ಬೆಂಗಳೂರು: ಕಾಲ್ ಗರ್ಲ್ ಸರ್ವೀಸ್ ಪೂರೈಸಿ, ಖಾಸಗಿ ವಿಡಿಯೋ ಮಾಡಿ ಬ್ಲಾಕ್ ಮೇಲ್ ಮಾಡುತ್ತಿದ್ದ ದಂಪತಿಯನ್ನು ವೈಟ್ ಫೀಲ್ಡ್ ಪೊಲೀಸರು ಬಂಧಿಸಿದ್ದಾರೆ.
ಆನ್ ಲೈನ್ನಲ್ಲಿ ವೇಶ್ಯಾವಾಟಿಕೆಗೆ ಯುವತಿಯರನ್ನು ಕಳಿಸುವುದಾಗಿ ದಂಪತಿ ಪೋಸ್ಟ್ ಹಾಕುತ್ತಿದ್ದರು. ನಂತರ ಹಣ ಪಡೆದು ಯುವತಿಯರನ್ನು ಕಳಿಸುತ್ತಿದ್ದರು. ಬಳಿಕ ಆ ಸ್ಥಳಕ್ಕೆ ಹೋಗಿ ಹೆದರಿಸಿ ಹಣ ವಸೂಲಿ ಮಾಡುತ್ತಿದ್ದರು. ಉಲ್ಲಾಳ ಉಪನಗರದ ವಿಶ್ವೇಶ್ವರಯ್ಯ ಬಡಾವಣೆ ನಿವಾಸಿಯಾದ ಭಾಸ್ವತಿ ದತ್ತಾ ಹಾಗೂ ಕಿರಣ್ ರಾಜ್ ಬಂಧಿತ ಆರೋಪಿಗಳು.
ಕಾಲ್ಗರ್ಲ್ಗಳ ಜತೆ ಸಂಪರ್ಕ ಹೊಂದಿದ್ದ ಇವರು, ಯಾರಾದರೂ ಕಾಲ್ಗರ್ಲ್ ಸರ್ವೀಸ್ ಪಡೆದರೆ ಅಂತಹವರ ಬೆತ್ತಲೆ ವಿಡಿಯೋ ಮಾಡಿ ನಂತರ ಕರೆ ಮಾಡಿ ಸುಲಿಗೆ ಮಾಡುತ್ತಿದ್ದರು. ಹಣ ಕೊಡದಿದ್ದರೆ ಸಾಮಾಜಿಕ ಜಾಲ ತಾಣದಲ್ಲಿ ವಿಡಿಯೋಗಳನ್ನು ಬಿಡುವುದಾಗಿ ಬೆದರಿಸುತ್ತಿದ್ದರು. ಕಳೆದ ಮೂರು ವರ್ಷಗಳಿಂದ ಈ ದಂಪತಿ ಈ ಜಾಲದಲ್ಲಿ ಸಕ್ರಿಯವಾಗಿದ್ದು, ನೂರಾರು ಮಂದಿಗೆ ಮೋಸ ಮಾಡಿರುವುದನ್ನು ಪೊಲೀಸ್ ತನಿಖೆಯಲ್ಲಿ ಬಾಯಿ ಬಿಟ್ಟಿದ್ದಾರೆ.
ಲೊಕಾಂಟೋ ಜಾಲ ತಾಣದಲ್ಲಿ ಸುಂದರ ಹುಡುಗಿಯರ ಚಿತ್ರ ಹಾಕಿದ್ದ ಭಾಸ್ವತಿ ದತ್ತಾ, ತನ್ನ ಮೊಬೈಲ್ ನಂಬರ್ ದಾಖಲಿಸಿದ್ದಳು. ಕಾಲ್ಗರ್ಲ್ ಸರ್ವೀಸ್ ಪಡೆಯಲು ವ್ಯಕ್ತಿಯೊಬ್ಬ ಈ ಜಾಲ ತಾಣದಲ್ಲಿ ನೋಡಿದಾಗ ಈ ನಂಬರ್ ಸಿಕ್ಕಿದೆ. ಜಾಹೀರಾತು ನೋಡಿ ಕರೆ ಮಾಡಿದ ವ್ಯಕ್ತಿಯ ಮನೆಗೆ ಹುಡುಗಿಯನ್ನು ಕಳಿಸಿದ್ದಾರೆ. ನಂತರ ಬೆತ್ತಲೆ ಚಿತ್ರಗಳನ್ನು ಆತನಿಗೆ ಗೊತ್ತಿಲ್ಲದೇ ತೆಗೆದುಕೊಂಡಿದ್ದಾರೆ.
ಆನಂತರ ಮೊಬೈಲ್ಗೆ ಕರೆ ಮಾಡಿ, ಹೇಳಿದಷ್ಟು ಹಣ ನೀಡಬೇಕು. ಇಲ್ಲದಿದ್ದರೆ ಪೊಲೀಸರಿಗೆ ರೇಪ್ ಕೇಸ್ ನೀಡಿ ಮಾನ ಮರ್ಯಾದೆ ತೆಗೆಯುವುದಾಗಿ ಹೆದರಿಸಿದ್ದಾರೆ. ಅಲ್ಲದೇ ಈ ವ್ಯಕ್ತಿಯ ಮನೆಯಲ್ಲಿ 94 ಸಾವಿರ ರೂ. ನಗದು ಮತ್ತು 150 ಗ್ರಾಂ ಚಿನ್ನಾಭರಣಗಳನ್ನು ದೋಚಿಕೊಂಡು ಭಾಸ್ವತಿ ದತ್ತಾ ಗ್ಯಾಂಗ್ ಪರಾರಿಯಾಗಿತ್ತು. ಸಂತ್ರಸ್ತ ವ್ಯಕ್ತಿ ಈ ಕುರಿತು ವೈಟ್ ಫೀಲ್ಡ್ ಪೊಲೀಸ್ ಠಾಣೆಗೆ ದೂರು ನೀಡಿದ್ದರು.
ಸಂತ್ರಸ್ತ ವ್ಯಕ್ತಿಯ ದೂರನ್ನು ಕೈಗೆತ್ತಿಕೊಂಡ ವೈಟ್ ಫೀಲ್ಡ್ ಪೊಲೀಸರು ಫೋನ್ ಕರೆ ಮೂಲಕ ಆರೋಪಿಗಳಾದ ಭಾಸ್ವತಿ ದತ್ತಾ, ಕಿರಣ್ ರಾಜ್ ದಂಪತಿಯನ್ನು ಬಂಧಿಸಿ ನ್ಯಾಯಾಂಗ ಬಂಧನಕೊಪ್ಪಿಸಿದ್ದಾರೆ.