ಬೆಂಗಳೂರು: ಕೊರೊನಾಗೆ ಮತ್ತೊಂದು ಬಲಿಯಾಗಿದ್ದು ರಾಜ್ಯದಲ್ಲಿ ಸೋಂಕಿತರ ಸಾವಿನ ಸಂಖ್ಯೆ 32ಕ್ಕೆ ಏರಿಕೆಯಾಗಿದೆ. ಇಂದು ಒಂದೇ ದಿನ 26 ಹೊಸ ಸೋಂಕಿತರು ಪತ್ತೆಯಾಗಿದ್ದು, ಒಟ್ಟು ಸೋಂಕಿತರ ಸಂಖ್ಯೆ 951ಕ್ಕೆ ಏರಿದೆ.
ಬೆಂಗಳೂರಿನಲ್ಲಿ ಸೋಂಕಿತನೊಬ್ಬ ಪತ್ತೆಯಾಗಿದ್ದು, ಸೋಂಕಿನ ಮೂಲ ಪತ್ತೆ ಹಚ್ಚಲಾಗುತ್ತಿದೆ. ಕಲಬುರಗಿಯಲ್ಲಿ 2, ಹಾಸನದಲ್ಲಿ 4, ಉತ್ತರ ಕನ್ನಡದಲ್ಲಿ 2, ಬಳ್ಳಾರಿಯಲ್ಲಿ 1, ಬೀದರ್ನಲ್ಲಿ 11, ದಾವಣಗೆರೆಯಲ್ಲಿ 2, ವಿಜಯಪುರದಲ್ಲಿ 2, ದಕ್ಷಿಣ ಕನ್ನಡದಲ್ಲಿ ಓರ್ವನಲ್ಲಿ ಸೋಂಕು ಪತ್ತೆಯಾಗಿದೆ.
ಕಲಬುರಗಿಯ ನಿವಾಸಿಯಾದ ಕಂಟೇನ್ಮೆಂಟ್ ಝೋನ್ನಲ್ಲಿದ್ದ 60 ವರ್ಷದ ವೃದ್ಧ (ರೋಗಿ ಸಂಖ್ಯೆ 927) ಸಾವನ್ನಪ್ಪಿದ್ದು, ಮೇ 11ರಂದು ಆಸ್ಪತ್ರೆಗೆ ಕರೆ ತರುವ ಮೊದಲೇ ಮೃತಪಟ್ಟಿದ್ದಾರೆ. ಇವರಿಗೆ ಸೋಂಕು ಇರುವುದು ಈಗ ದೃಢಪಟ್ಟಿದೆ.
ಕೊರೊನಾ ವಾರಿಯರ್ಸ್ಗೆ ಕೊರೊನಾ:
ವಿಕ್ಟೋರಿಯಾ ಆಸ್ಪತ್ರೆಯ ಕೋವಿಡ್ ವಾರ್ಡ್ನಲ್ಲಿ ಕೆಲಸ ಮಾಡ್ತಿದ್ದ ನರ್ಸ್ನಲ್ಲಿ(ರೋಗಿ ಸಂಖ್ಯೆ 928) ಕೊರೊನಾ ದೃಢಪಟ್ಟಿದೆ. ಬ್ಯಾಚ್ ಪ್ರಕಾರ, ಕೋವಿಡ್ ವಾರ್ಡ್ನಲ್ಲಿ ಇವರು ಕೆಲಸ ಮಾಡುತ್ತಿದ್ದರು. ಅದೇ ರೀತಿ 20 ಸ್ಟಾಫ್ ನರ್ಸ್ಗಳನ್ನು ಕರ್ತವ್ಯಕ್ಕೆ ನಿಯೋಜನೆ ಮಾಡಲಾಗಿತ್ತು. 14 ದಿನ ಕರ್ತವ್ಯ ನಿರ್ವಹಿಸಿದವರನ್ನು ಸೋಂಕು ಪರೀಕ್ಷೆಗೆ ಒಳಪಡಿಸಲಾಗಿದ್ದು, 13ನೇ ದಿನ 20 ಸ್ಟಾಫ್ ನರ್ಸ್ಗಳಿಂದ ಗಂಟಲು ದ್ರವದ ಸ್ಯಾಂಪಲ್ ಪಡೆಯಲಾಗಿತ್ತು.
ಇವರಲ್ಲಿ ಈಗ ಕೊರೊನಾ ದೃಢಪಟ್ಟಿದೆ. ಪಿಪಿಇ ಕಿಟ್, ಸುರಕ್ಷತಾ ಕ್ರಮಗಳನ್ನು ತೆಗೆದುಕೊಂಡಿದ್ದರೂ ಹೇಗೆ ಸೋಂಕು ಹರಡಿದ ಬಗ್ಗೆ ಪತ್ತೆ ಮಾಡಲಾಗುತ್ತಿದೆ. ವಿಕ್ಟೋರಿಯಾದ 5ನೇ ಬ್ಯಾಚ್ನಲ್ಲಿ ಏಪ್ರಿಲ್ 22ರಿಂದ ಏಪ್ರಿಲ್ 28ವರೆಗೆ ರಾತ್ರಿ ಪಾಳಯದ ಡ್ಯೂಟಿಯಲ್ಲಿ ಕೆಲಸ ಮಾಡಿದ್ದರು ಎಂದು ತಿಳಿದುಬಂದಿದೆ.