ಬೆಂಗಳೂರು: ಅಳೆದು ತೂಗಿ ಕಡೆಗೂ ರಾಜ್ಯದಲ್ಲಿ ಟಫ್ ರೂಲ್ಸ್ ಅನ್ನು ರಾಜ್ಯ ಸರ್ಕಾರ ಜಾರಿಗೊಳಿಸಿದೆ. ವೀಕೆಂಡ್ ಲಾಕ್ ಡೌನ್ ಜೊತೆಗೆ ಶಾಪಿಂಗ್, ಜಿಮ್, ಸಿನಿಮಾ ಮಂದಿರ ಸೇರಿ ಹಲವು ವಲಯಗಳಿಗೆ ನಿರ್ಬಂಧ ವಿಧಿಸಿದೆ. ಯಾವುದಕ್ಕೆ ಅವಕಾಶ, ಯಾವುದಕ್ಕೆಲ್ಲಾ ನಿರ್ಬಂಧ ಎನ್ನುವ ಸಂಪೂರ್ಣ ಮಾಹಿತಿ ಇಲ್ಲಿದೆ.
ನೈಟ್ ಕರ್ಫ್ಯೂ: ಇಂದಿನಿಂದ ಮೇ 4 ರವರೆಗೆ ನೈಟ್ ಕರ್ಫ್ಯೂ ವಿಸ್ತರಣೆ ಮಾಡಲಾಗಿದ್ದು, ರಾತ್ರಿ 10 ರಿಂದ ಬೆಳಗ್ಗೆ 5 ಗಂಟೆ ಬದಲು ರಾತ್ರಿ 9 ರಿಂದ ಬೆಳಗ್ಗೆ 6 ಗಂಟೆವರೆಗೆ ನೈಟ್ ಕರ್ಫ್ಯೂ ವಿಸ್ತರಿಸಲಾಗಿದೆ.
ವೀಕೆಂಡ್ ಕರ್ಫ್ಯೂ: ಇಂದಿನಿಂದ ಮೇ 4 ರವರೆಗೆ ಪ್ರತಿ ಶುಕ್ರವಾರ ರಾತ್ರಿ 9 ಗಂಟೆಯಿಂದ ಸೋಮವಾರ ಬೆಳಗ್ಗೆ 6 ಗಂಟೆವರೆಗೆ ಕರ್ಫ್ಯೂ ಜಾರಿಯಲ್ಲಿ ಇರಲಿದೆ.
ನಿರ್ಬಂಧಿತ ಚಟುವಟಿಕೆ: ಶಾಲಾ-ಕಾಲೇಜುಗಳು, ಶಿಕ್ಷಣ ತರಬೇತಿ ಕೇಂದ್ರಗಳು, ಎಲ್ಲಾ ಸಿನಿಮಾ ಮಂದಿರಗಳು, ಶಾಪಿಂಗ್ ಮಾಲ್ಗಳು, ಜಿಮ್ಗಳು, ಯೋಗ ಕೇಂದ್ರಗಳು, ಕ್ರೀಡಾ ಸಂಕೀರ್ಣ, ಈಜುಕೊಳ, ಮನರಂಜನಾ ತಾಣಗಳು, ಸಭಾಂಗಣಗಳು, ರಂಗಮಂದಿರಗಳಿಗೆ ನಿರ್ಬಂಧ, ಕ್ರೀಡಾಪಟುಗಳ ತರಬೇತಿಗಾಗಿ ಮಾತ್ರ ಅನುಮತಿ ಪಡೆದ ಈಜುಕೊಳಕ್ಕೆ ಅನುಮತಿ ಇದೆ.
ಎಲ್ಲಾ ಸಾಮಾಜಿಕ, ರಾಜಕೀಯ, ಕ್ರೀಡೆ, ಮನರಂಜನೆ, ಸಾಂಸ್ಕೃತಿಕ, ಧಾರ್ಮಿಕ ಹಾಗೂ ಇತರೆ ಜನ ಸೇರುವ ಕಾರ್ಯಕ್ರಮಗಳನ್ನು ರದ್ದು ಮಾಡಲಾಗಿದೆ. ಎಲ್ಲಾ ದೇವಾಲಯ, ಪ್ರಾರ್ಥನಾ ಮಂದಿರಗಳು ಭಕ್ತರಿಗೆ ಮುಚ್ಚಲ್ಪಟ್ಟಿದ್ದು, ಕೇವಲ ಪೂಜಾ ಕೈಂಕರ್ಯಗಳು ಮಾತ್ರ ಅರ್ಚಕರಿಂದ, ಸಂಬಂಧಪಟ್ಟ ವ್ಯಕ್ತಿಗಳಿಂದ ಅವುಗಳ ಸಂಪ್ರದಾಯದಂತೆ ನೆರವೇರಲು ಅನುಮತಿ ನೀಡಲಾಗಿದೆ. ರೆಸ್ಟೋರೆಂಟ್ಗಳು ಮತ್ತು ದರ್ಶನಿಗಳಲ್ಲಿ ಕೇವಲ ಪಾರ್ಸೆಲ್ಗೆ ಮಾತ್ರ ಅವಕಾಶ ನೀಡಲಾಗಿದೆ.
ನಿರ್ಮಾಣ ಚಟುವಟಿಕೆ: ಎಲ್ಲಾ ರೀತಿಯ ನಿರ್ಮಾಣ ಚಟುವಟಿಕೆಗಳು ಹಾಗೂ ಸಿವಿಲ್ ಕೆಲಸಗಳ ಚಟುವಟಿಕೆಗಳಿಗೆ ಅವಕಾಶ ಕಲ್ಪಿಸಲಾಗಿದೆ. ಮಳೆಗಾಲ ಪೂರ್ವದ ಕಾಮಗಾರಿಗಳ ಆರಂಭಕ್ಕೆ ಅನುಮತಿ ಕೊಡಲಾಗಿದೆ. ಕೊರೊನಾ ಮಾರ್ಗಸೂಚಿಯನ್ನು ಕಟ್ಟುನಿಟ್ಟಾಗಿ ಪಾಲಿಸುವ ಷರತ್ತಿನೊಂದಿಗೆ ನಿರ್ಮಾಣ ಚಟುವಟಿಕೆಗೆ ಅವಕಾಶ ಕಲ್ಪಿಸಲಾಗಿದೆ.
ಕೈಗಾರಿಕಾ ವಲಯ: ಎಲ್ಲಾ ರೀತಿಯ ಕೈಗಾರಿಕೆಗಳಿಗೆ, ಉತ್ಪಾದಕ ಘಟಕಗಳಿಗೆ ಅವಕಾಶ ಕಲ್ಪಿಸಲಿದೆ. ಕೊರೊನಾ ಮಾರ್ಗಸೂಚಿಯನ್ನು ಪಾಲಿಸಿ ಕೈಗಾರಿಕೆಗಳನ್ನು ತೆರೆಯಲು ಅವಕಾಶ ಕಲ್ಪಿಸಲಿದೆ. ಕೈಗಾರಿಕೆಗಳ ಐಡಿ ಕಾರ್ಡ್ ತೋರಿಸಿ ಸಿಬ್ಬಂದಿ ಸಂಚಾರಕ್ಕೆ ಅವಕಾಶ ಕಲ್ಪಿಸಲಾಗುತ್ತದೆ.
ವಾಣಿಜ್ಯ ಚಟುವಟಿಕೆಗಳು: ದಿನಸಿ ಅಂಗಡಿಗಳು, ಹಣ್ಣು, ಹಾಲು, ತರಕಾರಿ ಅಂಗಡಿಗಳು, ಮೀನು ಮತ್ತು ಮಾಂಸದ ಮಳಿಗೆಗಳನ್ನು ತೆರೆಯಲು ಅವಕಾಶ ಕಲ್ಪಿಸಲಾಗಿದೆ. ಏಪ್ರಿಲ್ 23ರ ಒಳಗೆ ಮಾರುಕಟ್ಟೆಗಳನ್ನು ಖಾಲಿ ಜಾಗಕ್ಕೆ ಸ್ಥಳಾಂತರ ಮಾಡಬೇಕು. ವಸತಿ ಹೋಟೆಲ್ಗಳಲ್ಲಿ ಅತಿಥಿಗಳಿಗೆ ಮಾತ್ರ ಸೇವೆ ನೀಡಬಹುದಾಗಿದೆ.
ಇದನ್ನೂ ಓದಿ: ರಾಜ್ಯದಲ್ಲಿ ಲಾಕ್ಡೌನ್ ಇಲ್ಲ, ವೀಕೆಂಡ್, ನೈಟ್ ಕರ್ಫ್ಯೂ ಮಾತ್ರ ಜಾರಿ - ಮಾಲ್, ಜಿಮ್, ಥಿಯೇಟರ್ ಮತ್ತೆ ಕ್ಲೋಸ್
ಮದ್ಯದ ಅಂಗಡಿಗಳು, ಬಾರ್ ಅಂಡ್ ರೆಸ್ಟೋರೆಂಟ್ ಗಳಲ್ಲಿ ಪಾರ್ಸೆಲ್ ಸೇವೆಗೆ ಮಾತ್ರ ಅವಕಾಶ ಇದ್ದು, ಎಲ್ಲಾ ರೀತಿಯ ಆಹಾರ ಉತ್ಪನ್ನ ಘಟಕಗಳ ಆರಂಭಕ್ಕೆ ಅನುಮತಿಸಲಾಗಿದೆ. ಬ್ಯಾಂಕ್ಗಳು, ವಿಮಾ ಕಚೇರಿಗಳು, ಎಟಿಎಂಗಳನ್ನು ತೆರೆಯಲು ಅವಕಾಶ ನೀಡಿದ್ದು, ಮುದ್ರಣ ಮತ್ತು ವಿದ್ಯುನ್ಮಾನ ಮಾಧ್ಯಮಗಳಿಗೆ ಅವಕಾಶ ನೀಡಲಾಗಿದೆ. ಇ-ಕಾಮರ್ಸ್ಗಳ ವಿತರಣೆಗೆ ಅವಕಾಶ, ಶೀತಲೀಕರಣ ಘಟಕ ಹಾಗೂ ಉಗ್ರಾಣಗಳ ಸೇವೆಗೆ ಅವಕಾಶ, ಖಾಸಗಿ ಸೆಕ್ಯೂರಿಟಿ ಸೇವೆಗೆ ಅವಕಾಶ, ಕ್ಷೌರದ ಅಂಗಡಿ, ಬ್ಯೂಟಿ ಪಾರ್ಲರ್ಗಳ ತೆರೆಯಲು ಅವಕಾಶ ನೀಡಿದ್ದು, ಸಾಧ್ಯವಿರುವ ಎಲ್ಲಾ ಕಂಪನಿಗಳ ಉದ್ಯೋಗಿಗಳಿಗೆ ವರ್ಕ್ ಫ್ರಮ್ ಹೋಮ್ ಕೊಡಲು ಸೂಚನೆ ನೀಡಲಾಗಿದೆ.
ಸರ್ಕಾರಿ ಮತ್ತು ಖಾಸಗಿ ಕಚೇರಿಗಳು: ಸರ್ಕಾರಿ ಮತ್ತು ಖಾಸಗಿ ಕಚೇರಿಗಳಲ್ಲಿ ಕನಿಷ್ಠ ಸಿಬ್ಬಂದಿ ಬಳಸಿಕೊಂಡು ಕರ್ತವ್ಯ ನಿರ್ವಹಿಸಲು ಅವಕಾಶ ನೀಡಿದ್ದು, ಐಟಿ ಕಂಪನಿಗಳ ಉದ್ಯೋಗಿಗಳಿಗೆ ವರ್ಕ್ ಫ್ರಂ ಹೋಮ್ ನೀಡಲು ಸೂಚನೆ ನೀಡಲಾಗಿದೆ. ನ್ಯಾಯಾಲಯಗಳಿಗೆ ಸಂಬಂಧ ಪಟ್ಟಿದ್ದನ್ನು ನ್ಯಾಯಾಲಯಗಳೇ ನಿರ್ಧರಿಸಲು ಅವಕಾಶ ಕಲ್ಪಿಸಿದ್ದು, ಪೆಟ್ರೋಲ್, ಗ್ಯಾಸ್ ಬಂಕ್ಗಳನ್ನು ತೆರೆಯಲು ಅವಕಾಶ ನೀಡಲಾಗಿದೆ.
ಅಂತರರಾಜ್ಯ ಸೇವೆ: ಎಲ್ಲಾ ರೀತಿಯ ಅಂತರ ರಾಜ್ಯ ಸಾರಿಗೆ ಸೇವೆಗೆ ವ್ಯಕ್ತಿ ಹಾಗೂ ಸರಕು ಸಾಗಾಣಿಕೆ ಮೇಲೆ ಯಾವುದೇ ನಿರ್ಬಂಧವಿಲ್ಲ.
ಜನರ ಸಂಚಾರ: ರಾಜ್ಯ ರಸ್ತೆ ಸಾರಿಗೆ ವಾಹನಗಳು, ಖಾಸಗಿ ವಾಹನಗಳು, ಖಾಸಗಿ ಬಸ್ಸುಗಳ ಸಂಚಾರ, ರೈಲು, ಟ್ಯಾಕ್ಸಿಗಳ ಸಂಚಾರಕ್ಕೆ ಯಾವುದೇ ನಿರ್ಬಂಧವಿಲ್ಲ. ಬಸ್ಸುಗಳಲ್ಲಿ, ಮ್ಯಾಕ್ಸಿಕ್ಯಾಬ್, ಟೆಂಪೋ ಟ್ರಾವೆಲರ್, ಮೆಟ್ರೋದಲ್ಲಿ ಶೇಕಡಾ 50ರಷ್ಟು ಆಸನಗಳಿಗೆ ಮಾತ್ರ ಅವಕಾಶವಿದೆ.
ಇದನ್ನೂ ಓದಿ: ಬೆಂಗಳೂರು ಗ್ರಾಮಾಂತರ ಜಿಲ್ಲೆಯಲ್ಲಿ ಇಂದಿನಿಂದ ನೈಟ್ ಕರ್ಪ್ಯೂ ಜಾರಿ
ಕೃಷಿ ಸಂಬಂಧಿ ಚಟುವಟಿಕೆ: ಎಲ್ಲ ರೀತಿಯ ಕೃಷಿ ಸಂಬಂಧಿತ ಚಟುವಟಿಕೆ ಅವಕಾಶ ಕಲ್ಪಿಸಲಾಗಿದೆ.
ಆರೋಗ್ಯ ಸೇವೆ: ಎಲ್ಲ ರೀತಿಯ ಆರೋಗ್ಯ ಸೇವೆಗಳು ಆಯುಷ್ ಹಾಗೂ ಪಶು ಆಸ್ಪತ್ರೆಗಳಿಗೆ ಅವಕಾಶ ಕಲ್ಪಿಸಲಾಗಿದೆ.
ಮದುವೆಗಳು: ಗರಿಷ್ಠ 50 ಜನರ ಮಿತಿಯೊಂದಿಗೆ ಮದುವೆಗೆ ಅವಕಾಶ ಕಲ್ಪಿಸಲಾಗಿದೆ.
ಅಂತ್ಯಸಂಸ್ಕಾರ: ಗರಿಷ್ಠ 20 ಜನರನ್ನು ಒಳಗೊಂಡಂತೆ ಅಂತ್ಯಸಂಸ್ಕಾರ ವಿಧಿವಿಧಾನ ನಡೆಸಲು ಅವಕಾಶ ಕಲ್ಪಿಸಲಾಗಿದೆ.