ಬೆಂಗಳೂರು: ಬಿಬಿಎಂಪಿ ವ್ಯಾಪ್ತಿಯ ರಾಜರಾಜೇಶ್ವರಿ ನಗರ ವಿಧಾನಸಭಾ ಕ್ಷೇತ್ರದ ಉಪ ಚುನಾವಣೆ ಸಿದ್ಧತೆ ಕುರಿತಂತೆ ಬಿಬಿಎಂಪಿ ಆಯುಕ್ತರು ಹಾಗೂ ಬೆಂಗಳೂಯ ನಗರ ಜಿಲ್ಲಾ ಚುನಾವಣಾಧಿಕಾರಿ ಮಂಜುನಾಥ್ ಪ್ರಸಾದ್ ಅವರು ಮಲ್ಲೇಶ್ವರಂನ ಐ.ಪಿ.ಪಿ ತರಬೇತಿ ಕೇಂದ್ರದಲ್ಲಿ ಸುದ್ದಿಗೋಷ್ಟಿ ನಡೆಸಿದರು.
ಅಕ್ಟೋಬರ್ 9 ರಂದು ಚುನಾವಣಾ ಅಧಿಸೂಚನೆ ಹೊರಡಿಸಲಿದ್ದು, ಅ.16ರವರೆಗೆ ನಾಮಪತ್ರಗಳನ್ನು ಸಲ್ಲಿಸಬಹುದು. 17 ರಂದು ನಾಮಪತ್ರಗಳನ್ನು ಪರಿಶೀಲನೆ ನಡೆಸಲಾಗುತ್ತದೆ. 19 ರಂದು ಉಮೇದುವಾರಿಕೆಗಳನ್ನು ಹಿಂತೆಗೆದುಕೊಳ್ಳಲು ಕೊನೆಯ ದಿನವಾಗಿದ್ದು, 3ರಂದು ಮತದಾನ ನಡೆಯಲಿದೆ.
ಬಿಬಿಎಂಪಿ ಆಯುಕ್ತರು ಮಂಜುನಾಥ್ ಪ್ರಸಾದ್ ನವೆಂಬರ್ 10 ರಂದು ಮತ ಎಣಿಕೆ ನಡೆಯಲಿದ್ದು, ನ.12 ರಂದು ಚುನಾವಣೆ ಪ್ರಕ್ರಿಯೆ ಮುಕ್ತಾಯವಾಗಲಿದೆ. ನಾಮಪತ್ರಗಳನ್ನು ರಾಜರಾಜೇಶ್ವರಿ ನಗರ ವಲಯದ ಜಂಟಿ ಆಯುಕ್ತರ ಕಚೇರಿಯಲ್ಲಿ ಸ್ವೀಕರಿಸಲಾಗುತ್ತದೆ. ಜನವರಿ 1, 2020ರ ಮತದಾರರ ಪಟ್ಟಿಯನ್ನು ಚುನಾವಣೆಗೆ ಪರಿಗಣಿಸಲಾಗುತ್ತದೆ. ರಾಜರಾಜೇಶ್ವರಿ ನಗರ ವಿಧಾನಸಭಾ ಕ್ಷೇತ್ರದಲ್ಲಿ 381 ಮತಗಟ್ಟೆಗಳಿದ್ದು, ಒಟ್ಟು 4,60,401 ಮತದಾರರಿದ್ದಾರೆ. ಕೋವಿಡ್ ಹಿನ್ನೆಲೆ ಕೇಂದ್ರ ಚುನಾವಣಾ ಆಯೋಗವು ಈ ಬಾರಿ ಚುನಾವಣೆಯಲ್ಲಿ ಹಲವು ಬದಲಾವಣೆಗಳನ್ನು ಮಾಡಿದ್ದು, 1 ಮತಗಟ್ಟೆಯಲ್ಲಿ 1,000 ಮಂದಿಗೆ ಮಾತ್ರ ಮತದಾನ ಮಾಡಲು ಅನುಮತಿಯಿದೆ. 307 ಮತಗಟ್ಟೆಗಳಲ್ಲಿ 1,000 ಕ್ಕಿಂತ ಹೆಚ್ಚು ಮತದಾರರಿದ್ದು, ಹೆಚ್ಚುವರಿ ಮತಗಟ್ಟೆಗಳನ್ನು ಸ್ಥಾಪಿಸಲಾಗುವುದು. ಅದರಂತೆ ಒಟ್ಟು 688 ಮತಗಟ್ಟೆಗಳನ್ನು ಸ್ಥಾಪಿಸಲಾಗುವುದು ಎಂದರು.ಈ ಹಿಂದೆ ನಾಮಪತ್ರ ಸಲ್ಲಿಸುವಾಗ 5 ಮಂದಿಗೆ ಅವಕಾಶ ಕಲ್ಪಿಸಲಾಗುತ್ತಿತ್ತು. ಕೋವಿಡ್ ಇರುವ ಹಿನ್ನೆಲೆ ಇಬ್ಬರಿಗೆ ಮಾತ್ರ ಅವಕಾಶವಿದೆ. ಸಾರ್ವಜನಿಕ ಸಭೆ, ಪ್ರಚಾರ ಕಾರ್ಯಗಳಿಗೆ ನಿರ್ಬಂಧವಿರಲಿದೆ. ಸಾರ್ವಜನಿಕ ಸಭೆಗೆ ಅನುಮತಿ ಪಡೆಯಬೇಕು. ವಿವಿ ಪ್ಯಾಟ್, ಇವಿಎಮ್ಗಳು ಸಿದ್ಧವಿದ್ದು, 3 ಹಂತಗಳಲ್ಲಿ ಪರಿಶೀಲನೆ ಮಾಡಲಾಗುತ್ತದೆ. ಮಾದರಿ ನೀತಿ ಸಂಹಿತೆ (ಎಂ.ಸಿ.ಸಿ) ತಂಡಗಳನ್ನು ನಿಯೋಜನೆ ಮಾಡಲಾಗಿದೆ. ಮತಗಟ್ಟೆಗಳನ್ನು ಸಂಪೂರ್ಣವಾಗಿ ಸ್ಯಾನಿಟೈಸ್ ಮಾಡುವುದು, ಸಿಬ್ಬಂದಿಗೆ ಗ್ಲೌಸ್, ಮಾಸ್ಕ್ ವಿತರಣೆ, ಮತದಾನದ ದಿನ ಸಿಬ್ಬಂದಿಗೆ ಫೇಸ್ ಶೀಲ್ಡ್ ವಿತರಿಸಲಾಗುತ್ತದೆ. ಮತದಾನ ಮಾಡಲು ಬರುವ ಪ್ರತಿಯೊಬ್ಬರಿಗೂ ಥರ್ಮಲ್ ಸ್ಕ್ಯಾನಿಂಗ್, ಹ್ಯಾಂಡ್ ಸ್ಯಾನಿಟೈಸ್ ಮಾಡಲಾಗುತ್ತದೆ. ಮತಗಟ್ಟೆಗಳ ಬಳಿ ಪುರುಷ/ಮಹಿಳೆ/ವಿಶೇಷಚೇತನರಿಗೆ ಪ್ರತ್ಯೇಕ ಮೂರು ಸಾಲುಗಳನ್ನು ಮಾಡಿ ಸಾಮಾಜಿಕ ಅಂತರ ಕಾಯ್ದುಕೊಳ್ಳಲು ಮಾರ್ಕಿಂಗ್ ಮಾಡಲಾಗುತ್ತದೆ. ಮತದಾನದ ದಿನ ಸಾಲಿನಲ್ಲಿ ನಿಲ್ಲದೇ ಇರುವವರು ಹೆಲ್ಪ್ ಡೆಸ್ಕ್ ನಲ್ಲಿ ಟೋಕನ್ ಪಡೆದು ಸಂಜೆ ಮತಗಟ್ಟೆಗೆ ಬಂದು ಮತ ಹಾಕಲು ವ್ಯವಸ್ಥೆ ಕಲ್ಪಿಸಲಾಗಿದೆ. ಮತದಾನ ಮಾಡುವ ದಿನ ಸೋಂಕು ದೃಢಪಟ್ಟವರು, ಶಂಕಿತರು ಹಾಗೂ ಗೃಹಬಂಧನದಲ್ಲಿರುವವರು ಪೋಸ್ಟಲ್ ಬ್ಯಾಲೆಟ್ನಲ್ಲಿ ಮತದಾನ ಮಾಡಲು ಅವಕಾಶ ಕಲ್ಪಿಸಲಾಗಿದೆ. ಜೊತೆಗೆ 80 ವರ್ಷ ಮೇಲ್ಪಟ್ಟವರಿಗೆ ಪೋಸ್ಟಲ್ ಬ್ಯಾಲೆಟ್ನಲ್ಲಿ ಮತದಾನ ಮಾಡಲು ಅವಕಾಶವಿದೆ ಎಂದರು.