ಬೆಂಗಳೂರು : ಬಿಬಿಎಂಪಿ ಶಾಲೆ-ಕಾಲೇಜುಗಳ ವಿದ್ಯಾರ್ಥಿಗಳು, ಶಿಕ್ಷಕರು ಹಾಗೂ ಸಿಬ್ಬಂದಿಗೆ ಕಡ್ಡಾಯವಾಗಿ ಕೋವಿಡ್ ಟೆಸ್ಟ್ ನಡೆಸಲು ಆಯುಕ್ತರು ಸೂಚಿಸಿರುವ ಹಿನ್ನೆಲೆ ಸೋಮವಾರದಿಂದ ಸಾಮೂಹಿಕ ಕೊರೊನಾ ಪರೀಕ್ಷೆ ಆರಂಭವಾಗಿದೆ.
ಬಿಬಿಎಂಪಿಯ 33 ಹೈಸ್ಕೂಲ್, 15 ಪ್ರಾಥಮಿಕ ಶಾಲೆ, 90 ನರ್ಸರಿಗಳು, 14 ಪಿಯು ಕಾಲೇಜುಗಳು ಹಾಗೂ 4 ಡಿಗ್ರಿ ಕಾಲೇಜುಗಳಲ್ಲಿ ಒಟ್ಟು 13,839 ವಿದ್ಯಾರ್ಥಿಗಳಿದ್ದಾರೆ. ಈ ಎಲ್ಲಾ ವಿದ್ಯಾರ್ಥಿಗಳಿಗೂ 15 ದಿನಗಳಿಗೊಮ್ಮೆ ಕೋವಿಡ್ ಪರೀಕ್ಷೆ ನಡೆಸುವಂತೆ ಸೂಚಿಸಲಾಗಿದೆ. ಹೀಗಾಗಿ, ಎಲ್ಲಾ ವಿದ್ಯಾರ್ಥಿಗಳು ಹಾಗೂ ಸಿಬ್ಬಂದಿಗೆ ಟೆಸ್ಟ್ ಮಾಡಲಾಗುತ್ತಿದೆ.
ಕ್ಲೀವ್ ಲ್ಯಾಂಡ್ ಟೌನ್ ಕಾಲೇಜಿನ 110 ವಿದ್ಯಾರ್ಥಿಗಳಿಗೆ ಸೋಮವಾರ ಕೊರೊನಾ ಪರೀಕ್ಷೆ ಮಾಡಲಾಗಿದೆ. ರಿಸಲ್ಟ್ ಇನ್ನಷ್ಟೇ ಬರಬೇಕಿದೆ. ಇಂದು ಬನ್ನಪ್ಪ ಪಾರ್ಕ್ ಪಿಯು ಕಾಲೇಜು, ಆಸ್ಟಿನ್ ಟೌನ್ ಬಾಲಕಿಯರ ಪ್ರೌಢಶಾಲೆ, ತಿಮ್ಮಯ್ಯ ರಸ್ತೆಯ ಬಿಬಿಎಂಪಿ ಬಾಲಕಿಯರ ಪ್ರೌಢಶಾಲೆಯಲ್ಲಿ ಕೋವಿಡ್ ಟೆಸ್ಟ್ ನಡೆಸಲಾಗಿದೆ.
ಈವರೆಗೂ ಪಾಸಿಟಿವ್ ವರದಿ ಕಂಡು ಬಂದಿಲ್ಲ. ಕಂಡು ಬಂದಲ್ಲಿ ಅವರ ಸಂಪರ್ಕಿತರನ್ನೂ ಕ್ವಾರಂಟೈನ್ ಮಾಡಲಾಗುವುದು ಎಂದು ಬಿಬಿಎಂಪಿ ಶಿಕ್ಷಣ ಸ್ಥಾಯಿ ಸಮಿತಿ ಹಿರಿಯ ಸಹಾಯಕ ನಿರ್ದೇಶಕರಾದ ಹನುಮಂತಯ್ಯ ತಿಳಿಸಿದ್ದಾರೆ.
ಕೋವಿಡ್ ಕ್ಲಸ್ಟರ್ ಪತ್ತೆ : ನಗರದಲ್ಲಿ ಪ್ರತಿನಿತ್ಯ ಕೋವಿಡ್ ಕ್ಲಸ್ಟರ್ ಸಂಖ್ಯೆಗಳು ಹೆಚ್ಚುತ್ತಿವೆ. ಇಂದು ನಾಗರಭಾವಿಯ ಕೊಕಾನೆಟ್ ಗಾರ್ಡನ್ನ ಅಣ್ಣಂ ಎಂಬ ಅಪಾರ್ಟ್ಮೆಂಟ್ನ ಒಂದೇ ಕುಟುಂಬದ ಐವರಿಗೆ ಕೋವಿಡ್ ಸೋಂಕು ದೃಢಪಟ್ಟಿದೆ. ಮೊದಲು ವಯಸ್ಸಾದವರಿಗೊಬ್ಬರಿಗೆ ಸೋಂಕು ತಗುಲಿದೆ.
ಕೊಲಂಬಿಯಾ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಇದೀಗ ಅವರ ಸಂಪರ್ಕದಲ್ಲಿದ್ದ ನಾಲ್ಕು ಜನರಿಗೆ ಸೋಂಕು ದೃಢಪಟ್ಟಿದೆ. ಅಪಾರ್ಟ್ಮೆಂಟ್ನ ಮೊದಲ ಮಹಡಿಯ 40 ಜನರನ್ನು ಕ್ವಾರಂಟೈನ್ ಮಾಡಲಾಗಿದೆ. ಇನ್ನು, ಸಮೀಪದಲ್ಲೇ ಸರ್ಕಾರಿ ಶಾಲೆಯಲ್ಲಿದ್ದು, 300ಕ್ಕೂ ಹೆಚ್ಚು ವಿದ್ಯಾರ್ಥಿಗಳಿಗೆ ಕೊರೊನಾ ಟೆಸ್ಟ್ ಮಾಡಲಾಗಿದೆ.