ನೆ ರಾಜೀನಾಮೆ ನೀಡಿರುವ ವಸತಿ ಸಚಿವ ಎಂಟಿಬಿ ನಾಗರಾಜ್ ಹಾಗೂ ಶಾಸಕ ಡಾ. ಕೆ. ಸುಧಾಕರ್ ಅವರನ್ನು ಭೇಟಿ ಮಾಡಿ ಚರ್ಚಿಸಲಿದ್ದಾರೆ. ರಾಜೀನಾಮೆ ನೀಡಿದ ನಂತರ ನಡೆದ ದೊಡ್ಡ ಹೈಡ್ರಾಮಾದ ಮಾಹಿತಿ ಪಡೆದಿರುವ ಸೋಮಶೇಖರ್ ಇಂದು ಅವರನ್ನು ಭೇಟಿ ಮಾಡಿ ಸಮಾಲೋಚಿಸುವ ಸಾಧ್ಯತೆಯಿದೆ. ಮುಂದಿನ ನಿರ್ಧಾರದ ಕುರಿತು ಕೂಡ ಅವರು ಮಾತನಾಡಲಿದ್ದಾರೆ ಎನ್ನಲಾಗ್ತಿದೆ.
ಹುಡುಕಾಟ ಮುಂದುವರಿಕೆ: ಇಂದು ಕೂಡ ಎಸ್.ಟಿ. ಸೋಮಶೇಖರ್ ಅವರನ್ನು ಹುಡುಕುವ ಯತ್ನವನ್ನು ಕಾಂಗ್ರೆಸ್ ನಾಯಕರು ಮುಂದುವರಿಸಿದ್ದಾರೆ. ಅಜ್ಞಾತ ಸ್ಥಳದಲ್ಲಿರುವ ಸೋಮಶೇಖರ್ ಅವರನ್ನು ಪತ್ತೆ ಮಾಡಿ, ಮಾತುಕತೆ ನಡೆಸಲೇಬೇಕು. ಅವರ ಮನವೊಲಿಸುವ ಯತ್ನ ಡಿಕೆಶಿ ಮಾಡಲಿದ್ದಾರೆ ಎಂದು ಎಂದು ಹೇಳಲಾಗ್ತಿದೆ.