ಬೆಂಗಳೂರು: ಸಾಂಕ್ರಾಮಿಕ ರೋಗ ಕೊರೊನಾದ ಎರಡು ಅಲೆಗಳನ್ನು ಎದುರಿಸಿರುವ ನಾವುಗಳು ಸದ್ಯ ಮೂರನೇ ಅಲೆಯ ಕುರಿತು ಎಚ್ಚರಿಕೆಯಿಂದ ಇರಬೇಕಾದ ಅನಿರ್ವಾಯತೆ ಸೃಷ್ಟಿಯಾಗಿದೆ.
ಮೂರನೇ ಅಲೆ ಅಪ್ಪಳಿಸುವುದು ನಾವು ಕೋವಿಡ್ ನಿಯಮ ಹೇಗೆ ಪಾಲಿಸುತ್ತೇವೆ ಎಂಬುದರ ಮೇಲೆ ನಿಂತಿದೆ. ಸದ್ಯ ತಾಂತ್ರಿಕ ಸಲಹಾ ಸಮಿತಿ ಮೂರನೇ ಅಲೆಯಲ್ಲಿ ಮಕ್ಕಳೇ ಹೆಚ್ಚು ಟಾರ್ಗೆಟ್ ಆಗುವ ಮುನ್ಸೂಚನೆಯನ್ನ ನೀಡಿದೆ. ಹೀಗಾಗಿ ಮಕ್ಕಳ ಬಗ್ಗೆ ಹೆಚ್ಚು ಜಾಗ್ರತೆ ವಹಿಸುವ ಅವಶ್ಯಕತೆ ಇರುತ್ತದೆ.
ಈ ಕುರಿತು ಮಾತನಾಡಿರುವ ಮಕ್ಕಳ ತಜ್ಞರ ಸಮಿತಿ ಸದಸ್ಯರಾಗಿರುವ ಮಕ್ಕಳ ಶ್ವಾಸಕೋಶ ತಜ್ಞ ಶ್ರೀಕಂಠ ಜೆ.ಟಿ ಅವರು, ಸ್ಥೂಲಕಾಯ ಇರುವ ಮಕ್ಕಳ ಪೋಷಕರು ಎಚ್ಚರಿಕೆ ವಹಿಸಬೇಕು. ಏಕೆಂದರೆ ಒಂದು ಮತ್ತು ಎರಡನೇ ಅಲೆಯಲ್ಲಿ ಸ್ಥೂಲಕಾಯ ಇರುವ ಹೆಚ್ಚು ಮಕ್ಕಳಲ್ಲಿ ಜಾಸ್ತಿ ಸೋಂಕು ಕಾಣಿಸಿಕೊಂಡಿತ್ತು ಎಂದಿದ್ದಾರೆ.
ಸ್ಥೂಲಕಾಯ ಇರುವ ಮಕ್ಕಳಲ್ಲಿ ACE 2 ರಿಸೆಪ್ಟರ್ ಹೆಚ್ಚಾಗಿ ಇರಲಿದ್ದು, ವೈರಸ್ ಅನ್ನು ಜೀವಕೋಶದೊಳಕ್ಕೆ ಎಳೆದುಕೊಳ್ಳುವ ಕಾರ್ಯ ಮಾಡುತ್ತದೆ. ಹೀಗಾಗಿ, ಒಬೆಸಿಟಿ ಇರುವ ಮಕ್ಕಳಿಗೆ ಸೋಂಕಿನ ತೀವ್ರತೆ ಹೆಚ್ಚಾಗಿರುತ್ತದೆ. ಇದರ ಜೊತೆಗೆ ಟೈಪ್ 1 ಡಯಾಬಿಟಿಸ್ ಇರುವ ಮಕ್ಕಳಲ್ಲೂ ತೀವ್ರತೆ ಹೆಚ್ಚು ಇರುವುದು ಕಂಡು ಬಂದಿದೆ. ಹಾಗೇ ಥಲಸೇಮಿಯಾ, ಕಿಡ್ನಿ ಸಮಸ್ಯೆ ಇರುವ ಮಕ್ಕಳ ಬಗ್ಗೆ ಮುಂಜಾಗ್ರತಾ ಕ್ರಮ ಕೈಗೊಳ್ಳಬೇಕು ಎಂದು ಶ್ರೀಕಂಠ ಜೆ.ಟಿ. ಸಲಹೆ ನೀಡಿದ್ದಾರೆ.
ಇದನ್ನೂ ಓದಿ: ಅಜೆಂಡಾವೊಂದರ ಭಾಗವಾಗಿ ದೂರು, ನನ್ನ ಧ್ವನಿ ಅಡಗಿಸುವ ಯತ್ನ: ನಟಿ ಆಯಿಷಾ ಆರೋಪ
ಮಕ್ಕಳಿಗೂ ವ್ಯಾಕ್ಸಿನೇಷನ್ ಬಂದರೆ ಆದ್ಯತೆ ಮೇರೆಗೆ ಲಸಿಕೆ ಹಾಕಿಸುವ ಕೆಲಸವನ್ನು ಮಾಡಬೇಕು ಅಂತ ತಿಳಿಸಿದ್ದಾರೆ. ಒಟ್ಟಾರೆ, ಮೂರನೇ ಅಲೆ ಬರುತ್ತೋ? ಬಿಡುತ್ತೋ?, ಮಕ್ಕಳಿಂದ ಹಿಡಿದು ಹಿರಿಯರವರೆಗೆ ಎಲ್ಲರೂ ಎಚ್ಚರಿಕೆಯಿಂದ ಇರುವುದು ಒಳಿತು ಎಂಬುದು ತಜ್ಞರ ಅಭಿಪ್ರಾಯ.