ಬೆಂಗಳೂರು: ಕಾಮಾಕ್ಷಿಪಾಳ್ಯ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಟ್ರ್ಯಾಕ್ಟರ್ ಕಳ್ಳತನವಾಗಿದ್ದು, ಈ ಟ್ರ್ಯಾಕ್ಟರ್ ಕಳ್ಳರನ್ನು ಹಿಡಿದಾಗ ಹಲವಾರು ಪ್ರಕರಣಗಳು ಪತ್ತೆಯಾಗಿವೆ.
ಕಾಮಾಕ್ಷಿಪಾಳ್ಯ ಠಾಣಾ ಇನ್ಸ್ಪೆಕ್ಟರ್ ನೇತೃತ್ವದ ತಂಡ ಟ್ರ್ಯಾಕ್ಟರ್ ಕಳ್ಳತನ ವಿಚಾರವಾಗಿ ಮೊದಲು ಬೋರೇಗೌಡ ಎಂಬಾತನನ್ನು ಬಂಧಿಸಿದ್ದರು. ಆತನ ವಿಚಾರಣೆ ನಡೆಸಿದಾಗ ಇನ್ನುಳಿದ ಐವರ ಬಗ್ಗೆ ಸುಳಿವು ಸಿಕ್ಕಿದ್ದು, ಈ 5 ಆರೋಪಿಗಳನ್ನು ಬಂಧಿಸುವಲ್ಲಿ ಪೊಲೀಸರು ಯಶಸ್ವಿಯಾಗಿದ್ದಾರೆ.
ಆನಂದ, ಯಾಕೂಬ್ ಖಾನ್, ಲಿಂಗಪ್ಪ, ಕೆ.ಲೋಕೇಶ್, ವಿ.ಲೋಕೇಶ್ ಬಂಧಿತ ಆರೋಪಿಗಳು. ಇವರಿಂದ 1 ಕೋಟಿ 46 ಲಕ್ಷ 40 ಸಾವಿರ ರೂ. ಮೌಲ್ಯದ 26 ಟ್ರ್ಯಾಕ್ಟರ್ಗಳು, 5 ಮಾರುತಿ ಓಮಿನಿ, 8 ದ್ವಿಚಕ್ರ ವಾಹನಗಳನ್ನು ವಶಪಡಿಸಿಕೊಳ್ಳಲಾಗಿದೆ.
ಆರೋಪಿ ವಿ.ಲೋಕೇಶ ಮಂಡ್ಯದ ನಿವಾಸಿ ಆನಂದ್ ಎಂಬುವವರ ಬಳಿ ಕಳವು ಮಾಡಿದ್ದ ಟ್ರ್ಯಾಕ್ಟರ್ಗಳ ಇಂಜಿನ್ ಹಾಗೂ ನಂಬರ್ಗಳನ್ನು ಬದಲಾಯಿಸುತ್ತಿದ್ದ. ಬಳಿಕ ಎಲೆಕ್ಟ್ರಾನಿಕ್ ಸಿಟಿ ಆರ್ಟಿಒ ಕಚೇರಿ ಸೇರಿದಂತೆ ವಿವಿಧ ಆರ್ಟಿಒ ಕಚೇರಿಗಳಲ್ಲಿ ಹೊಸದಾಗಿ ವಾಹನಗಳಿಗೆ ನಕಲಿ ಸೇಲ್ ಸರ್ಟಿಫಿಕೇಟ್ಗಳನ್ನು ಸೃಷ್ಟಿಸುತ್ತಿದ್ದರು.
ಓದಿ: ಬೆಳಗಾವಿಯ ಚೆನ್ನಮ್ಮ ವೃತ್ತದಲ್ಲಿದ್ದ ಕನ್ನಡ ಧ್ವಜಸ್ತಂಭ ಧ್ವಂಸ
ಹೀಗೆ ನಕಲಿ ದಾಖಲೆ ಸೃಷ್ಟಿಸಿ ಮಂಡ್ಯ, ತುಮಕೂರು, ಮೈಸೂರು ಸೇರಿದಂತೆ ವಿವಿಧ ರೈತರಿಗೆ ಟ್ರ್ಯಾಕ್ಟರ್ಗಳನ್ನು ಮಾರಾಟ ಮಾಡುತ್ತಿದ್ದರು. ಸದ್ಯ ಕಾರ್ಯಾಚರಣೆ ನಡೆಸಿದ ಪೊಲೀಸರಿಗೆ 30 ಸಾವಿರ ನಗದು ಬಹುಮಾನ ಘೋಷಿಸಿ ನಗರ ಪೊಲೀಸ್ ಆಯುಕ್ತ ಕಮಲ್ ಪಂತ್ ಆದೇಶ ಹೊರಡಿಸಿದ್ದಾರೆ.