ಬೆಂಗಳೂರು: ಮುಂಬೈನಲ್ಲಿ 53 ಪತ್ರಕರ್ತರಲ್ಲಿ ಕೊರೊನಾ ಸೋಂಕು ಪತ್ತೆಯಾದ ಹಿನ್ನೆಲೆಯಲ್ಲಿ ಎಚ್ಚೆತ್ತ ಸರ್ಕಾರ ರಾಜ್ಯದ ಪತ್ರಕರ್ತರಿಗೂ ಆರೋಗ್ಯ ತಪಾಸಣೆ ನಡೆಸಲು ನಿರ್ಧರಿಸಿದೆ.
ತಕ್ಷಣವೇ ಆರೋಗ್ಯ ತಪಾಸಣಾ ಶಿಬಿರ ಆಯೋಜಿಸುವಂತೆ ವಾರ್ತಾ ಇಲಾಖೆ ಆಯುಕ್ತರಿಗೆ ಸೂಚನೆ ನೀಡಿದೆ.
ಮುಂಬೈನಲ್ಲಿ ಆರೋಗ್ಯ ತಪಾಸಣಾ ಶಿಬಿರ ನಡೆಸಿ 171 ಪತ್ರಕರ್ತರ ಮಾದರಿ ಸಂಗ್ರಹ ಮಾಡಲಾಗಿತ್ತು. ಅದರಲ್ಲಿ 53 ಪತ್ರಕರ್ತರಿಗೆ ಸೋಂಕು ತಗುಲಿರುವುದು ದೃಢಪಟ್ಟಿದೆ.
ಹಾಗಾಗಿ ಸದಾ ಸಾರ್ವಜನಿಕರ ಸಂಪರ್ಕದಲ್ಲೇ ಇರುವ ರಾಜ್ಯದ ಪತ್ರಕರ್ತರಿಗೂ ಆರೋಗ್ಯ ತಪಾಸಣೆ ನಡೆಸುವ ಅಗತ್ಯವಿದೆ ಎಂದು ಪ್ರಾಥಮಿಕ ಹಾಗೂ ಪ್ರೌಢ ಶಿಕ್ಷಣ ಸಚಿವ ಎಸ್.ಸುರೇಶ್ ಕುಮಾರ್ ಅವರು ಬರೆದ ಪತ್ರವನ್ನು ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಪರಿಗಣಿಸಿದ್ದಾರೆ.
ಕೂಡಲೇ ಆರೋಗ್ಯ ತಪಾಸಣಾ ಶಿಬಿರ ನಡೆಸುವಂತೆ ವಾರ್ತಾ ಇಲಾಖೆ ಆಯುಕ್ತರಿಗೆ ಬಿ.ಎಸ್.ಯಡಿಯೂರಪ್ಪ ಸೂಚನೆ ನೀಡಿದ್ದಾರೆ.