ಬೆಂಗಳೂರು: ನಗರದಲ್ಲಿ ಕೋವಿಡ್ ಪಾಸಿಟಿವ್ ಪ್ರಕರಣಗಳು ಕೆಲ ವಾರ್ಡ್ಗಳಲ್ಲಿ ಏರಿಕೆಯಾಗುತ್ತಿದೆ. ಪ್ರತಿನಿತ್ಯ 500-600 ಹೊಸ ಕೇಸ್ ಬರುತ್ತಿದೆ. ಎಲ್ಲೆಲ್ಲಿ ಕೋವಿಡ್ ಪ್ರಕರಣ ಹೆಚ್ಚಾಗುತ್ತಿದೆ ಎಂಬ ಬಗ್ಗೆ ನಿಗಾ ಇಡಲಾಗುತ್ತಿದೆ. ಆರೋಗ್ಯ ಅಧಿಕಾರಿಗಳು ಗಮನ ಕೊಡುತ್ತಿದ್ದಾರೆ. ಮೇಲ್ನೋಟಕ್ಕೆ ಪೂರ್ವ ಹಾಗೂ ಮಹದೇವಪುರ ವಲಯಗಳಲ್ಲಿ ಹೆಚ್ಚಾಗುತ್ತಿದೆ ಎಂದು ಬಿಬಿಎಂಪಿ ಮುಖ್ಯ ಆಯುಕ್ತ ಗೌರವ್ ಗುಪ್ತಾ ತಿಳಿಸಿದರು.
ಇಂಡಿಯನ್ ಕೌನ್ಸಿಲ್ ಫಾರ್ ಮೆಡಿಕಲ್ ರಿಸರ್ಚ್ ಸಂಸ್ಥೆ ವತಿಯಿಂದ ಸೆರೋ ಸರ್ವೆ ಮಾಡಲಾಗುತ್ತಿದೆ. ಸರ್ವೆ ಮಾಹಿತಿಯನ್ನ ರಾಜ್ಯ ಸರ್ಕಾರಕ್ಕೆ ನೇರವಾಗಿ ಕೊಡುತ್ತಾರೆ. ಈ ಬಗ್ಗೆ ಪಾಲಿಕೆಗೆ ಹೆಚ್ಚಿನ ಮಾಹಿತಿ ಇರುವುದಿಲ್ಲ. ಯಾವ ಭಾಗದ ಜನರಲ್ಲಿ ಹೆಚ್ಚು ರೋಗ ನಿರೋಧಕ ಶಕ್ತಿ ಇದೆ ಎಂಬುದನ್ನು ಪತ್ತೆಹಚ್ಚಲು ಇದು ನೆರವಾಗಲಿದೆ ಎಂದರು.
ನಗರದಲ್ಲಿ ಶೇ.80 ರಷ್ಟು ಸೋಂಕಿತರಿಗೆ ಜಿನೋಮ್ ಸೀಕ್ವೆನ್ಸ್ನಲ್ಲಿ ರೂಪಾಂತರ ವೈರಸ್ ಇರುವ ಬಗ್ಗೆ ದೃಢಪಟ್ಟಿದೆ. ವೈರಸ್ ರೂಪಾಂತರ ತಳಿಯಾಗುವುದು ಅದರ ಸ್ವಭಾವ. ಮೊದಲನೇ ಅಲೆಯಲ್ಲಿ ಅಲ್ಫಾ ವೈರಸ್ ಇತ್ತು. ಈ ವರ್ಷ ಡೆಲ್ಟಾ ವೈರಸ್ ರೂಪಾಂತರಿ ತಳಿ ಹೆಚ್ಚು ಹಬ್ಬುತ್ತಿದೆ. ಬ್ರೆಜಿಲ್ನಲ್ಲಿ ಬಿಟಾ, ಗಾಮಾ ಎಂಬ ರೂಪಾಂತರಿ ತಳಿ ಕಂಡುಬರುತ್ತಿದೆ. ಆಸ್ಟ್ರೇಲಿಯಾ, ಯುಕೆಯಲ್ಲಿಯೂ ಡೆಲ್ಟಾ ವೈರಸ್ ಹೆಚ್ಚು ಕಾಡುತ್ತಿದೆ ಎಂದರು.
ಇದನ್ನೂ ಓದಿ: ಮಾಸ್ಕ್ ಹಾಕ್ಕೊಳ್ಳಿ ಎಂದಿದ್ದಕ್ಕೆ ಪೊಲೀಸರ ಮೇಲೆಯೇ ಹಲ್ಲೆ: ಬೆಂಗಳೂರಿನಲ್ಲಿ ಐವರ ಬಂಧನ
2 ತಿಂಗಳ ಹಿಂದಿನ ಡೆಲ್ಟಾ ವೈರಸ್ ಹಾಗೂ ಈಗಿನ ವೈರಸ್ ನಡುವೆ ಯಾವುದೇ ಬದಲಾವಣೆ ಕಂಡು ಬಂದಿಲ್ಲ. ಜಿನೋಮ್ ಸೀಕ್ವೆನ್ಸ್ ಹೆಚ್ಚಳದ ಬಗ್ಗೆ ತಜ್ಞರು ನೀಡುವ ಸಲಹೆ ಮೇರೆಗೆ ಅಧ್ಯಯನ ನಡೆಯಲಿದೆ ಎಂದರು.
ಬಿಬಿಎಂಪಿ ವತಿಯಿಂದ ದಾಖಲಾದವರಿಗೆ ಕೋವಿಡ್ ಚಿಕಿತ್ಸೆ ಸಂಪೂರ್ಣ ಉಚಿತವಾಗಿದೆ. ಸುವರ್ಣ ಆರೋಗ್ಯ ಟ್ರಸ್ಟ್ ಮೂಲಕ ಹಾಸಿಗೆ ಪಡೆದು, ಉಚಿತ ಸೇವೆ ನೀಡಲಾಗುತ್ತಿದೆ. ಇದು ನಮ್ಮ ರಾಜ್ಯದಲ್ಲಿ ಮಾತ್ರ ಈ ರೀತಿ ನಡೆಯುತ್ತಿದೆ. ಕೋವಿಡ್ ಚಿಕಿತ್ಸೆ ವೆಚ್ಚ ₹5 ಲಕ್ಷ ಮೀರಿದರೂ ಸರ್ಕಾರ ವೆಚ್ಚ ಭರಿಸಲಿದೆ ಎಂದು ತಿಳಿಸಿದರು.
ಎಲ್ಲಾ ರಾಜ್ಯದಲ್ಲೂ ಕೋವಿಡ್ ಹೆಚ್ಚಾಗುತ್ತಿರುವುದು ಗಂಭೀರ ವಿಷಯ. ನಮ್ಮ ರಾಜ್ಯದಲ್ಲಿ ಪಾಸಿಟಿವಿಟಿ ಪ್ರಮಾಣ ಶೇ.2 ಕ್ಕೆ ಇಳಿದಿದ್ದರೆ, ಕೇರಳ ರಾಜ್ಯದಲ್ಲಿ ಶೇ.10, ಮಹಾರಾಷ್ಟ್ರದಲ್ಲಿ ಶೇ.4 ರಷ್ಟು ಕೋವಿಡ್ ಕೇಸ್ ಪ್ರಕರಣಗಳಿವೆ. ಆದರೆ ಸದ್ಯ ರಾಜ್ಯದಲ್ಲಿ ಅನ್ಲಾಕ್ ಆಗಿರುವುದರಿಂದ, ಆ ರಾಜ್ಯಗಳಿಂದಲೂ ಜನರು ಓಡಾಟ ನಡೆಸುವುದರಿಂದ ಇಲ್ಲಿನ ಜನ ಬಹಳ ಎಚ್ಚರದಿಂದ ಇರಬೇಕಾಗುತ್ತದೆ. ಜನರು ಮಾಸ್ಕ್ ಧರಿಸಿ, ಸಾಮಾಜಿಕ ಅಂತರ ಕಾಪಾಡಬೇಕಿದೆ ಎಂದರು.
ಪಾಲಿಕೆ ಆಸ್ತಿಗಳ ಬಗ್ಗೆ ನಿರ್ಲಕ್ಷ್ಯ:
ಬಿಬಿಎಂಪಿ ವ್ಯಾಪ್ತಿಯ ಹಾಗೂ ಬಿಬಿಎಂಪಿಯ ಒಡೆತನದ 116 ಆಸ್ತಿಗಳ ಬೋಗ್ಯದ ಅವಧಿ ಮುಗಿದಿದ್ದರೂ ಪಾಲಿಕೆ ಕ್ರಮ ಕೈಗೊಳ್ಳದಿರುವ ಬಗ್ಗೆ ಪ್ರತಿಕ್ರಿಯಿಸಿದ ಬಿಬಿಎಂಪಿ ಮುಖ್ಯ ಆಯುಕ್ತ ಗೌರವ್ ಗುಪ್ತಾ, ಕಾನೂನು ಪ್ರಕಾರ ಆಸ್ತಿ ವಾಪಸ್ ಪಡೆಯುವ ಕೆಲಸ ಮಾಡುತ್ತಿದೆ. ಸಾರ್ವಜನಿಕ ಉದ್ದೇಶಕ್ಕೆ ಜಮೀನು ,ಕಟ್ಟಡ ಪಾಲಿಕೆಗೆ ವಾಪಸ್ ಬೇಕಿದೆ. ಕೂಡಲೇ ವಾಪಾಸು ಪಡೆಯುವ ಕೆಲಸ ಮಾಡಲಾಗುತ್ತದೆ ಎಂದರು.
ಇದನ್ನೂ ಓದಿ: ಕೇರಳದಲ್ಲಿ ಮತ್ತೆ 14 ಜನರಿಗೆ ಝಿಕಾ ದೃಢ : ಕರ್ನಾಟಕದಲ್ಲಿ ಹೆಚ್ಚಿದ ಆತಂಕ