ಬೆಂಗಳೂರು : ರಾಜ್ಯದ ಹಲವಾರು ಸರ್ಕಾರಿ ಕಚೇರಿಗಳಲ್ಲೂ ಸೋಂಕಿತರು ಕಾಣಿಸಿಕೊಂಡಿರುವುದು ಆಡಳಿತ ವ್ಯವಸ್ಥೆ ಮೇಲೆ ಪರಿಣಾಮ ಬೀರಲಾರಂಭಿಸಿದೆ.
ಕೊರೊನಾ ನಿಯಂತ್ರಣ ಕಷ್ಟವಾಗಿರುವುದರಿಂದ ಜನಜೀವನ ಸೋಂಕಿನೊಂದಿಗೆ ಹೊಂದಿಕೊಂಡು ಹೋಗಬೇಕೆಂದು ಸರ್ಕಾರ ಈಗಾಗಲೇ ಘೋಷಣೆ ಮಾಡಿದೆ. ಹೀಗಾಗಿ ಇಕ್ಕಟ್ಟಿಗೆ ಸಿಲುಕಿರುವ ಅಧಿಕಾರಿಗಳು, ಕೊರೊನಾ ಪೀಡಿತರು ಕಣ್ಣೆದುರಿಗೇ ಇದ್ದರೂ ಅಂಗೈಯಲ್ಲಿ ಜೀವ ಹಿಡಿದು ದಿನನಿತ್ಯದ ಕೆಲಸ ಮಾಡುವುದು ಅನಿವಾರ್ಯವಾಗಿದೆ. ವಿಧಾನಸೌಧ, ವಿಕಾಸಸೌಧ, ವಿವಿ ಟವರ್ ಸೇರಿ ಕೆಲವು ಕಚೇರಿಗಳಲ್ಲಿ ಸೋಂಕು ಪತ್ತೆಯಾದ ತಕ್ಷಣ ಸ್ಯಾನಿಟೈಸ್ ಮಾಡಲು ಒಂದೆರಡು ದಿನ ರಜೆ ಕೊಟ್ಟು, ಮತ್ತೆ ಕಚೇರಿ ಆರಂಭಿಸುತ್ತಿದ್ದಾರೆ. ಯಾರಿಗೆ, ಯಾವ ಮೂಲದಿಂದ, ಯಾವಾಗ ಸೋಂಕು ತಗಲುತ್ತಿದೆ ಎಂಬ ಮಾಹಿತಿ ತಿಳಿಯದೇ ಅಧಿಕಾರಿಗಳು, ಸಿಬ್ಬಂದಿ ಕಂಗಲಾಗಿದ್ದಾರೆ. ಹೀಗಾಗಿ ಕೆಲಸದಲ್ಲಿ ನಿರುತ್ಸಾಹ ತೋರುವುದರಿಂದ ಆಡಳಿತ ಯಂತ್ರದ ಮೇಲೆ ಪೆಟ್ಟು ಬೀಳಲಿದೆ.
ಆರ್ಥಿಕ ಪರಿಸ್ಥಿತಿ ಕುಂಠಿತ : ಎರಡು ತಿಂಗಳ ಲಾಕ್ಡೌನ್ ಅವಧಿಯಲ್ಲಿ ಸಣ್ಣ ಮತ್ತು ಮಧ್ಯಮ ಕೈಗಾರಿಕೆಗಳ ಉತ್ಪಾದನೆ ಹಾಗೂ ವಿದೇಶಿ ಆಮದು ಸ್ಥಗಿತವಾಗಿದೆ. ಜೊತೆಗೆ ಇದೀಗ ಜನರೇ ಅಲ್ಲಲ್ಲಿ ಘೋಷಿಸಿಕೊಂಡಿರುವ ಸ್ವಯಂ ಲಾಕ್ಡೌನ್ನಿಂದಾಗಿ ಗೃಹೋಪಯೋಗಿ ವಸ್ತುಗಳ ಅಭಾವ ಹೆಚ್ಚಿದೆ. ಇದರ ಪರಿಣಾಮ ಜನರಿಗೆ ಬೆಲೆ ಏರಿಕೆ ಹೊಡೆತ ಬೀಳುವ ಆತಂಕ ಶುರುವಾಗಿದೆ. ಕೈಗಾರಿಕೆಗಳು ಶೇ. 90ರಷ್ಟು ಈಗ ಆರಂಭಗೊಂಡಿದ್ದರೂ, ಪೂರ್ಣಪ್ರಮಾಣದಲ್ಲಿ ಉತ್ಪಾದನೆ ಆರಂಭಗೊಂಡಿಲ್ಲ. ವಲಸೆ ಕಾರ್ವಿುಕರು ಊರು ಸೇರಿರುವುದರಿಂದ ಕಾರ್ವಿುಕರ ಕೊರತೆ ಹಾಗೂ ಕಚ್ಚಾ ವಸ್ತುಗಳ ಕೊರತೆ ಎದುರಾಗಿದೆ. ಇದರಿಂದಾಗಿ ಉತ್ಪಾದನೆ ನಿಂತಿದೆ. ಡಿಸೆಂಬರ್‌ವರೆಗೂ ಕೈಗಾರಿಕೆಗಳು ಚೇತರಿಕೆ ಕಾಣುವುದು ಅನುಮಾನ ಎಂಬುದು ತಜ್ಞರ ಅಭಿಪ್ರಾಯ.
ಇನ್ನು, ಸ್ವಯಂ ಲಾಕ್ಡೌನ್ನಿಂದಾಗಿ ಪ್ರಮುಖ ಕೇಂದ್ರಗಳಾದ ಕೆ ಆರ್ ಮಾರ್ಕೇಟ್, ಚಿಕ್ಕಪೇಟೆ, ಮಲ್ಲೇಶ್ವರಂ, ಯಶವಂತಪುರ, ಜಯನಗರದಲ್ಲಿ ಮಧ್ಯಾಹ್ನದವರೆಗಷ್ಟೇ ವ್ಯಾಪಾರ, ವಹಿವಾಟು ನಡೆಸಲಾಗುತ್ತಿದೆ. ಮತ್ತೆ ಕೆಲವೆಡೆ ಸಂಪೂರ್ಣ ಬಂದ್ ಮಾಡಲಾಗಿದೆ. ಇದರಿಂದಾಗಿ ಉತ್ಪನ್ನಗಳ ಸಾಗಾಟಕ್ಕೂ ತೊಂದರೆಯಾಗಿದೆ. ಲಾಕ್ಡೌನ್ನಿಂದಾಗಿ ಅಂಗಡಿ ಬಾಗಿಲು ತೆರೆಯದ ಕಾರಣಕ್ಕೆ ಕೆಲ ಪದಾರ್ಥಗಳು ಮಾರಾಟವಾಗದೆ, ಅವಧಿ ಮೀರಿ ಹಾಳಾಗಿವೆ. ವ್ಯಾಪಾರ, ವಹಿವಾಟಿಗೆ ರಾಜ್ಯ ಸರ್ಕಾರ ಅನುಮತಿ ಕೊಟ್ಟಿದೆ. ಆದರೆ, ಕೊರೊನಾ ಸೋಂಕಿಗೆ ಭಯಪಟ್ಟು ಜನರೇ ಬಹುತೇಕ ಕಡೆ ಸ್ವಯಂ ಲಾಕ್ಡೌನ್ ಘೋಷಿಸಿಕೊಂಡಿರುವುದರಿಂದ ಮಾರಾಟ ಸಾಧ್ಯವಾಗುತ್ತಿಲ್ಲ. ಇದು ಹೀಗೆ ಮುಂದುವರೆದರೆ ಆರ್ಥಿಕ ಪರಿಸ್ಥಿತಿ ಭಾರೀ ಹೊಡೆತ ಉಂಟಾಗಲಿದೆ ಎನ್ನುತ್ತಾರೆ ಆರ್ಥಿಕ ತಜ್ಞರು.