ಬೆಂಗಳೂರು : 2015, ಡಿಸೆಂಬರ್ 31ರ ಅಂತ್ಯಕ್ಕೆ ನಿವೃತ್ತಿ, ಮರಣ, ರಾಜೀನಾಮೆ ಇತರೆ ಕಾರಣಗಳಿಂದ ಖಾಲಿಯಾಗಿರುವ ಅನುದಾನಿತ ಪ್ರಾಥಮಿಕ, ಪ್ರೌಢ ಹಾಗೂ ಪದವಿಪೂರ್ವ ಶಿಕ್ಷಣ ಸಂಸ್ಥೆಗಳಲ್ಲಿನ ಹುದ್ದೆಗಳನ್ನು ತುಂಬಲು ಆರ್ಥಿಕ ಇಲಾಖೆ ಸಹಮತಿ ನೀಡಿದೆ ಎಂದು ಪ್ರಾಥಮಿಕ ಹಾಗೂ ಪ್ರೌಢ ಶಿಕ್ಷಣ ಸಚಿವ ಸುರೇಶ್ ಕುಮಾರ್ ತಿಳಿಸಿದ್ದಾರೆ.
ಆಡಳಿತ ಇಲಾಖೆಯ ಪ್ರಸ್ತಾವನೆಯನ್ನು ಹಣಕಾಸು ಇಲಾಖೆ ಪರಿಶೀಲಿಸಿದೆ. ಪದವಿ ಪೂರ್ವ ಶಿಕ್ಷಣ ಇಲಾಖೆಯ ವ್ಯಾಪ್ತಿಯಲ್ಲಿನ ಖಾಸಗಿ ಅನುದಾನಿತ ಶಿಕ್ಷಣ ಸಂಸ್ಥೆಗಳಲ್ಲಿ ದಿನಾಂಕ 2015, ಡಿಸೆಂಬರ್ 31ರ ಅಂತ್ಯಕ್ಕೆ ನಿವೃತ್ತಿ, ಮರಣ, ರಾಜೀನಾಮೆ ಇತರೆ ಕಾರಣಗಳಿಂದ ಖಾಲಿಯಾಗಿರುವ ಹುದ್ದೆಗಳ ಪೈಕಿ, ಈಗಾಗಲೇ ಸರ್ಕಾರದಿಂದ ಅನುಮೋದನೆಗೊಂಡಿದೆ.
ನೇಮಕಾತಿ ಪ್ರಕ್ರಿಯೆಯು ಇಲಾಖೆಯ ಹಂತದಲ್ಲಿ ಬಾಕಿ ಇರುವ 173 ಬೋಧಕ ಹುದ್ದೆಗಳು ಮತ್ತು ಪ್ರೌಢ ಶಿಕ್ಷಣ ಇಲಾಖೆಗೆ ಸಂಬಂಧಿಸಿದ 257 ಬೋಧಕ ಹುದ್ದೆಗಳಿಗೆ ನೇಮಕಾತಿ ಆದೇಶವನ್ನು 2021-22ನೇ ಶೈಕ್ಷಣಿಕ ವರ್ಷ ಪ್ರಾರಂಭಗೊಂಡ ನಂತರ (ಜೂನ್ ಅಥವಾ ಜುಲೈ-2021)ರಲ್ಲಿ ನೀಡಲು ಆರ್ಥಿಕ ಇಲಾಖೆ ಸಹಮತಿ ನೀಡಿದೆ ಎಂದು ಸಚಿವ ಸುರೇಶ್ ಕುಮಾರ್ ಪತ್ರಿಕಾ ಪ್ರಕಟಣೆ ಮೂಲಕ ಮಾಹಿತಿ ನೀಡಿದ್ದಾರೆ.
ಇನ್ನು, ಶಿಕ್ಷಣ ಸಂಸ್ಥೆಗಳಲ್ಲಿನ ಖಾಲಿ ಹುದ್ದೆ ಭರ್ತಿ ಸಂಬಂಧದ ಕೋರಿಕೆಯನ್ನು ಕ್ಷಿಪ್ರವಾಗಿ ನೆರವೇರಿಸಿದ‌್ದಕ್ಕೆ ಮುಖ್ಯಮಂತ್ರಿಗಳಿಗೆ ಸಚಿವ ಸುರೇಶ್ ಕುಮಾರ್ ಧನ್ಯವಾದ ಅರ್ಪಿಸಿದ್ದಾರೆ.