ಬೆಂಗಳೂರು : ನಗರದ ದಾಸರಹಳ್ಳಿ ವಾರ್ಡ್‌ನ ರಸ್ತೆಗಳ ಅಭಿವೃದ್ಧಿಗಾಗಿ ಒಂದು ತಿಂಗಳ ಒಳಗೆ 110.75 ಕೋಟಿ ರೂ. ಹಾಗೂ ಎರಡು ತಿಂಗಳ ಒಳಗೆ 405.96 ಕೋಟಿ ರೂ.ಗಳನ್ನು ಬಿಬಿಎಂಪಿಗೆ ಬಿಡುಗಡೆ ಮಾಡುವ ಸಂಬಂಧ ಪರಿಶೀಲಿಸುವಂತೆ ಹೈಕೋರ್ಟ್ ರಾಜ್ಯ ಸರ್ಕಾರಕ್ಕೆ ನಿರ್ದೇಶಿಸಿದೆ. ದಾಸರಹಳ್ಳಿ ವಾರ್ಡ್‌ನ ರಸ್ತೆಗಳ ದುರಸ್ತಿ ಹಾಗೂ ಮೂಲಸೌಕರ್ಯ ಕೋರಿ ವಕೀಲ ಅಶ್ವತ್ಥ್ ನಾರಾಯಣ ಚೌಧರಿ ಸಲ್ಲಿಸಿರುವ ಸಾರ್ವಜನಿಕ ಹಿತಾಸಕ್ತಿ ಅರ್ಜಿಯನ್ನು ಮುಖ್ಯ ನ್ಯಾಯಮೂರ್ತಿ ಎ.ಎಸ್ ಓಕ ನೇತೃತ್ವದ ವಿಭಾಗೀಯ ಪೀಠ ವಿಚಾರಣೆ ನಡೆಸಿತು. ಈ ವೇಳೆ, ದಾಸರಹಳ್ಳಿ ವಲಯದ ಕಾರ್ಯ ನಿರ್ವಾಹಕ ಇಂಜಿನಿಯರ್ ಕೆ. ಸೈಯ್ಯದ್ ಅತಿಖುರ್ ರಹ್ಮಾನ್ ಇದ್ರಸ್ ಅವರ ಪ್ರಮಾಣಪತ್ರವನ್ನು ಬಿಬಿಎಂಪಿ ಪರ ವಕೀಲರು ಪೀಠಕ್ಕೆ ಸಲ್ಲಿಸಿದರು.
ಪ್ರಮಾಣಪತ್ರ ಪರಿಶೀಲಿಸಿದ ಪೀಠ, ಪಾಲಿಕೆ ಸಲ್ಲಿಸಿರುವ ಮನವಿ ಪರಿಗಣಿಸಿ ಮುಂದಿನ ಒಂದು ತಿಂಗಳ ಒಳಗೆ 110.75 ಕೋಟಿ ರೂ. ಹಾಗೂ ಎರಡು ತಿಂಗಳ ಒಳಗೆ 405.96 ಕೋಟಿ ರೂ.ಗಳನ್ನು ಬಿಬಿಎಂಪಿಗೆ ಬಿಡುಗಡೆ ಮಾಡುವ ಬಗ್ಗೆ ಪರಿಶೀಲಿಸಿ ನಿರ್ಧಾರ ಮಾಡಬೇಕು ಎಂದು ಸರ್ಕಾರಕ್ಕೆ ನಿರ್ದೇಶಿಸಿ, ವಿಚಾರಣೆಯನ್ನು ಜುಲೈ 27ಕ್ಕೆ ಮುಂದೂಡಿತು.
ಪ್ರಮಾಣ ಪತ್ರದ ಸಾರಾಂಶ
ಪಾಲಿಕೆ ವ್ಯಾಪ್ತಿಗೆ ಹೊಸದಾಗಿ ಸೇರ್ಪಡೆಗೊಂಡ 110 ಹಳ್ಳಿಗಳಲ್ಲಿ ದಾಸರಹಳ್ಳಿ ವಲಯವೂ ಇದ್ದು, ಅಲ್ಲಿ ಒಳಚರಂಡಿ ನಿರ್ಮಾಣ, ರಸ್ತೆಗಳ ಡಾಂಬರೀಕರಣ ಇನ್ನಿತರ ಕಾಮಗಾರಿಗಳನ್ನು ನಡೆಸಲಾಗುತ್ತಿದೆ. ಈ ಕಾಮಗಾರಿಗಳಿಗಾಗಿ 405.96 ಕೋಟಿ ರೂ. ಬಿಡುಗಡೆ ಮಾಡುವಂತೆ 2020ರ ಸೆ.29ರಂದು ಪಾಲಿಕೆ ಆಯುಕ್ತರು ನಗರಾಭಿವೃದ್ಧಿ ಇಲಾಖೆಯ ಹೆಚ್ಚುವರಿ ಮುಖ್ಯ ಕಾರ್ಯದರ್ಶಿಗೆ ಮನವಿ ಸಲ್ಲಿಸಿದ್ದಾರೆ.
ಇದನ್ನೂ ಓದಿ: ಕಟ್ಟಡ ನಿರ್ಮಿಸುವವರಿಗೆ ಸಿಹಿಸುದ್ದಿ; ಬಿಲ್ಡಿಂಗ್ ನಕ್ಷೆ ಮಂಜೂರಾತಿ ದರ ಪರಿಷ್ಕರಣೆ
ಇದಲ್ಲದೇ, 2021ರ ಜ.11ರಂದು ಪಾಲಿಕೆ ವತಿಯಿಂದ ಮತ್ತೊಂದು ಮನವಿ ಪತ್ರ ಬರೆಯಲಾಗಿದ್ದು, ದಾಸರಹಳ್ಳಿ ವಲಯದ ಕಾಮಗಾರಿಗಳಿಗೆ ಅಗೆಯಲಾಗಿರುವ ರಸ್ತೆಗಳ ದುರಸ್ತಿ ಹಾಗೂ ಡಾಂಬರೀಕರಣಕ್ಕಾಗಿಯೇ 110.75 ಕೋಟಿ ರೂ.ಗಳನ್ನು ಬಿಡುಗಡೆ ಮಾಡುವಂತೆ ಕೋರಲಾಗಿದೆ. ಆದರೆ ಸರ್ಕಾರದಿಂದ ಇನ್ನೂ ಹಣ ಬಿಡುಗಡೆಯಾಗಿಲ್ಲ ಎಂದು ಪ್ರಮಾಣಪತ್ರದಲ್ಲಿ ತಿಳಿಸಲಾಗಿದೆ.