ಗಂಗಾವತಿ: ತೀವ್ರ ಉಸಿರಾಟದ ಸಮಸ್ಯೆಯಿಂದ ಬಳಲುತ್ತಿದ್ದ ಕೋವಿಡ್ ಸೋಂಕಿತ ವ್ಯಕ್ತಿಯೊಬ್ಬ ಚಿಕಿತ್ಸೆ ಪಡೆಯುತ್ತಿದ್ದ ಆಸ್ಪತ್ರೆಯ ಕಂಪೌಂಡ್ ಜಿಗಿದು ಸಾವನ್ನಪ್ಪಿದ ಘಟನೆ ನಗರದಲ್ಲಿ ನಡೆದಿದೆ.
ತೀವ್ರ ಉಸಿರಾಟದ ಸಮಸ್ಯೆಯಿಂದ ಬಳಲುತ್ತಿದ್ದ 60 ವರ್ಷದ ವ್ಯಕ್ತಿಯನ್ನು ಸೋಮವಾರ ರಾತ್ರಿ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಈತ ತೀವ್ರ ನಿಗಾ ಘಟಕದಲ್ಲಿ ಚಿಕಿತ್ಸೆ ಪಡೆಯುತ್ತಿದ್ದ. ಬೆಳಗ್ಗೆ ಮೂತ್ರಾಲಯಕ್ಕೆ ಹೋಗಿ ಬರುವುದಾಗಿ ವೈದ್ಯ ಸಿಬ್ಬಂದಿಗೆ ಹೇಳಿದ್ದ.
ಆದರೆ ಆಸ್ಪತ್ರೆಯ ಹಿಂಬಾಗಿಲಿನ ಮೂಲಕ ಕಟ್ಟಡದ ಹೊರ ಆವರಣಕ್ಕೆ ಆಗಮಿಸಿ ಕಂಪೌಂಡ್ ಜಿಗಿದು ಹೊರ ಹೋಗಲು ಯತ್ನಿಸಿದ್ದಾನೆ. ಈ ಸಂದರ್ಭದಲ್ಲಿ ಉಸಿರಾಟದಲ್ಲಿ ಏರುಪೇರಾಗಿ ಲಘು ಹೃದಯಾಘಾತಕ್ಕೆ ಒಳಗಾಗಿ ಸಾವನ್ನಪ್ಪಿದ್ದಾನೆ ಎಂದು ತಿಳಿದುಬಂದಿದೆ.
ಸಾಮಾನ್ಯ ವ್ಯಕ್ತಿಗೆ ಉಸಿರಾಟದಲ್ಲಿನ ಆಕ್ಸಿಜನ್ ಪಲ್ಸ್ ರೇಟ್ ಪ್ರಮಾಣ 90ರಷ್ಟು ಇರಬೇಕು. ಆದರೆ ಈ ವ್ಯಕ್ತಿಗೆ ಕೇವಲ 30ರಷ್ಟು ಪಲ್ಸ್ ರೇಟ್ ತೋರಿಸುತ್ತಿತ್ತು. ಹೀಗಾಗಿ ಜಿಲ್ಲಾಸ್ಪತ್ರೆಗೆ ಕರೆದುಕೊಂಡು ಹೋಗುವಂತೆ ವೈದ್ಯರು ಶಿಫಾರಸು ಮಾಡಿದ್ದರು. ಆದ್ರೆ ಆ ವ್ಯಕ್ತಿಯ ಕುಟುಂಬ ಸದಸ್ಯರ ಒತ್ತಾಯಕ್ಕೆ ಮಣಿದು ಆಸ್ಪತ್ರೆಗೆ ದಾಖಲಿಸಿಕೊಳ್ಳಲಾಗಿತ್ತು.