ಬೆಂಗಳೂರು: ಡಿ.ಜೆ.ಹಳ್ಳಿ ಮತ್ತು ಕೆ.ಜಿ.ಹಳ್ಳಿ ಗಲಭೆ ಪ್ರಕರಣಕ್ಕೆ ಸಂಬಂಧಿಸಿದಂತೆ ಸಿಸಿಬಿ ಪೊಲೀಸರು ಆರೋಪಿ ಸೈಯದ್ ಸಮೀವುದ್ದೀನ್ನನ್ನು ತೀವ್ರ ವಿಚಾರಣೆಗೆ ಒಳಪಡಿಸಿದ್ದಾರೆ. ಸಮೀವುದ್ದೀನ್ ಟ್ರಸ್ಟ್ ಅನ್ನು ಹೊಂದಿದ್ದು, ಅದಕ್ಕೆ ವಿದೇಶಗಳಿಂದ ಕೋಟ್ಯಂತರ ರೂ. ಫಂಡ್ ಬಂದಿರುವ ವಿಚಾರ ತನಿಖೆಯಲ್ಲಿ ತಿಳಿದು ಬಂದಿದೆ.
ಹೆಚ್ಬಿಆರ್ ಲೇಔಟ್ನಲ್ಲಿ ನಾರಿ ಎಂಬ ಎನ್ಜಿಒ ಹೊಂದಿದ್ದು, ಅದನ್ನು ತನ್ನ ಪತ್ನಿ ಸಮ್ರೂಮ್ ಹೆಸರಿನಲ್ಲಿ ನೋಂದಣಿ ಮಾಡಿಸಿದ್ದಾನೆ. ವಿವಿಧ ಕೃತ್ಯಗಳನ್ನು ಎಸಗಲು ಕೋಟಿ, ಕೋಟಿ ಹಣ ಹರಿದು ಬಂದಿದೆ. ಹಾಗೆ ಇಲ್ಲಿ ಬಹಳ ಮಂದಿಗೆ ತರಬೇತಿ ಸಹ ನೀಡಲಾಗುತ್ತಿತ್ತು. ಮತ್ತು ಸಭೆಗಳನ್ನು ನಡೆಸಲಾಗುತ್ತಿತ್ತು ಎಂಬ ವಿಚಾರ ಗೊತ್ತಾಗಿದೆ.
ಮಡಿಕೇರಿ ಮೂಲದ ಸಮೀವುದ್ದೀನ್ ಬೆಂಗಳೂರಿನಲ್ಲಿ ಕೆಲವರ ಸಂಪರ್ಕ ಬೆಳೆಸಿದ್ದ. ಅಲ್ಲದೇ, ಡಿ.ಜೆ.ಹಳ್ಳಿ ಗಲಭೆಗೆ ಬೇಕಾದ ಎಲ್ಲ ವ್ಯವಸ್ಥೆ ಮಾಡಿದ್ದ ಮತ್ತು ಮೊದಲೇ ವ್ಯವಸ್ಥಿತ ಸಂಚು ರೂಪಿಸಿದ್ದ ಎಂಬುದು ತನಿಖೆಯಲ್ಲಿ ಗೊತ್ತಾಗಿದೆ. ಸದ್ಯ ಟ್ರಸ್ಟ್ಗೆ ಬಂದಿರುವ ಹಣದ ಮೂಲವನ್ನು ಪತ್ತೆ ಹಚ್ಚಲು ಸಿಸಿಬಿ ಮುಂದಾಗಿದೆ.
ಮತ್ತೊಂದೆಡೆ ಬಂಧಿತ ಆರೋಪಿಗಳ ಪೋಷಕರು ಠಾಣೆ ಬಳಿ ಆಕ್ರಂದನ ವ್ಯಕ್ತಪಡಿಸಿದ್ದಾರೆ. ಕಳೆದ ರಾತ್ರಿ ಕಾರ್ಯಾಚರಣೆ ನಡೆಸಿ 15 ಆರೋಪಿಗಳನ್ನು ಪೊಲೀಸರು ಬಂಧಿಸಿದ್ದರು. ಬಂಧಿತರನ್ನು ಠಾಣೆಯಿಂದ ಮೆಡಿಕಲ್ ತಪಾಸಣೆಗೆ ಕರೆದೊಯ್ದಿದ್ದರು. ಈ ವೇಳೆ, ತಮ್ಮ ಮಕ್ಕಳನ್ನು ನೋಡಿ ತಾಯಂದಿರು ಕಣ್ಣೀರು ಹಾಕಿದ್ದಾರೆ. ನಮ್ಮ ಮಕ್ಕಳನ್ನು ಬಿಟ್ಟು ಬಿಡಿ ಎಂದು ಗೋಗೆರೆದಿದ್ದಾರೆ.