ಬೆಂಗಳೂರು: ರಾಜ್ಯದ ಪ್ರತಿ ಜಿಲ್ಲೆಗಳಲ್ಲಿ ಒಂದರಂತೆ 31 ಗೋಶಾಲೆ ಮತ್ತು ಹೆಚ್ಚುವರಿಯಾಗಿ 69 ಗೋಶಾಲೆಗಳು ಸೇರಿದಂತೆ ಒಟ್ಟು 100 ಗೋಶಾಲೆಗಳನ್ನು ಈ ವರ್ಷದ ಅಂತ್ಯದೊಳಗೆ ನಿರ್ಮಾಣ ಮಾಡಲಾಗುತ್ತದೆ ಎಂದು ರಾಜ್ಯ ಸರಕಾರ ಹೈಕೋರ್ಟ್‌ಗೆ ವರದಿ ಸಲ್ಲಿಸಿದೆ. ಗೋಶಾಲೆ ನಿರ್ಮಾಣ ಪಂಚ ವಾರ್ಷಿಕ ಯೋಜನೆಯೇ ..? ಎಂದು ರಾಜ್ಯ ಸರಕಾರವನ್ನು ಕಟುವಾಗಿ ಈ ಹಿಂದಿನ ವಿಚಾರಣೆ ಸಂದರ್ಭದಲ್ಲಿ ಮುಖ್ಯ ನ್ಯಾಯಮೂರ್ತಿಗಳಿದ್ದ ವಿಭಾಗೀಯ ಪೀಠ ಪ್ರಶ್ನಿಸಿದ್ದರಿಂದ ಸರಕಾರ ಗೋಶಾಲೆಗಳನ್ನು ಯಾವ ಯಾವ ಜಿಲ್ಲೆಗಳಲ್ಲಿ ಯಾವ ತಿಂಗಳಲ್ಲಿ ನಿರ್ಮಾಣ ಮಾಡಲಾಗುತ್ತದೆ ಎಂದು ಪ್ರಮಾಣ ಪತ್ರ ಸಲ್ಲಿಸಿ ವೇಳಾಪಟ್ಟಿಯ ವಿವರ ನೀಡಿದೆ.
ರಾಜ್ಯದ ಪ್ರತಿ ತಾಲೂಕಿನಲ್ಲಿ ಗೋಶಾಲೆ ಆರಂಭಿಸಬೇಕು. ಹಾಲಿ ಇರುವ ಗೋಶಾಲೆಗಳಿಗೆ ಮೇವು, ನೀರು ಮತ್ತು ಜಾಗ ಒದಗಿಸಲು ಸರ್ಕಾರಕ್ಕೆ ಆದೇಶ ನೀಡಬೇಕು ಎಂದು ಕೋರಿ ಹೈಕೋರ್ಟ್ನ ಕಾನೂನು ಸೇವೆಗಳ ಸಮಿತಿ ಸಲ್ಲಿಸಿರುವ ಸಾರ್ವಜನಿಕ ಹಿತಾಸಕ್ತಿ ಅರ್ಜಿ ವಿಚಾರಣೆ ನಡೆಸಿತು. ಈ ವೇಳೆ, ಸರಕಾರ ಗೋಶಾಲೆ ನಿರ್ಮಾಣಕ್ಕೆ ಬದ್ಧತೆ ಇರುವುದನ್ನು ಸ್ಪಷ್ಟಪಡಿಸಿತು.
ರಾಜ್ಯ ಸರಕಾರದ ಪಶು ಸಂಗೋಪನೆ ಇಲಾಖೆ 2019ರಲ್ಲಿ ನಡೆಸಿದ ಜಾನುವಾರು ಗಣತಿ ಪ್ರಕಾರ ರಾಜ್ಯದಲ್ಲಿ 77,075 ಬಿಡಾಡಿ ದನಗಳಿವೆ. ಇವುಗಳ ನಿರ್ವಹಣೆಗೆ ಪ್ರತಿ ಜಿಲ್ಲೆಗೊಂದು ಗೋಶಾಲೆ ನಿರ್ಮಾಣ ಮಾಡಲು ಸರ್ಕಾರ ನಿರ್ಧರಿಸಿದೆ. 2021-22ನೇ ಸಾಲಿನ ಬಜೆಟ್‌ನಲ್ಲಿ ಪ್ರತಿ ಜಿಲ್ಲೆಗೊಂದು ಗೋಶಾಲೆ ಸ್ಥಾಪಿಸುವುದಾಗಿ ಘೋಷಿಸಲಾಗಿತ್ತು. ಅದಕ್ಕಾಗಿ 15 ಕೋಟಿ ರೂಪಾಯಿ ಅನುದಾನ ಸಹ ಮೀಸಲಿಡಲಾಗಿದೆ ಎಂದು ಕೋರ್ಟ್ಗೆ ಸ್ಪಷ್ಟನೆ ನೀಡಲಾಗಿದೆ.
ಓದಿ: ರಾಜ್ಯದ ಪ್ರತಿ ಜಿಲ್ಲೆಯಲ್ಲೂ ಗೋ ಶಾಲೆ ಆರಂಭಿಸಲು ಸಚಿವ ಸಂಪುಟ ಸಭೆ ಒಪ್ಪಿಗೆ
ಗೋಶಾಲೆಗಳಿಗೆ ಜಾಗ ಗುರುತಿಸುವುದು, ಅದರ ಸ್ಥಾಪನೆ ಮತ್ತು ನಿರ್ವಹಣೆ, ಅನುದಾನದ ಬಳಕೆಯ ಜವಾಬ್ದಾರಿಯನ್ನು ಜಿಲ್ಲಾಧಿಕಾರಿಗಳ ನೇತೃತ್ವದ ‘ಪ್ರಾಣಿಗಳ ಮೇಲಿನ ಕ್ರೌರ್ಯ ತಡೆ’ ಜಿಲ್ಲಾ ಮಟ್ಟದ ಸಮಿತಿಗಳಿಗೆ ವಹಿಸಲಾಗಿದೆ ಎಂದು ಸರ್ಕಾರ ಹೈಕೋರ್ಟ್‌ಗೆ ತಿಳಿಸಿದೆ. ಬೆಂಗಳೂರು ನಗರ, ಶಿವಮೊಗ್ಗ ಮತ್ತು ಮಂಡ್ಯ ಜಿಲ್ಲೆಗಳಲ್ಲಿ ಭೂವ್ಯಾಜ್ಯದಿಂದಾಗಿ ಗೋಶಾಲೆಗೆ ಸ್ಥಳ ಗುರುತಿಸಲು ವಿಳಂಬವಾಗಿದೆ.
ಶಿವಮೊಗ್ಗ ಮತ್ತು ಮಂಡ್ಯ ಜಿಲ್ಲೆಗಳಲ್ಲಿ ಬೇರೆ ಜಾಗ ಗುರುತಿಸಲಾಗಿದೆ. ಬೆಂಗಳೂರು ಜಿಲ್ಲೆಯಲ್ಲಿ ಜಾಗ ಗುರುತಿಸುವ ಪ್ರಕ್ರಿಯೆಗೆ ಸ್ವಲ್ಪ ಕಾಲಾವಕಾಶ ಬೇಕಾಗಬಹುದು. ಉಳಿದಂತೆ 29 ಜಿಲ್ಲೆಗಳಲ್ಲಿ ಗುರುತಿಸಲಾದ ಜಾಗವನ್ನು ಡಿಎಸ್‌ಪಿಸಿಎಗೆ ಹಸ್ತಾಂತರಿಸಲಾಗಿದೆ ಎಂದು ಹೈಕೋರ್ಟ್‌ಗೆ ಸಲ್ಲಿಸಿದ ಪ್ರಮಾಣಪತ್ರದಲ್ಲಿ ರಾಜ್ಯ ಸರ್ಕಾರ ತಿಳಿಸಿದೆ.
ವೇಳಾಪಟ್ಟಿಯಂತೆ ಕೆಲಸ ಪೂರ್ಣ: ಸರ್ಕಾರ ಹಾಕಿಕೊಂಡಿರುವ ವೇಳಾಪಟ್ಟಿಯಂತೆ ಮೈಸೂರು, ಹಾಸನ, ತುಮಕೂರು ಚಿಕ್ಕಮಗಳೂರು, ವಿಜಯಪುರ ಜಿಲ್ಲೆಗಳಲ್ಲಿ ಮುಂದಿನ ತಿಂಗಳು ಜುಲೈ 15ರೊಳಗೆ ಗೋಶಾಲೆಗಳು ಕಾರ್ಯಾರಂಭ ಮಾಡಲಿವೆ. ದಾವಣಗೆರೆ, ಚಿತ್ರದುರ್ಗ, ಹಾವೇರಿ, ಉತ್ತರ ಕನ್ನಡ, ಕೊಡಗು, ಚಾಮರಾಜನಗರ, ಕೋಲಾರ ಬೀದರ್, ಕೊಪ್ಪಳ ಹಾಗೂ ಬೆಂಗಳೂರು ಗ್ರಾಮಾಂತರ ಜಿಲ್ಲೆಗಳಲ್ಲಿ ಆಗಸ್ಟ್ 1ರೊಳಗೆ ಗೋಶಾಲೆಗಳು ಕಾರ್ಯಾರಂಭ ಮಾಡಲಿವೆ. ರಾಯಚೂರು, ಧಾರವಾಡ, ಮಂಡ್ಯ, ಯಾದಗಿರಿ, ರಾಮನಗರ ಜಿಲ್ಲೆಗಳಲ್ಲಿ ಸೆಪ್ಟಂಬರ್ 1ರೊಳಗೆ, ಗದಗ, ಬಳ್ಳಾರಿ, ವಿಜಯನಗರ ಜಿಲ್ಲೆಗಳಲ್ಲಿ ಅಕ್ಟೋಬರ್ 1ರೊಳಗೆ, ಚಿಕ್ಕಬಳ್ಳಾಪುರ, ದಕ್ಷಿಣ ಕನ್ನಡ, ಉಡುಪಿ, ಶಿವಮೊಗ್ಗ, ಕಲಬುರಗಿ, ಬೆಳಗಾವಿ ಜಿಲ್ಲೆಗಳಲ್ಲಿ ಡಿಸೆಂಬರ್ ಅಂತ್ಯದೊಳಗೆ ಗೋಶಾಲೆಗಳು ಕಾರ್ಯಾರಂಭ ಮಾಡಲಿವೆ. ಈ ರೀತಿ ವರ್ಷದ ಅಂತ್ಯದೊಳಗೆ ಎಲ್ಲಾ 31 ಗೋಶಾಲೆಗಳ ನಿರ್ಮಾಣ ಪೂರ್ಣಗೊಳ್ಳಲಿದೆ ಎಂದು ಸರ್ಕಾರ ಕೋರ್ಟ್ಗೆ ಮಾಹಿತಿ ನೀಡಿದೆ.
ಜಿಲ್ಲೆಗೊಂದರಂತೆ ಗೋ ಶಾಲೆ: ಜಿಲ್ಲೆಗೊಂದರಂತೆ 30 ಗೋಶಾಲೆಯ ಜೊತೆಗೆ ಹೆಚ್ಚುವರಿಯಾಗಿ 69 ಗೋಶಾಲೆಗಳನ್ನು ಆರಂಭಿಸಲು ಸರ್ಕಾರ ತೀರ್ಮಾನಿಸಿದೆ. ಕಾಮಗಾರಿ ಚಾಲ್ತಿಯಲ್ಲಿರುವ ಗೋಶಾಲೆಗಳಿಗೆ 15 ಕೋಟಿ ರೂಪಾಯಿ, ಹೊಸ 69 ಗೋಶಾಲೆಗಳ ನಿರ್ಮಾಣಕ್ಕೆ 20 ಕೋಟಿ ರೂಪಾಯಿ ಸೇರಿದಂತೆ ಗೋಶಾಲೆಗಳ ಸ್ಥಾಪನೆಗೆ 50 ಕೋಟಿ ರೂಪಾಯಿ ಅನುದಾನ ಮೀಸಲಿಡಲಾಗಿದೆ. ಇದರ ಜತೆಗೆ ಖಾಸಗಿ ಸಂಘ-ಸಂಸ್ಥೆಗಳು 197 ಗೋಶಾಲೆಗಳನ್ನು ನಡೆಸುತ್ತಿದ್ದು, ಅವುಗಳಿಗೆ ಹಣಕಾಸಿನ ನೆರವು ನೀಡಲಾಗುತ್ತಿದೆ. ಖಾಸಗಿ ಗೋಶಾಲೆಗಳಿಗೆ 2021-22ನೇ ಸಾಲಿಗೆ 3.77 ಕೋಟಿ ರೂಪಾಯಿ ಹಾಗೂ 2022-23ನೇ ಸಾಲಿನಲ್ಲಿ 3.77 ಕೋಟಿ ರೂಪಾಯಿ ಹಣ ಬಿಡುಗಡೆ ಮಾಡಲಾಗಿದೆ ಎಂದು ಸರ್ಕಾರ ಹೈಕೋರ್ಟ್‌ಗೆ ಸಲ್ಲಿಸಿದ ಪ್ರಮಾಣಪತ್ರದಲ್ಲಿ ಹೇಳಿದೆ.