ಬೆಂಗಳೂರು: ರಾಜ್ಯದ ರಾಜಧಾನಿಯಲ್ಲಿ ಕೊರೊನಾ ಸೋಂಕಿತರ ಸಂಖ್ಯೆ ಹೆಚ್ಚಾಗುತ್ತಿದೆ. ಇದರಿಂದಾಗಿ ಅದೆಷ್ಟೋ ಸೋಂಕಿತರಿಗೆ ಸರಿಯಾದ ಸಮಯಕ್ಕೆ ಚಿಕಿತ್ಸೆಗಾಗಿ ಹಾಸಿಗೆಗಳು ಸಿಗುತ್ತಿಲ್ಲ. ಈ ನಿಟ್ಟಿನಲ್ಲಿ ಕೊರೊನಾ ರೋಗಿಗಳಿಗೆ ಕ್ಷೇಮಾಭಿವೃದ್ಧಿ ಸಂಘಗಳಿಂದ ಆರೈಕೆ ಕೇಂದ್ರಗಳ ನಿರ್ಮಾಣ ಮಾಡಲಾಗಿದೆ.
ಬಿಬಿಎಂಪಿ, ಖಾಸಗಿ ಆಸ್ಪತ್ರೆಗಳ ಮಾದರಿಯಲ್ಲಿ ಖಾಸಗಿ ಆಸ್ಪತ್ರೆಗಳ ಸಹಯೋಗದಲ್ಲಿ ನಗರದ ನಾಲ್ಕು ಕಡೆ 20 ಹಾಸಿಗೆಯ ಕೊರೊನಾ ಸೋಂಕಿತರ ಆರೈಕೆ ಕೇಂದ್ರ ಸ್ಥಾಪಿಸಲಾಗಿದೆ.
ಬಿಬಿಎಂಪಿ ಈಗಾಗಲೇ ಸೋಂಕಿನ ಲಕ್ಷಣ ಇರುವವರಿಗೆ 2,802 ಹಾಸಿಗೆ ವ್ಯವಸ್ಥೆ ಮಾಡಿದ್ದು, ಖಾಸಗಿ ಆಸ್ಪತ್ರೆಗಳಿಂದ 2,122 ಹಾಸಿಗೆಗಳ ವ್ಯವಸ್ಥೆಯಾಗಿದೆ. ಇದೇ ಮಾದರಿಯಲ್ಲಿ ನಿವಾಸಿ, ಕ್ಷೇಮಾಭಿವೃದ್ಧಿ ಸಂಘಗಳು ಹಾಗೂ ಅಪಾರ್ಟ್‌ಮೆಂಟ್ ನಿವಾಸಿಗಳಿಂದ ಆರೈಕೆ ಕೇಂದ್ರ ಆರಂಭಿಸಲಾಗಿದೆ.
ಯಶವಂತಪುರದ ಗೋಲ್ಡನ್ ಗ್ರ್ಯಾಂಡ್ ಅಪಾರ್ಟ್‌ಮೆಂಟ್ ವತಿಯಿಂದ ಸಂಜೀವಿನಿ ಆಸ್ಪತ್ರೆಯಲ್ಲಿ 6 ಹಾಸಿಗೆ, ಶೋಭಾ ಸಿಟಿ ಕೋವಿಡ್ ಐಸೋಲೇಷನ್ ಸೆಂಟರ್ನಿಂದ ಕೈಟ್ ಕೇರ್ ಆಸ್ಪತ್ರೆಯಲ್ಲಿ 8 ಹಾಸಿಗೆ, ವೆಸ್ಟ್ ಎಂಡ್ ಹೈಟ್ಸ್ನಿಂದ ಅಪೋಲೋ ಆಸ್ಪತ್ರೆ ಅಕ್ಷಯ ನಗರದಲ್ಲಿ 2 ಹಾಸಿಗೆ ಹಾಗೂ ಕಿದ್ವಾಯಿ ಸ್ಮಾರಕ ಗ್ರಂಥಿ ಆಸ್ಪತ್ರೆಯಲ್ಲಿ 4 ಹಾಸಿಗೆ ಸಾಮರ್ಥ್ಯದ ಆರೈಕೆ ಕೇಂದ್ರ ನಿರ್ಮಾಣ ಮಾಡಲಾಗಿದೆ. ಸದ್ಯ ಎಲ್ಲಾ 20 ಹಾಸಿಗೆಗಳು ಖಾಲಿ ಇರೋದಾಗಿ ಬಿಬಿಎಂಪಿ ಮಾಹಿತಿ ನೀಡಿದೆ.