ಬೆಂಗಳೂರು: ಚಾರುಲತಾ ಚಿತ್ರ ಬಿಡುಗಡೆ ಸಂದರ್ಭದಲ್ಲಿ ನಿರ್ಮಾಪಕ ಕೆಸಿಎನ್ ಚಂದ್ರಶೇಖರ್ ಅವರಿಂದ ಪಡೆದ 50 ಲಕ್ಷ ರೂಪಾಯಿ ಸಾಲವನ್ನು ಮರುಪಾವತಿ ಮಾಡುವಂತೆ ಕನ್ನಡದ ಹಿರಿಯ ನಟ ಹಾಗೂ ನಿರ್ಮಾಪಕ ದ್ವಾರಕೀಶ್ ಅವರಿಗೆ ಸೆಷನ್ಸ್ ಕೋರ್ಟ್ ನಿರ್ದೇಶಿಸಿದೆ.
ನಿರ್ಮಾಪಕ ಕೆಸಿಎನ್ ಚಂದ್ರಶೇಖರ್ ನೀಡಿದ್ದ 50 ಲಕ್ಷ ರೂಪಾಯಿ ಸಾಲ ಮರುಪಾವತಿ ಮಾಡುವಂತೆ 21ನೇ ಎಸಿಎಂಎಂ ನ್ಯಾಯಾಲಯ ಹೊರಡಿಸಿದ್ದ ಆದೇಶ ರದ್ದು ಕೋರಿ ದ್ವಾರಕೀಶ್ ಅವರ ‘ದ್ವಾರಕೀಶ್ ಚಿತ್ರ’ ನಿರ್ಮಾಣ ಸಂಸ್ಥೆ ಸಲ್ಲಿಸಿದ್ದ ಮೇಲ್ಮನವಿಯನ್ನು ವಜಾಗೊಳಿಸಿರುವ ಸೆಷನ್ಸ್ ನ್ಯಾಯಾಲಯ ಈ ಆದೇಶ ಮಾಡಿದೆ.
2013ರಲ್ಲಿ ಚಾರುಲತಾ ಸಿನಿಮಾ ಬಿಡುಗಡೆ ವೇಳೆ ಕೆಸಿಎನ್ ಚಂದ್ರಶೇಖರ್ ಅವರಿಂದ ದ್ವಾರಕೀಶ್ 50 ಲಕ್ಷ ರೂಪಾಯಿ ಸಾಲ ಪಡೆದಿದ್ದರು. ಸಾಲಕ್ಕೆ ಖಾತರಿಯಾಗಿ ಚೆಕ್ ನೀಡಿದ್ದರು. ಹಣ ವಾಪಸ್ ನೀಡದ ಹಿನ್ನೆಲೆಯಲ್ಲಿ ಕೆಸಿಎನ್ ಚಂದ್ರಶೇಖರ್ ಎಸಿಎಂಎಂ ಕೋರ್ಟ್‌ಗೆ ಕ್ರಿಮಿನಲ್ ದೂರು ಸಲ್ಲಿಸಿದ್ದರು.
ವಿಚಾರಣೆ ಸಂದರ್ಭದಲ್ಲಿ ಕೆಸಿಎನ್ ಚಂದ್ರಶೇಖರ್ ಅವರಿಗೆ ನಾನು ಚೆಕ್ ನೀಡಿರಲಿಲ್ಲ. ಅವರು ಒದಗಿಸಿರುವ ಚೆಕ್‌ನಲ್ಲಿ ಇರುವುದು ನನ್ನ ಸಹಿ ಅಲ್ಲ ಎಂದು ದ್ವಾರಕೀಶ್ ವಾದಿಸಿದ್ದರು. ಆದರೆ, ವಿಧಿ ವಿಜ್ಞಾನ ಪ್ರಯೋಗಾಲಯದ ವರದಿ, ಚೆಕ್‌ನಲ್ಲಿರುವ ಸಹಿ ದ್ವಾರಕೀಶ್ ಅವರದ್ದೇ ಎಂದು ಸ್ಪಷ್ಟಪಡಿಸಿತ್ತು. ಇದರಿಂದ ಕೆಸಿಎನ್ ಚಂದ್ರಶೇಖರ್ ಅವರಿಗೆ 50 ಲಕ್ಷ ರೂಪಾಯಿ ಮರುಪಾವತಿ ಮಾಡುವಂತೆ ದ್ವಾರಕೀಶ್ ಅವರಿಗೆ ಎಸಿಎಂಎಂ ಕೋರ್ಟ್ ಆದೇಶಿಸಿತ್ತು. ಆ ತೀರ್ಪು ಪ್ರಶ್ನಿಸಿ ದ್ವಾರಕೀಶ್ ಸೆಷನ್ಸ್ ಕೋರ್ಟ್ ನಲ್ಲಿ ಮೇಲ್ಮನವಿ ಸಲ್ಲಿಸಿದ್ದರು.
(ಇದನ್ನೂ ಓದಿ: ಪದವಿಯಲ್ಲಿ ಕನ್ನಡ ಕಡ್ಡಾಯ ಕಲಿಕೆ: ಬಲವಂತದ ಕ್ರಮ ಕೈಗೊಳ್ಳದಂತೆ ಹೈಕೋರ್ಟ್ ನಿರ್ದೇಶನ)