ಬೆಂಗಳೂರು: ಭಾರಿ ಕುತೂಹಲ ಕೆರಳಿಸಿದ್ದ ಲೋಕಸಭಾ ಚುನಾವಣೆಯ ಫಲಿತಾಂಶ ಹೊರಬಿದ್ದಿದ್ದು, ವಿವಾದಿತ ಹೇಳಿಕೆ ನೀಡುತ್ತಿದ್ದ ಅಭ್ಯರ್ಥಿಗಳು ಸಹ ಗೆಲುವಿನ ನಗೆ ಬೀರಿದ್ದಾರೆ.
ರಾಜ್ಯದ ಲೋಕಸಭಾ ಚುನಾವಣೆ ಅನೇಕ ಅಚ್ಚರಿಗಳಿಗೆ ಕಾರಣವಾಗಿದೆ. ಮೋದಿ ಅಬ್ಬರಕ್ಕೆ ಅದೆಷ್ಟೋ ಘಟಾನುಘಟಿ ಎದುರಾಳಿಗಳೇ ಧೂಳಿಪಟವಾಗಿದ್ದಾರೆ. ಇನ್ನು ಇದೇ ಮೋದಿ ಅಲೆಗೆ ವಿವಾದಿತ ಬಿಜೆಪಿ ಅಭ್ಯರ್ಥಿಗಳೂ ಸುಲಭದ ಗೆಲುವು ಕಂಡಿದ್ದಾರೆ.
ಬಿಜೆಪಿ ಅಭ್ಯರ್ಥಿ ಅನಂತ ಕುಮಾರ್ ಹೆಗಡೆ ಭಾರಿ ವಿವಾದಗಳಿಂದಲೇ ಸುದ್ದಿಯಾಗುತ್ತಿದ್ದ ಸಂಸದ. ಪ್ರತಿ ಬಾರಿ ಒಂದಲ್ಲಾ ಒಂದು ವಿವಾದಾತ್ಮಕ ಹೇಳಿಕೆಗಳನ್ನು ನೀಡಿ, ಪ್ರತಿಪಕ್ಷಗಳ ಟೀಕೆಗಳಿಗೆ ಗುರಿಯಾಗುತ್ತಿದ್ದರು. ಸಂವಿಧಾನ ಬದಲಾವಣೆ, ಪರಿಶಿಷ್ಟ ವರ್ಗದವರ ವಿರುದ್ಧ ವಿವಾದಾತ್ಮಕ ಹೇಳಿಕೆ ಹಾಗೂ ಗೋಡ್ಸೆ ಪರವಾಗಿ ಟ್ವೀಟ್ ಮಾಡುವ ಮೂಲಕ ವಿವಾದದ ಕಿಚ್ಚು ಹೊತ್ತಿಸಿದ್ದರು. ಇಷ್ಟಾದರೂ ಅನಂತ್ ಕುಮಾರ್ ಹೆಗಡೆ ಉತ್ತರ ಕನ್ನಡದಲ್ಲಿ ಅತ್ಯಧಿಕ ಅಂತರದಲ್ಲಿ ಗೆಲುವು ಸಾಧಿಸಿದ್ದಾರೆ.
ಇನ್ನು ಮೈಸೂರು ಅಭ್ಯರ್ಥಿ ಪ್ರತಾಪ್ ಸಿಂಹ ಬಿಜೆಪಿಯ ಮತ್ತೊಬ್ಬ ವಿವಾದಾತ್ಮಕ ನಾಯಕ. ಇತ್ತೀಚೆಗೆ ಪ್ರತಾಪ್ ಸಿಂಹ ವಿವಾದಾದ್ಮಕ ಹೇಳಿಕೆಗಳಿಂದ ಸುದ್ದಿಯಾಗುತ್ತಿದ್ದರು. ಅವರು ಕೂಡ ಮೈಸೂರಿನಲ್ಲಿ 1,38,647 ಮತಗಳ ಅಂತರದಿಂದ ಭರ್ಜರಿ ಗೆಲುವು ಸಾಧಿಸಿದ್ದಾರೆ.
ಬೆಂಗಳೂರು ದಕ್ಷಿಣದ ಹೊಸಮುಖ ತೇಜಸ್ವಿ ಸೂರ್ಯ ಸಹ ವಿವಾದಕ್ಕೀಡಾಗಿದ್ದರು. ಬಿಜೆಪಿ ಅಭ್ಯರ್ಥಿಯಾಗಿ ಘೋಷಣೆಯಾದ ಬಳಿಕ ತೇಜಸ್ವಿ ಸೂರ್ಯ ವಿರುದ್ಧ ಯುವತಿಯಿಂದ ಆರೋಪವೊಂದು ಕೇಳಿ ಬಂದಿತ್ತು. ಈ ಸಂಬಂಧ ಕಾಂಗ್ರೆಸ್ ಕೂಡ ಸುದ್ದಿಗೋಷ್ಠಿ ನಡೆಸಿ ಆಡಿಯೋವೊಂದನ್ನು ಬಿಡುಗಡೆ ಮಾಡಿತ್ತು. ವಿವಾದಗಳಿಗೆ ತಲೆಕೆಡಿಸಿಕೊಳ್ಳದ ಜನತೆ ತೇಜಸ್ವಿ ಸೂರ್ಯ ಅವರಿಗೆ ಬೆಂಗಳೂರು ದಕ್ಷಿಣದಲ್ಲಿ ಬರೋಬ್ಬರಿ 3,31,139 ಅಂತರದ ಗೆಲುವು ನೀಡಿದ್ದಾರೆ.