ಬೆಂಗಳೂರು: ಸಿಲಿಕಾನ್ ಸಿಟಿಯ ಪ್ರತಿಷ್ಠಿತ ಕಾಲೇಜು ವಿದ್ಯಾರ್ಥಿಗಳ ಭಾವಚಿತ್ರಗಳನ್ನು ಅಶ್ಲೀಲವಾಗಿ ಎಡಿಟ್ ಮಾಡಿ ಜಾಲತಾಣಗಳಲ್ಲಿ ಅಪ್ಲೋಡ್ ಮಾಡುತ್ತಿದ್ದ ಆರೋಪಿಗಳನ್ನು ಸಿಸಿಬಿ ಪೊಲೀಸರು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.
ಅಜಯ್ ಹಾಗೂ ವಿಶ್ವಕ್ ಬಂಧಿತ ಆರೋಪಿಗಳಾಗಿದ್ದು, ಮದುವೆಯಾಗದ ಕಾರಣದಿಂದ ಖಿನ್ನತೆ ಉಂಟಾಗಿ ಈ ರೀತಿಯ ಕೆಲಸ ಮಾಡಿದ್ದಾರೆ ಎಂದು ಹೇಳಲಾಗಿದೆ.
ಎರಡು ದಿನಗಳ ಹಿಂದೆ ನಗರದ ಪ್ರಸಿದ್ಧ ಕಾಲೇಜಿನ ವಿದ್ಯಾರ್ಥಿನಿಯರ ಹಾಗೂ ಉಪನ್ಯಾಸಕರ ಸೋಗಿನಲ್ಲಿ ಖ್ಯಾತ ಪೋಷಕ ನಟನ ಮಗಳ ಹಳೇ ಫೋಟೋಗಳನ್ನು ಇನ್ಸ್ಟಾಗ್ರಾಂ, ಫೇಸ್ಬುಕ್ ಹಾಗೂ ಇತರ ಸಾಮಾಜಿಕ ಜಾಲತಾಣಗಳಿಂದ ಕದ್ದು, ಅಶ್ಲೀಲವಾಗಿ ಎಡಿಟ್ ಮಾಡಿ ಪೋರ್ನ್ ಜಾಲತಾಣದಲ್ಲಿ ಅಪ್ಲೋಡ್ ಮಾಡಿದ್ದರು ಎನ್ನಲಾಗಿದೆ.
ಇದರ ಬೆನ್ನಲ್ಲೇ ಸೈಬರ್ ಕ್ರೈಂ ಪೊಲೀಸ್ ಠಾಣೆಯಲ್ಲಿ ಒಟ್ಟು 7 ಪ್ರಕರಣಗಳು ದಾಖಲಾಗಿದ್ದವು. ಈ ಬಗ್ಗೆ ಎಚ್ಚೆತ್ತುಕೊಂಡ ಡಿಸಿಪಿ ಕುಲದೀಪ್ ಜೈನ್ ಅವರ ತಂಡ ಆರೋಪಿಗಳನ್ನು ಬಂಧಿಸಿ, ಹೆಚ್ಚಿನ ವಿಚಾರಣೆಗೆ ಒಳಪಡಿಸಿದೆ.
ಬಂಧಿತರನ್ನು ವಿಚಾರಣೆಗೆ ಒಳಪಡಿಸಿದಾಗ ಇಬ್ಬರು ಆರೋಪಿಗಳ ಪೈಕಿ ಅಜಯ್ ಪ್ರಮುಖ ಆರೋಪಿಯಾಗಿದ್ದು, ಈತನಿಗೆ 35 ವರ್ಷ ದಾಟಿದರೂ ಮದುವೆಯಾಗದ ಕಾರಣದಿಂದ ಖಿನ್ನತೆಗೆ ಒಳಗಾಗಿ ಈ ರೀತಿಯ ದುಷ್ಕೃತ್ಯ ಎಸೆಗಿರುವುದಾಗಿ ತಿಳಿದು ಬಂದಿದೆ. ಇದೇ ವೇಳೆ ಅಜಯ್ ಪ್ರತಿಷ್ಠಿತ ಕಾಲೇಜಿನಲ್ಲಿ ವ್ಯಾಸಂಗ ಮಾಡುತ್ತಿರುವ ವಿಶ್ವಕ್ ಜೊತೆಯಾಗಿ ಫೋಟೋಗಳನ್ನು ಅಶ್ಲೀಲವಾಗಿ ಎಡಿಟ್ ಮಾಡುತ್ತಿದ್ದರೆಂದು ತನಿಖೆಯಲ್ಲಿ ಬಯಲಾಗಿದೆ.
ಲಾಕ್ಡೌನ್ ಸಂದರ್ಭದಲ್ಲಿ ಈ ಇಬ್ಬರೂ ಆರೋಪಿಗಳು ಒಟ್ಟಿಗೆ ಇದ್ದು, ಇನ್ನೂ ಬಹಳಷ್ಟು ಚಿತ್ರಗಳನ್ನು ಸಾಮಾಜಿಕ ಜಾಲತಾಣಕ್ಕೆ ಅಪ್ಲೋಡ್ ಮಾಡಿರುವ ಸಾಧ್ಯತೆ ಹಿನ್ನೆಲೆ ಇಬ್ಬರ ಮೊಬೈಲ್ ಹಾಗೂ ಲ್ಯಾಪ್ಟಾಪ್ಗಳನ್ನು ವಶಪಡಿಸಿಕೊಳ್ಳಲಾಗಿದೆ.