ದೇವನಹಳ್ಳಿ: ರಾಜ್ಯದಲ್ಲಿ ಕೊರೊನಾ ಸೋಂಕಿತರ ಸಂಖ್ಯೆ ಹೆಚ್ಚುತ್ತಿರುವ ಹಿನ್ನೆಲೆ ಸರ್ಕಾರ ಕಟ್ಟೆಚ್ಚರ ವಹಿಸಿದೆ. ಈ ನಿಟ್ಟಿನಲ್ಲಿ ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲೂ ತೀವ್ರ ನಿಗಾ ವಹಿಸಲಾಗಿದೆ. ವಿದೇಶದಿಂದ ಆಗಮಿಸಿದ ಪ್ರಯಾಣಿಕರಿಗೆ ಸ್ಕ್ರೀನಿಂಗ್ ಮತ್ತು ಸ್ಟ್ಯಾಂಪಿಂಗ್ ಮಾಡುವ ಮೂಲಕ ಕೊರೊನಾ ತಡೆಗೆ ಜಿಲ್ಲಾಡಳಿತ ಮುನ್ನೆಚ್ಚರಿಕೆ ವಹಿಸಿದೆ.
ವಿದೇಶದಿಂದ ಬರುವ ಪ್ರಯಾಣಿಕರನ್ನ A, B, C ಗ್ರೇಡ್ ನೀಡಿ ವರ್ಗೀಕರಣ ಮಾಡಲಾಗುತ್ತಿದೆ. ಕೊರೊನಾ ಶಂಕಿತರನ್ನ A ವರ್ಗಕ್ಕೆ, 60 ವರ್ಷ ಮೇಲ್ಪಟ್ಟವರನ್ನ ಪ್ರತ್ಯೇಕಿಸಿ ಅವರಿಗೆ ಬಿಪಿ, ಶುಗರ್, ಅಸ್ತಮಾ ಇದ್ದಲ್ಲಿ ಅಂತವರನ್ನು B ವರ್ಗಕ್ಕೆ ಸೇರಿಸಲಾಗುತ್ತಿದೆ. ಇನ್ನುಳಿದ ಪ್ರಯಾಣಿಕರನ್ನ C ಕೆಟಗರಿಗೆ ಸೇರಿಸಲಾಗಿದೆ. A ಮತ್ತು B ವರ್ಗದ ಪ್ರಯಾಣಿಕರನ್ನ ವಿಮಾನ ನಿಲ್ದಾಣದಿಂದ ನೇರವಾಗಿ ದೇವನಹಳ್ಳಿಯ ಆಕಾಶ್ ಹಾಸ್ಪಿಟಲ್ಗೆ ಕಳುಹಿಸಿ ತಪಾಸಣೆಗೆ ಒಳಪಡಿಸಲಾಗುತ್ತಿದೆ.
C ವರ್ಗದ ಪ್ರಯಾಣಿಕರಿಗೆ ಬಲಗೈನ ಮುಂಗೈ ಮೇಲೆ ಸ್ಟ್ಯಾಂಪಿಂಗ್ ಹಾಕಿ ಹೋಂ ಕ್ವಾರಂಟೈನ್ಗೆ ಕಳುಹಿಸಲಾಗುತ್ತಿದೆ. ಇವರು 14 ದಿನಗಳ ಕಾಲ ಮನೆಯಲ್ಲಿ ಪ್ರತ್ಯೇಕವಾಗಿ ವಾಸವಿರಬೇಕು. ಇವರು ಸಾರ್ವಜನಿಕರೊಂದಿಗೆ ಬೆರೆಯಬಾರದು. ಒಂದು ವೇಳೆ ಇವರು ಸಾರ್ವಜನಿಕ ಪ್ರದೇಶದಲ್ಲಿ ಕಂಡು ಬಂದಲ್ಲಿ ಆರೋಗ್ಯ ಇಲಾಖೆಯ ಗಮನಕ್ಕೆ ತರಬೇಕು ಎಂದು ಬೆಂಗಳೂರು ಗ್ರಾಮಾಂತರ ಜಿಲ್ಲಾಧಿಕಾರಿ ಪಿ.ಎಸ್. ರವೀಂದ್ರ ಮನವಿ ಮಾಡಿದ್ದಾರೆ.
ಬುಧವಾರ ರಾತ್ರಿ 8 ಗಂಟೆಯಿಂದ ಇಂದು ಬೆಳಗ್ಗೆ 8 ಗಂಟೆಯವರೆಗೂ 230 ಪ್ರಯಾಣಿಕರಿಗೆ ಸ್ಕ್ರೀನಿಂಗ್ ಮಾಡಲಾಗಿದೆ. ಸ್ಕ್ರೀನಿಂಗ್ ವೇಳೆ ಓರ್ವನನ್ನು A ಗ್ರೇಡ್, ಮೂವರಿಗೆ B ಗ್ರೇಡ್ ಮತ್ತು 226 ಜನರಿಗೆ C ಗ್ರೇಡ್ಗೆ ಸೇರಿಸಲಾಗಿದೆ.