ಬೆಂಗಳೂರು : ಭ್ರಷ್ಟಾಚಾರ ಆರೋಪಕ್ಕೆ ಸಂಬಂಧಿಸಿದಂತೆ ಮಾಜಿ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ, ಪುತ್ರ ವಿಜಯೇಂದ್ರ ಹಾಗೂ ಆಪ್ತರ ವಿರುದ್ಧ ದಾಖಲಿಸಿರುವ ಕ್ರಿಮಿನಲ್ ಅರ್ಜಿ ಸಂಬಂಧ ಹೈಕೋರ್ಟ್ ಬಿಎಸ್‌ವೈ ಸೇರಿದಂತೆ ಎಲ್ಲ ಪ್ರತಿವಾದಿಗಳಿಗೆ ನೋಟಿಸ್ ಜಾರಿ ಮಾಡಿದೆ.
ಭ್ರಷ್ಟಾಚಾರ ಕುರಿತಂತೆ ತನಿಖೆ ಕೋರಿ ಸಲ್ಲಿಸಿದ್ದ ಖಾಸಗಿ ದೂರನ್ನು ವಜಾಗೊಳಿಸಿರುವ ಜನಪ್ರತಿನಿಧಿಗಳ ವಿಚಾರಣಾ ವಿಶೇಷ ನ್ಯಾಯಾಲಯದ ಆದೇಶ ಪ್ರಶ್ನಿಸಿ ದೂರುದಾರ ಟಿ.ಜೆ ಅಬ್ರಹಾಂ ಹೈಕೋರ್ಟ್‌ಗೆ ಕ್ರಿಮಿನಲ್ ಅರ್ಜಿ ಸಲ್ಲಿಸಿದ್ದಾರೆ. ಇಂದು ಅರ್ಜಿ ವಿಚಾರಣೆ ನಡೆಸಿದ ನ್ಯಾ.ಸುನಿಲ್ ದತ್ ಯಾದವ್ ಅವರಿದ್ದ ಪೀಠ ಮಾಜಿ ಸಿಎಂ ಡಯಿಯೂರಪ್ಪ, ಅವರ ಪುತ್ರ, ರಾಜ್ಯ ಬಿಜೆಪಿ ಉಪಾಧ್ಯಕ್ಷ ಬಿ ವೈ ವಿಜಯೇಂದ್ರ, ಆಪ್ತರಾದ ಶಶಿಧರ್ ಮರಡಿ, ಸಂಜಯ್ ಶ್ರೀ, ಚಂದ್ರಕಾಂತ ರಾಮಲಿಂಗಂ, ಎಸ್.ಟಿ.ಸೋಮಶೇಖರ್, ಐಎಎಸ್ ಅಧಿಕಾರಿ ಡಾ.ಜಿ.ಸಿ. ಪ್ರಕಾಶ್, ಕೆ. ರವಿ ಹಾಗೂ ವಿರೂಪಾಕ್ಷಪ್ಪ ಯಮಕನಮರಡಿ ಅವರಿಗೆ ತುರ್ತು ನೊಟೀಸ್ ಜಾರಿ ಮಾಡಿ ವಿಚಾರಣೆಯನ್ನು ಆಗಸ್ಟ್ ಎರಡನೇ ವಾರಕ್ಕೆ ಮುಂದೂಡಿತು.
ಪ್ರಕರಣದ ಹಿನ್ನೆಲೆ
ಮಾಜಿ ಸಿಎಂ ಬಿ.ಎಸ್. ಯಡಿಯೂರಪ್ಪ ಅವರ ಪುತ್ರ ವಿಜಯೇಂದ್ರ ಹಾಗೂ ಇತರೆ ಆಪ್ತರು ಅಧಿಕಾರ ದುರ್ಬಳಕೆ ಮಾಡಿಕೊಂಡು ಭ್ರಷ್ಟಾಚಾರದಲ್ಲಿ ತೊಡಗಿದ್ದಾರೆ. ಸಿಎಂ ಕುಟುಂಬದವರು ನಕಲಿ ಕಂಪನಿಗಳಲ್ಲಿ ಹೂಡಿಕೆ ಮಾಡಿದ್ದಾರೆ. ಸರ್ಕಾರದ ವಿವಿಧ ಯೋಜನೆಗಳಲ್ಲಿ ಕೋಟ್ಯಂತರ ರೂಪಾಯಿ ಕಿಕ್ ಬ್ಯಾಕ್ ಪಡೆದಿದ್ದಾರೆ ಎಂದು ಸಾಮಾಜಿಕ ಕಾರ್ಯಕರ್ತ ಟಿ.ಜೆ. ಅಬ್ರಹಾಂ ಆರೋಪಿಸಿದ್ದರು. ಅಲ್ಲದೇ, ಇವರ ವಿರುದ್ಧ ತನಿಖೆ ನಡೆಸುವಂತೆ 2020ರ ನವೆಂಬರ್ 19ರಂದು ಭ್ರಷ್ಟಾಚಾರ ನಿಗ್ರಹ ದಳಕ್ಕೆ (ಎಸಿಬಿ) ದೂರು ನೀಡಿದ್ದರು. ಆದರೆ, ಎಸಿಬಿ ಅಧಿಕಾರಿಗಳು 2020ರ ಡಿಸೆಂಬರ್ 15ರಂದು ದೂರನ್ನು ಕೈಬಿಟ್ಟಿದ್ದರು ಎನ್ನಲಾಗ್ತಿದೆ.
ಆ ಬಳಿಕ 2021ರ ಜೂನ್ 6ರಂದು ವಿಶೇಷ ನ್ಯಾಯಾಲಯದಲ್ಲಿ ಪಿಸಿಆರ್ ದಾಖಲಿಸಿದ್ದ ಟಿ.ಜೆ. ಅಬ್ರಹಾಂ, ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ, ಅವರ ಪುತ್ರ ಬಿ.ವೈ.ವಿಜಯೇಂದ್ರ ಹಾಗೂ ಆಪ್ತರಾದ ಶಶಿಧರ ಮರಡಿ, ವಿರೂಪಾಕ್ಷಪ್ಪ ಯಮಕನಮರಡಿ, ಸಂಜಯಶ್ರೀ, ಚಂದ್ರಕಾಂತ್ ರಾಮಲಿಂಗಂ, ಮಾಜಿ ಸಚಿವ ಎಸ್.ಟಿ. ಸೋಮಶೇಖರ್, ಐಎಎಸ್ ಅಧಿಕಾರಿ ಡಾ.ಜಿ.ಸಿ ಪ್ರಕಾಶ್, ಕ್ರೆಸೆಂಟ್ ಹೋಟೆಲ್ ಮಾಲೀಕರಾದ ಕೆ.ರವಿ ವಿರುದ್ಧ ಭ್ರಷ್ಟಾಚಾರ ತಡೆ ಕಾಯ್ದೆಯ ಸೆಕ್ಷನ್ 7, 8, 9, 10, 13 ಹಾಗೂ ಭಾರತೀಯ ದಂಡ ಸಂಹಿತೆಯ ಸೆಕ್ಷನ್ 383, 384, 415, 418, 420 ಹಾಗೂ 120 ಬಿ ಅಡಿ ಎಫ್ಐಆರ್ ದಾಖಲಿಸಿಕೊಂಡು ತನಿಖೆ ನಡೆಸುವಂತೆ ಸೂಕ್ತ ತನಿಖಾ ಸಂಸ್ಥೆಗೆ ನಿರ್ದೇಶಿಸಬೇಕು ಎಂದು ಕೋರಿದ್ದರು. ಆದರೆ, ವಿಶೇಷ ನ್ಯಾಯಾಲಯ ಆರೋಪಿತಗಳಾದ ಬಿಎಸ್‌ವೈ ಮತ್ತಿತರರ ವಿರುದ್ಧ ತನಿಖೆಗೆ ಪೂರ್ವಾನುಮತಿ ಪಡೆದಿಲ್ಲವೆಂದು ಅರ್ಜಿಯನ್ನು ವಜಾಗೊಳಿಸಿತ್ತು.