ಬೆಂಗಳೂರು: ಕೋವಿಡ್ ಪರೀಕ್ಷಾ ವರದಿ 24 ಗಂಟೆಗಳಲ್ಲಿ ಲಭ್ಯವಾಗಬೇಕು ಎಂದು ಹೈಕೋರ್ಟ್ ಆದೇಶಿಸಿದ್ದರೂ ಜನರಿಗೆ ವರದಿ ಲಭ್ಯವಾಗುತ್ತಿಲ್ಲ. ಹೀಗಾಗಿ ಸರ್ಕಾರ ನ್ಯಾಯಾಲಯದ ಆದೇಶವನ್ನು ಕಟ್ಟುನಿಟ್ಟಾಗಿ ಜಾರಿಗೊಳಿಸಬೇಕು ಎಂದು ಹೈಕೋರ್ಟ್ ಆದೇಶಿಸಿದೆ.
ಕೋವಿಡ್ ನಿರ್ವಹಣೆ ಹಾಗೂ ಚಿಕಿತ್ಸೆಗೆ ಸಂಬಂಧಿಸಿದಂತೆ ಸಲ್ಲಿಸಿರುವ ಪಿಐಎಎಲ್ಗಳ ವಿಚಾರಣೆ ನಡೆಸಿದ ಮುಖ್ಯ ನ್ಯಾಯಮೂರ್ತಿ ಎ.ಎಸ್. ಓಕಾ ಹಾಗೂ ಹಿರಿಯ ನ್ಯಾಯಮೂರ್ತಿ ಅರವಿಂದ್ ಕುಮಾರ್ ಅವರಿದ್ದ ವಿಭಾಗೀಯ ಪೀಠ ಈ ನಿರ್ದೇಶನ ನೀಡಿದೆ.
ವಿಚಾರಣೆ ವೇಳೆ ಹೈಕೋರ್ಟ್ ಸಿಬ್ಬಂದಿ(ಚಾಲಕ) ಸಾವನ್ನಪ್ಪಿರುವ ಕುರಿತು ಪ್ರಸ್ತಾಪಿಸಿದ ಪೀಠ, ಸೋಂಕಿತ ಸಿಬ್ಬಂದಿ ನಗರದ ಸಿವಿ ರಾಮನ್ ಜನರಲ್ ಆಸ್ಪತ್ರೆಯಲ್ಲಿ ಆರ್ಟಿಪಿಸಿಆರ್ ಪರೀಕ್ಷೆಗೆ ಮೇ 10ರಂದು ಸ್ವ್ಯಾಬ್ ಕೊಟ್ಟಿದ್ದಾರೆ. ಅದನ್ನು 22 ಗಂಟೆಗಳ ನಂತರ ಮೇ 11ರ ಬೆಳಗ್ಗೆ ಪರೀಕ್ಷೆಗಾಗಿ ಲ್ಯಾಬ್ಗೆ ಕಳುಹಿಸಿದ್ದಾರೆ. ಆ ಬಳಿಕ ವರದಿ ಸಿದ್ಧವಾಗಿದೆಯಾದರೂ, ಮೇ.12ರಂದು ಸೋಂಕಿತ ಸಿಬ್ಬಂದಿ ಸಾವನ್ನಪ್ಪುವವರೆಗೂ ವರದಿ ನೀಡಿಲ್ಲ ಎಂದು ಅವ್ಯವಸ್ಥೆ ಕುರಿತು ಬೇಸರ ವ್ಯಕ್ತಪಡಿಸಿತು.
ಅಲ್ಲದೇ, ನ್ಯಾಯಾಲಯ ಈ ಹಿಂದಿನ ವಿಚಾರಣೆ ವೇಳೆ, 24 ಗಂಟೆಗಳಲ್ಲಿ ಪರೀಕ್ಷಾ ವರದಿ ಲಭ್ಯವಾಗುವಂತೆ ಲ್ಯಾಬ್ಗಳಿಗೆ ಸೂಕ್ತ ನಿರ್ದೇಶನ ನೀಡಲು ರಾಜ್ಯ ಸರ್ಕಾರಕ್ಕೆ ನಿರ್ದೇಶಿಸಿತ್ತು. 24 ಗಂಟೆಗಳಲ್ಲೇ ಪರೀಕ್ಷಾ ವರದಿ ಲಭ್ಯವಾದರೆ ಸೋಂಕು ವ್ಯಾಪಿಸುವುದನ್ನು ಮತ್ತು ಸಾವಿನ ಪ್ರಮಾಣ ಕಡಿಮೆ ಮಾಡಬಹುದು. ಆದರೆ, ನ್ಯಾಯಾಲಯದ ಆದೇಶವೇ ಪಾಲನೆಯಾಗಿಲ್ಲ. ಹೀಗಾಗಿ ರಾಜ್ಯ ಸರ್ಕಾರ ಎಲ್ಲ ಲ್ಯಾಬ್ಗಳು 24ಗಂಟೆಗಳಲ್ಲೇ ವರದಿ ನೀಡುವಂತೆ ಸೂಕ್ತ ಆದೇಶ ಹೊರಡಿಸಿ, ಕ್ರಮ ಕೈಗೊಳ್ಳಬೇಕು. ಹೈಕೋರ್ಟ್ ಸಿಬ್ಬಂದಿ ಸಾವನ್ನಪ್ಪುವವರೆಗೆ ವರದಿ ನೀಡದ ಲ್ಯಾಬ್ ವಿರುದ್ಧ ಕಾನೂನು ರೀತಿ ಕ್ರಮ ಜರುಗಿಸಬೇಕು. ಇದನ್ನು ಹೈಕೋರ್ಟ್ ಸಿಬ್ಬಂದಿ ಸಾವನ್ನಪ್ಪಿದ್ದಾರೆ ಎಂಬ ಕಾರಣಕ್ಕೆ ಹೇಳುತ್ತಿಲ್ಲ. ಸಾರ್ವಜನಿಕರಿಗೂ ಇದೇ ಸಮಸ್ಯೆ ಇದ್ದು, ಸರ್ಕಾರ ಗಂಭೀರವಾಗಿ ಪರಿಗಣಿಸಬೇಕು ಎಂದು ನಿರ್ದೇಶಿಸಿತು.