ಬೆಂಗಳೂರು: 21 ದಿನಗಳ ಕಾಲ ದೇಶವನ್ನು ಸಂಪೂರ್ಣ ಲಾಕ್ಡೌನ್ ಮಾಡಲಾಗಿದೆ ಎಂದು ಇಂದು ಪ್ರಧಾನಿ ಮೋದಿ ಹೇಳುತ್ತಲೇ ಇದ್ದಾರೆ, ನಗರದ ನಿವಾಸಿಗಳು ದಿನಸಿ ಅಂಗಡಿಗೆ ಮುಗಿಬಿದ್ದು ಸಾಮಗ್ರಿಗಳನ್ನು ಖರೀದಿಸಲು ಮುತ್ತಿಗೆ ಹಾಕಿದರು.
ಜನರು ಆತಂಕಕ್ಕೆ ಒಳಗಾಗಿ ಒಂದು ತಿಂಗಳಿಗೆ ಆಗುವಷ್ಟು ದಿನಸಿ ಹಾಗೂ ಯುಗಾದಿ ಹಬ್ಬಕ್ಕೆ ವಿಶೇಷವಾಗಿ ಸಾಮಗ್ರಿಗಳ ಖರೀದಿಗೆ ಮುಂದಾದರು. ನಗರದ ಎಲ್ಲ ಬಡಾವಣೆಗಳಲ್ಲಿ ದಿನಸಿ ಅಂಗಡಿಯಲ್ಲಿ ಕಾಲಿಡುವುದಕ್ಕೂ ಜಾಗವಿಲ್ಲದ ಪರಿಸ್ಥಿತಿ ನಿರ್ಮಾಣವಾಗಿದೆ.
ಆರೋಗ್ಯ ಇಲಾಖೆ ಮನೆಯಿಂದ ಒಬ್ಬರು ಬಂದು ಅಗತ್ಯ ವಸ್ತು ಖರೀದಿಸಲು ಸೂಚನೆ ನೀಡಿದ್ದರೂ, ಕೆಲವರು ಮಕ್ಕಳ ಜೊತೆ ಆಗಮಿಸಿ ಸಾಮಗ್ರಿ ಖರೀದಿಸುತ್ತಿರುವ ದೃಶ್ಯ ಕಂಡುಬಂದಿತು.
ಶ್ರೀಗುರು ರಾಘವೇಂದ್ರಸ್ವಾಮಿ ಮಠದ ಸ್ವಾಮೀಜಿ ಸೇರಿದಂತೆ ಎಲ್ಲ ಧಾರ್ಮಿಕ ಮುಖಂಡರು ಯುಗಾದಿ ಹಬ್ಬವನ್ನು ಸರಳವಾಗಿ ಆಚರಿಸುವಂತೆ ಕಿವಿಮಾತು ಹೇಳಿದ್ದಾರೆ.