ಬೆಂಗಳೂರು : ಕೋಲಾರ ಜಿಲ್ಲೆಯಲ್ಲಿರುವ ದಕ್ಷಿಣ ಕಾಶಿ ವಿಶ್ವೇಶ್ವರ ದೇವಾಲಯ ಹೊಂದಿರುವ ಅಂತರಗಂಗೆ ಕ್ಷೇತ್ರದ ಅಭಿವೃದ್ಧಿಗೆ ರಾಜ್ಯ ಸರ್ಕಾರ ಎಲ್ಲಾ ರೀತಿಯ ಕ್ರಮಕೈಗೊಳ್ಳಲಿದೆ ಎಂದು ಪ್ರವಾಸೋದ್ಯಮ ಸಚಿವ ಆನಂದ್ ಸಿಂಗ್ ಹೇಳಿದ್ದಾರೆ.
ವಿಧಾನ ಪರಿಷತ್ ಕಲಾಪದಲ್ಲಿ ನಿಯಮ 72ರ ಅಡಿಯಲ್ಲಿ ಅಂತರಗಂಗೆ ಕ್ಷೇತ್ರದಲ್ಲಿ ಮೂಲಸೌಕರ್ಯ ಕಲ್ಪಿಸುವ ಕುರಿತು ಜೆಡಿಎಸ್ ಸದಸ್ಯ ಗೋವಿಂದರಾಜು ಗಮನ ಸೆಳೆಯುವ ಸೂಚನೆಗೆ ಉತ್ತರಿಸಿದ ಸಚಿವರು, ಪ್ರವಾಸೋದ್ಯಮ ನೀತಿ 202-25ರಡಿಯಲ್ಲಿ ಅಂತರಗಂಗೆಯನ್ನು ಪ್ರವಾಸಿ ತಾಣವಾಗಿ ಗುರುತಿಸಲಾಗಿದೆ.
ಈ ಕ್ಷೇತ್ರದ ಅಭಿವೃದ್ಧಿ ವಿಚಾರ ಸರ್ಕಾರದ ಗಮನದಲ್ಲಿದೆ. ಸದ್ಯದಲ್ಲೇ ಸ್ಥಳ ಪರಿಶೀಲನೆ ಮಾಡಿ ಮೂಲಸೌಕರ್ಯಕ್ಕೆ ಅಗತ್ಯ ಅನುಕೂಲ ಮಾಡಲಾಗುತ್ತದೆ ಜೊತೆಗೆ ಅನುದಾನ ಇನ್ನಷ್ಟು ಹೆಚ್ಚು ಅಗತ್ಯವಿದ್ದರೆ ಅದನ್ನೂ ಕೊಡಲು ಬದ್ದನಿದ್ದೇನೆ ಎಂದು ಭರವಸೆ ನೀಡಿದರು.
ಡೀಮ್ಡ್ ಫಾರೆಸ್ಟ್ ಜಾಗವಾಗಿರುವ ಕಾರಣ ದೇವಾಲಯದ ಕೂಡ ರಸ್ತೆ ನಿರ್ಮಾಣಕ್ಕೆ ಅರಣ್ಯ ಇಲಾಖೆ ಅನುಮತಿ ಅಗತ್ಯ. ಆದರೆ, ಅನುಮತಿ ನಿರಾಕರಿಸಿದ ಕಾರಣ ಕಾಂಕ್ರೀಟ್ ರಸ್ತೆ ನಿರ್ಮಾಣ ಕಾರ್ಯ ಆರಂಭಗೊಂಡಿಲ್ಲ.
ಈಗ ರದ್ದುಗೊಂಡಿರುವ 50 ಲಕ್ಷ ರೂ.ಗಳ ಅಂದಾಜು ವೆಚ್ಚದ ಕಾಮಗಾರಿಯನ್ನು ಪುನರ್ ಮಂಜೂರಾತಿ ನೀಡಿ ಆದೇಶ ಹೊರಡಿಸಿದ್ದು, ಕಾಮಗಾರಿ ಆರಂಭಕ್ಕೆ ಅಗತ್ಯ ಕ್ರಮಕೈಗೊಳ್ಳಲಾಗುತ್ತದೆ ಎಂದು ಭರವಸೆ ನೀಡಿದರು.
ಇದನ್ನೂ ಓದಿ: ಮೇಕೆದಾಟು ಯೋಜನೆ: ತಮಿಳುನಾಡು ವಿರುದ್ಧ ನಿರ್ಣಯ ಮಂಡಿಸಲು ನಿರ್ಧರಿಸಿದ ಕರ್ನಾಟಕ