ಬೆಂಗಳೂರು: ಬಿಬಿಎಂಪಿ ಮೇಯರ್ ಚುನಾವಣೆ ಹಿನ್ನೆಲೆಯಲ್ಲಿ ಕಾಂಗ್ರೆಸ್ ಜೊತೆಗಿನ ಮೈತ್ರಿ ಮುಂದುವರಿಕೆಗೆ ಜೆಡಿಎಸ್ ವರಿಷ್ಠರು ಗ್ರೀನ್ ಸಿಗ್ನಲ್ ನೀಡಿದ್ದು, ನಾಳೆ ನಡೆಯಲಿರುವ ಮೇಯರ್ ಚುನಾವಣೆಯಲ್ಲಿ ಉಪ ಮೇಯರ್ ಸ್ಥಾನಕ್ಕೆ ಸ್ಪರ್ಧಿಸಲು ಜೆಡಿಎಸ್ ನಿರ್ಧರಿಸಿದೆ.
ಈ ಸಂಬಂಧ ಪಕ್ಷದ ಕಚೇರಿ ಜೆಪಿ ಭವನದಲ್ಲಿಂದು ಜೆಡಿಎಸ್ನ ಬೆಂಗಳೂರು ನಗರ ಅಧ್ಯಕ್ಷ ಆರ್.ಪ್ರಕಾಶ್ ನೇತೃತ್ವದಲ್ಲಿ ಸಭೆ ನಡೆಯಿತು. ಸಭೆ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಪ್ರಕಾಶ್, ಬಿಬಿಎಂಪಿ ಮೇಯರ್ ಚುನಾವಣೆಯಲ್ಲಿ ಕಾಂಗ್ರೆಸ್ ಜೊತೆ ಮೈತ್ರಿ ಮುಂದುವರೆಸಲು ವರಿಷ್ಠರು ಸೂಚನೆ ನೀಡಿದ್ದಾರೆ. ಹೀಗಾಗಿ ಈ ವರ್ಷವೂ ಕಾಂಗ್ರೆಸ್ ಜೊತೆ ಮೈತ್ರಿ ಮಾಡಿಕೊಳ್ಳುತ್ತೇವೆ ಎಂದರು. ಮೇಯರ್ ಸ್ಥಾನ ಕಾಂಗ್ರೆಸ್ಗೆ ಹಾಗೂ ಜೆಡಿಎಸ್ಗೆ ಉಪ ಮೇಯರ್ ಸ್ಥಾನ ಹಂಚಿಕೊಳ್ಳುವ ಬಗ್ಗೆ ಚರ್ಚೆಯಾಗಿದೆ.
ನಮ್ಮ ಪಕ್ಷದಿಂದ ಈಗಾಗಲೇ ಉಪ ಮೇಯರ್ ಅಭ್ಯರ್ಥಿ ಆಯ್ಕೆ ಮಾಡಿದ್ದೇವೆ. ಒಂದು ವೇಳೆ ನಾಳೆ ಮೇಯರ್ ಚುನಾವಣೆ ನಡೆದರೆ, ಕಾಂಗ್ರೆಸ್ ಜೊತೆ ಒಟ್ಟಿಗೆ ನಾಮಪತ್ರ ಸಲ್ಲಿಕೆ ಮಾಡಲಾಗುವುದು. ನಮ್ಮಲ್ಲಿ ಯಾವುದೇ ಗೊಂದಲವಿಲ್ಲ. ಉಪ ಮೇಯರ್ ಅಭ್ಯರ್ಥಿ, ಈಗಾಗಲೇ ದಾಖಲಾತಿ ಸಿದ್ಧತೆ ಮಾಡಿಕೊಂಡಿದ್ದಾರೆ. ಚುನಾವಣೆ ಮಾಡೋದು ಪಕ್ಕಾ ಆದರೆ, ಅಭ್ಯರ್ಥಿ ಘೋಷಣೆ ಮಾಡ್ತೀವಿ ಎಂದರು.
ಬಿಜೆಪಿ ಅವರಲ್ಲಿ ಒಗ್ಗಟ್ಟಿಲ್ಲ, ಅವರಲ್ಲಿ ಗೊಂದಲ ಉಂಟಾಗಿದೆ. ಬಿಜೆಪಿಯಲ್ಲಿ ಅಧಿಕಾರಕ್ಕಾಗಿ ಕಿತ್ತಾಟ ನಡೆಯುತ್ತಿದೆ. ಒಬ್ಬ ಮೇಯರ್ ಅಭ್ಯರ್ಥಿ ಆಯ್ಕೆ ಮಾಡಲು ಬಿಜೆಪಿಗೆ ಆಗ್ತಿಲ್ಲ. ಇವರಿಗೆ ಬೆಂಗಳೂರು ಬಗ್ಗೆ ಕಾಳಜಿ ಇಲ್ಲ ಎಂದು ಕಿಡಿಕಾರಿದರು.
ಮೇಯರ್ ಅವಧಿ ಮುಗಿದಿದೆ.. ಚುನಾವಣೆ ನಡೆಸುವುದು ನನ್ನ ಕರ್ತವ್ಯ: ಹರ್ಷಗುಪ್ತ
ಈಗಾಗಲೇ ನಿಗದಿಪಡಿಸಿದಂತೆ ಅಕ್ಟೋಬರ್ 1ರಂದು ಮೇಯರ್-ಉಪಮೇಯರ್ ಹಾಗೂ ನಾಲ್ಕು ಸ್ಥಾಯಿ ಸಮಿತಿಗಳ ಚುನಾವಣೆ ನಡೆಯುತ್ತದೆ ಎಂದು ಪ್ರಾದೇಶಿಕ ಚುನಾವಣಾ ಆಯುಕ್ತರಾದ ಹರ್ಷಗುಪ್ತ ತಿಳಿಸಿದ್ದಾರೆ.
ನಗರಾಭಿವೃದ್ಧಿ ಇಲಾಖೆ ಪತ್ರದಲ್ಲಿ ತಿಳಿಸಿರುವಂತೆ, ಕೆಎಂಸಿ ಕಾಯ್ದೆ 10(1), 11(2), (ಬಿ) ಹಾಗೂ ಉಚ್ಛ ನ್ಯಾಯಾಲಯದ ತೀರ್ಪಿನ ಅನ್ವಯ ಕಾನೂನಿನ ಪ್ರಕಾರವೇ ನಾಳೆ ಚುನಾವಣೆ ನಡೆಯಲಿದೆ. ಚುನಾವಣೆ ಮುಂದೂಡುವ ಅಗತ್ಯವಿಲ್ಲ. ಮೇಯರ್ ಅವಧಿ ಸೆಪ್ಟೆಂಬರ್ 27ಕ್ಕೆ ಮುಗಿದಿರುವುದರಿಂದ ಚುನಾವಣೆ ನಡೆಸುವುದು ಚುನಾವಣಾಧಿಕಾರಿಯಾಗಿ ನನ್ನ ಕರ್ತವ್ಯ ಎಂದು ಹರ್ಷಗುಪ್ತ ತಿಳಿಸಿದ್ದಾರೆ.
ನಾಳೆ ಮೇಯರ್-ಉಪಮೇಯರ್, ತೆರಿಗೆ ಮತ್ತು ಆರ್ಥಿಕ ಸ್ಥಾಯಿ ಸಮಿತಿ, ಮಾರುಕಟ್ಟೆ, ಲೆಕ್ಕಪತ್ರ ಹಾಗೂ ಆರೋಗ್ಯ ಸ್ಥಾಯಿ ಸಮಿತಿ ಚುನಾವಣೆ ನಡೆಯಲಿದೆ. ನಾಮಪತ್ರ ಸಲ್ಲಿಕೆ 8-30 ರಿಂದ ನಡೆಯಲಿದ್ದು, 11-30ಕ್ಕೆ ಚುನಾವಣೆ ನಡೆಯಲಿದೆ.