ಬೆಂಗಳೂರು: ವೃತ್ತಿಪರ ಕೋರ್ಸ್‌ಗಳ ಪ್ರವೇಶಕ್ಕೆ ಸಂಬಂಧಿಸಿದಂತೆ ಸಾಗರೋತ್ತರ ಭಾರತೀಯ ಪ್ರಜೆ (ಒಸಿಐ) ಕಾರ್ಡ್ ಹೊಂದಿರುವವರನ್ನು ಸಾಮಾನ್ಯ ಭಾರತೀಯ ನಾಗರಿಕರಂತೆ ಪರಿಗಣಿಸಲು ಹೈಕೋರ್ಟ್ ಆದೇಶಿಸಿದೆ.
ಸರ್ಕಾರ ಸಲ್ಲಿಸಿದ್ದ ಮೇಲ್ಮನವಿ ಅರ್ಜಿ ವಿಚಾರಣೆ ನಡೆಸಿದ ಹಿರಿಯ ನ್ಯಾಯಮೂರ್ತಿ ಬಿ.ವಿ.ನಾಗರತ್ನ ನೇತೃತ್ವದ ವಿಭಾಗೀಯ ಪೀಠ ಈ ಮಹತ್ವದ ಆದೇಶ ನೀಡಿದೆ. ಒಸಿಐ ಕಾರ್ಡ್ ಹೊಂದಿರುವವರನ್ನು ಎನ್ಆರ್ಐ ಕೋಟಾ ವ್ಯಾಪ್ತಿಯಲ್ಲಿ ಪರಿಗಣಿಸುತ್ತಿದ್ದ ಕರ್ನಾಟಕ ವೃತ್ತಿಪರ ಶಿಕ್ಷಣ ಸಂಸ್ಥೆಗಳ ಪ್ರವೇಶ ನಿಯಂತ್ರಣ, ಶುಲ್ಕ ನಿಗದಿ ಕಾಯ್ದೆ-2006ರ ಸೆಕ್ಷನ್ 2(1)(ಎನ್) ರದ್ದುಗೊಳಿಸಿ ಆದೇಶಿಸಿದೆ.
ಅಲ್ಲದೆ, ಒಸಿಐ ಕಾರ್ಡ್ ಹೊಂದಿರುವ ವಿದ್ಯಾರ್ಥಿಗಳು ಕೇವಲ ಎನ್ಆರ್ಐ ಕೋಟಾದಲ್ಲಿ ಮಾತ್ರವಲ್ಲದೆ ಮ್ಯಾನೇಜ್ಮೆಂಟ್ ಕೋಟಾ ಮತ್ತು ರಾಜ್ಯ ಕೋಟಾದಲ್ಲೂ ಸಹ ವೃತ್ತಿಪರ ಸೀಟುಗಳನ್ನು ಪಡೆಯಬಹುದಾಗಿದೆ ಎಂದು ನ್ಯಾಯಾಲಯ ಆದೇಶ ನೀಡಿದೆ. ಪೀಠ ತನ್ನ ಆದೇಶದಲ್ಲಿ 2006ರ ಕಾಯ್ದೆಯ ನಿಯಮ ಕೇಂದ್ರದ ಪೌರತ್ವ ಕಾಯ್ದೆ ಹಾಗೂ ಸಂವಿಧಾನಕ್ಕೆ ವಿರುದ್ಧವಾಗಿದೆ. ಹೀಗಾಗಿ ಅದನ್ನು ರದ್ದುಗೊಳಿಸಲಾಗುತ್ತಿದೆ ಎಂದು ಹೇಳಿದೆ.
ಪ್ರಕರಣದ ಹಿನ್ನೆಲೆ - ಒಸಿಐ ವಿದ್ಯಾರ್ಥಿಗಳು ಸರ್ಕಾರ ತಮಗೆ ಖಾಸಗಿ ಕೋಟಾ, ಮ್ಯಾನೇಜ್ಮೆಂಟ್ ಕೋಟಾದಡಿ ಎಂಬಿಬಿಎಸ್, ಬಿಡಿಎಸ್ ಮತ್ತು ಎಂಜಿನಿಯರಿಂಗ್ ಕೋರ್ಸ್‌ಗಳ ಪ್ರವೇಶಕ್ಕೆ ಅವಕಾಶ ನೀಡದೇ ಇರುವುದನ್ನು ಪ್ರಶ್ನಿಸಿ ಹೈಕೋರ್ಟ್‌ನ ಏಕಸದಸ್ಯ ಪೀಠದ ಮೊರೆ ಹೋಗಿದ್ದರು. ನ್ಯಾಯಾಲಯ, ಕೆಇಎಗೆ ಒಸಿಐ ಕಾರ್ಡ್ ಹೊಂದಿರುವ ಅಭ್ಯರ್ಥಿಗಳನ್ನೂ ಸಾಮಾನ್ಯ ಕೋಟಾದಡಿ ಸೀಟು ಪಡೆಯಲು ಅರ್ಹರಂತೆ ಪರಿಗಣಿಸಲು ಆದೇಶಿಸಿತ್ತು. ಸರ್ಕಾರ ಈ ಆದೇಶ ಪ್ರಶ್ನಿಸಿ ವಿಭಾಗೀಯ ಪೀಠದಲ್ಲಿ ಮೇಲ್ಮನವಿ ಸಲ್ಲಿಸಿತ್ತು.
ವಿಚಾರಣೆ ಸಂದರ್ಭದಲ್ಲಿ ರಾಜ್ಯ ಸರ್ಕಾರ, ಭಾರತೀಯ ಪ್ರಜೆಗಳು ಮಾತ್ರ ಕರ್ನಾಟಕ ಪರೀಕ್ಷಾ ಪ್ರಾಧಿಕಾರದಲ್ಲಿ ಕೌನ್ಸೆಲಿಂಗ್‌ಗೆ ನೋಂದಾಯಿಸಿಕೊಳ್ಳಬಹುದು. ಒಸಿಐ ಕಾರ್ಡ್ ಹೊಂದಿದವರನ್ನು ಭಾರತೀಯ ಪ್ರಜೆಗಳೆಂದು ಪರಿಗಣಿಸಲಾಗದು ಎಂದು ವಾದಿಸಿತ್ತು.
ಇದನ್ನೂ ಓದಿ: ಬಿಸಿಯೂಟ ಸ್ಥಗಿತ ವಿಚಾರ: ಪಡಿತರ ವಿತರಣೆ ಬಗ್ಗೆ ಹೈಕೋರ್ಟ್ಗೆ ಮಾಹಿತಿ ನೀಡಿದ ಸರ್ಕಾರ