ಬೆಂಗಳೂರು: ಮಕ್ಕಳ ಟೆಸ್ಟಿಂಗ್ ಹೆಚ್ಚು ಮಾಡುತ್ತಿದ್ದೇವೆ. ಕೋವಿಡ್ ಪಾಸಿಟಿವ್ ಕೇಸ್ ಬಂದವರ ಮನೆಯ ಮಕ್ಕಳನ್ನು ಪರೀಕ್ಷೆ ಮಾಡುತ್ತೇವೆ. ಪಾಲಿಕೆ ವ್ಯಾಪ್ತಿಯಲ್ಲಿ ಮಕ್ಕಳಿಗೆ ಟೆಸ್ಟಿಂಗ್ ಅನ್ನು ಶೇ. 50ರಷ್ಟು ಜಾಸ್ತಿ ಮಾಡಿದ್ದೇವೆ ಎಂದು ಬಿಬಿಎಂಪಿ ಮುಖ್ಯ ಆಯುಕ್ತ ಗೌರವ್ ಗುಪ್ತ ತಿಳಿಸಿದರು.
ಬಿಬಿಎಂಪಿ ಮುಖ್ಯ ಆಯುಕ್ತ ಗೌರವ ಗುಪ್ತ ಇಂದು ಪಾಲಿಕೆ ಕೇಂದ್ರ ಕಚೇರಿಯಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿ, ಈ ಬಗ್ಗೆ ಮಾಹಿತಿ ನೀಡಿದರು. ನೈಟ್ ಕರ್ಫ್ಯೂ ಜಾರಿಯಲ್ಲಿದ್ದು, 9 ಗಂಟೆ ಒಳಗಡೆ ಎಲ್ಲ ಶಾಪ್ಗಳನ್ನೂ ಕ್ಲೋಸ್ ಮಾಡಬೇಕು.
ಈ ಬಗ್ಗೆ ಮುಖ್ಯಮಂತ್ರಿಗಳು, ಪೊಲೀಸ್ ಅಧಿಕಾರಿಗಳು ಕಠಿಣ ನಿರ್ಧಾರ ತೆಗೆದುಕೊಳ್ಳಲಿ ಎಂದು ತಿಳಿಸಿದರು. ಮುಂದಿನ ದಿನಗಳಲ್ಲಿ ನಗರದಲ್ಲಿ ಯಾರು ರಾತ್ರಿ 9 ಗಂಟೆಯ ಮೇಲೆ ಶಾಪ್ ಓಪನ್ ಮಾಡುತ್ತಾರೋ ಅವರ ವಿರುದ್ಧ ಕಠಿಣ ಕ್ರಮ ಜರಗಿಸುತ್ತೇವೆ ಎಂದು ಎಚ್ಚರಿಕೆ ನೀಡಿದರು.
ಕಟ್ಟುನಿಟ್ಟಿನ ಕ್ರಮ:
ಪಾಲಿಕೆ ವ್ಯಾಪ್ತಿಯಲ್ಲಿ ಬಾರ್ ಅಂಡ್ ರೆಸ್ಟೋರೆಂಟ್ ಅನ್ನು ರಾತ್ರಿ 7 ಗಂಟೆಗೆ ಕ್ಲೋಸ್ ಮಾಡುವ ಬಗ್ಗೆ ಯಾವುದೇ ಚರ್ಚೆ ನಡೆದಿಲ್ಲ. ಮುಂಬರುವ ದಿನಗಳಲ್ಲಿ ಹಬ್ಬಗಳು ಇವೆ. ಹೀಗಾಗಿ ನಾವು ಕೊರೊನಾ ಎಲ್ಲಿಂದ ಹೆಚ್ಚು ಹರಡುತ್ತದೆ ಎಂಬುದನ್ನು ಸಹ ಚೆಕ್ ಮಾಡುತ್ತಿದ್ದೇವೆ. ಹೆಚ್ಚಿನ ಪ್ರಕರಣಗಳು ಹೊರವಲಯದಿಂದ ದಾಖಲಾಗುತ್ತಿದೆ. ಮಹದೇವಪುರ, ಬೊಮ್ಮನಹಳ್ಳಿ ಸೇರಿ ಕೆಲ ಪ್ರದೇಶಗಳಲ್ಲಿ ಇನ್ನಷ್ಟು ಕಟ್ಟುನಿಟ್ಟಿನ ಕ್ರಮ ಕೈಗೊಳ್ಳುತ್ತೇವೆ ಎಂದರು.
ಪಾಲಿಕೆ ವ್ಯಾಪ್ತಿಯಲ್ಲಿ ಲಸಿಕೆ ಕೊರತೆ:
ಲಸಿಕೆ ಅಭಾವ ವಿಚಾರವಾಗಿ ಕೇಳಿದೆ ಪ್ರಶ್ನೆಗೆ, ನಿಗದಿ ಪಡಿಸಿದ ಗುರಿಯಷ್ಟು ಕೊರೊನಾ ಲಸಿಕೆ ಬಿಬಿಎಂಪಿಗೆ ಸಿಗುತ್ತಿಲ್ಲ. ಜನಸಂಖ್ಯೆಗೆ ಅನುಸಾರವಾಗಿ ಲಸಿಕೆ ಬೇಕಿದೆ. ಆದರೆ, ಸಿಟಿಯಲ್ಲಿ ಶೇ. 70 ರಷ್ಟು ಜನರು ಲಸಿಕೆ ಪಡೆದುಕೊಂಡಿದ್ದಾರೆ. ಎರಡನೇಯ ಡೋಸ್ ಲಸಿಕೆ ಕೂಡ ಪಡೆಯುತ್ತಿದ್ದಾರೆ. ಎಲ್ಲಿ ಜನರು ಲಸಿಕೆಗಾಗಿ ಕ್ಯೂ ನಿಂತಿದ್ದಾರೆ ಎಂಬುದನ್ನು ಪಾಲಿಕೆ ಗಮನಕ್ಕೆ ತನ್ನಿ ಎಂದು ಕೇಳಿಕೊಂಡರು.
ಇದನ್ನೂ ಓದಿ: ರಾಜ್ಯದಲ್ಲಿಂದು 1298 ಮಂದಿಗೆ ಕೋವಿಡ್ ದೃಢ; 32 ಸೋಂಕಿತರು ಬಲಿ
ನಮಗೆ ದಿನಕ್ಕೆ 30 ಸಾವಿರ ಲಸಿಕೆ ಸಿಗುತ್ತಿದೆ. ನಾವು ಕನಿಷ್ಠ ಶೇ. 60ರಷ್ಟು ಜಾಸ್ತಿ ಮಾಡಿದರೆ ಒಳ್ಳೆಯದು. ಸೆಕೆಂಡ್ ಡೋಸ್ ಪಡೆಯುವವರ ಸಂಖ್ಯೆ ಕ್ರಮೇಣ ಜಾಸ್ತಿ ಆಗುತ್ತಿದೆ. ಹೀಗಾಗಿ ಸರ್ಕಾರದ ಮುಂದೆ ಲಸಿಕೆಗೆ ಬೇಡಿಕೆ ಇಟ್ಟಿದ್ದೇವೆ. ದಿನಕ್ಕೆ ಕನಿಷ್ಠ 1 ಲಕ್ಷ ಡೋಸ್ ಲಸಿಕೆ ಬೇಕು ಎಂದು ತಿಳಿಸಿದರು.