ಬೆಂಗಳೂರು: ಯಲಹಂಕದ ಖಾಸಗಿ ಹೋಟೆಲ್ ನಲ್ಲಿ ನಡೆದ ಸಭೆಯಲ್ಲಿ ಬಳ್ಳಾರಿ ಯೂತ್ ಕಾಂಗ್ರೆಸ್ ಅಧ್ಯಕ್ಷನ ಮೇಲೆ ಯುವ ಕಾಂಗ್ರೆಸ್ ಮುಖಂಡ ಮೊಹಮ್ಮದ್ ನಲಪಾಡ್ ನಿಂದಿಸಿರುವ ಆರೋಪ ಕೇಳಿ ಬಂದಿದೆ.
ಯೂತ್ ಕಾಂಗ್ರೆಸ್ ಮುಖಂಡ ನಲಪಾಡ್ ಹಾಗೂ ಆತನ ಸಹಚರರು ಅಸಭ್ಯವಾಗಿ ವರ್ತಿಸಿ ನಿಂದಿಸಿದ್ದಾರೆ ಎಂದು ಬಳ್ಳಾರಿ ಜಿಲ್ಲಾ ಘಟಕದ ಅಧ್ಯಕ್ಷ ಸಿದ್ದು ಹಳ್ಳೇಗೌಡ ಆಪಾದಿಸಿದ್ದಾರೆ. ಈ ಬಗ್ಗೆ ಮೊಹಮ್ಮದ್ ನಲಪಾಡ್ ಪ್ರತಿಕ್ರಿಯಿಸಿ, ನಿನ್ನೆ ನಡೆದ ಸಭೆಯಲ್ಲಿ ಯಾರನ್ನು ನಿಂದಿಸಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ.
ಈ ಬಗ್ಗೆ ಮಾತನಾಡಿರುವ ಗೃಹ ಸಚಿವ ಆರಗ ಜ್ಞಾನೇಂದ್ರ, ನಲಪಾಡ್ ಹಾಗೂ ಕಾಂಗ್ರೆಸ್ ಪಕ್ಷದ ಜಿಲ್ಲಾ ಪದಾಧಿಕಾರಿಗಳು ನಿನ್ನೆ ಖಾಸಗಿ ಹೋಟೆಲ್ನಲ್ಲಿ ಸೇರಿದ್ದರು. ಯಾರೂ ಸಹ ಪೊಲೀಸರಿಗೆ ಈವರೆಗೆ ದೂರು ಕೊಟ್ಟಿಲ್ಲ. ದೂರು ಕೊಟ್ಟರೆ ಕ್ರಮ ಕೈಗೊಳ್ಳುವುದಾಗಿ ತಿಳಿಸಿದ್ದಾರೆ.
ಜಿಲ್ಲಾ ಪದಾಧಿಕಾರಿಗಳೊಡನೆ ನಿನ್ನೆ ಖಾಸಗಿ ಹೋಟೆಲ್ನಲ್ಲಿ ನಲಪಾಡ್ ಅನೌಪಚಾರಿಕವಾಗಿ ಸಭೆ ಕರೆದಿದ್ದರು. ಬೆಂಬಲ ವಿಚಾರವಾಗಿ ಸಿದ್ದು ಹಾಗೂ ನಲಪಾಡ್ ನಡುವೆ ಮಾತಿನ ಚಕಮಕಿ ನಡೆದಿದೆ. ನಲಪಾಡ್ ಹಾಗೂ ಆತನ ಬೆಂಬಲಿಗರು ಅವಾಚ್ಯ ಶಬ್ಧಗಳಿಂದ ನಿಂದಿಸಿ ಹಲ್ಲೆಗೆ ಮುಂದಾಗಿದ್ದರು ಎನ್ನಲಾಗಿದೆ.
ಮಾಧ್ಯಮಗಳಲ್ಲಿ ಸುದ್ದಿ ಪ್ರಸಾರ ಆಗುತ್ತಿದ್ದಂತೆ ಸ್ಪಷ್ಟನೆ ನೀಡಿರುವ ಸಿದ್ದು, ನನ್ನ ಮೇಲೆ ನಲಪಾಡ್ ಸೇರಿದಂತೆ ಯಾರು ಹಲ್ಲೆ ನಡೆಸಿಲ್ಲ. ಇವೆಲ್ಲವೂ ಬಿಜೆಪಿ ರೂಪಿಸಿದ ಷಡ್ಯಂತ್ರ ಎಂದು ಹೇಳಿದ್ದಾರೆ.
ಸಿದ್ದು ಹಳ್ಳೇಗೌಡ ಮೇಲೆ ನಲಪಾಡ್ ಹಲ್ಲೆ ಆರೋಪ ಕೇವಲ ಕಪೋಲ ಕಲ್ಪಿತ ಎಂದು ಕೆಪಿಸಿಸಿ ಕಾರ್ಯಾಧ್ಯಕ್ಷ ಈಶ್ವರ್ ಖಂಡ್ರೆ ತಿಳಿಸಿದ್ದಾರೆ. ಕೆಪಿಸಿಸಿ ಕಚೇರಿಯಲ್ಲಿ ಸುದ್ದಿಗಾರರ ಜೊತೆ ಮಾತನಾಡಿ, ನಲಪಾಡ್ ಯಾರ ಮೇಲೂ ಹಲ್ಲೆ ಮಾಡಿಲ್ಲ. ಹಲ್ಲೆ ಸಂಬಂಧ ಯಾರಾದ್ರೂ ದೂರು ಕೊಟ್ಟಿದ್ದಾರಾ? ನಾನು ಅಲ್ಲಿಗೆ ಹೋಗೇ ಇಲ್ಲ ಅಂತಾ ಸಿದ್ದು ಹೇಳಿದ್ದಾನೆ.
ಇದೆಲ್ಲಾ ಕಪೋಲ ಕಲ್ಪಿತ ಸುದ್ದಿ. ಗಲಾಟೆ ನಡೆದಿದೆ ಅಂತಾ ಹೋಮ್ ಮಿನಿಸ್ಟರ್ ಹೇಳಿರೋದು ಸುಳ್ಳು. ಖಚಿತ ಮಾಹಿತಿ ಇದ್ರೆ ಪ್ರಕರಣ ದಾಖಲು ಮಾಡಿದ್ದಾರಾ..? ಎಂದು ಗಲಾಟೆ ಪ್ರಕರಣಕ್ಕೆ ತೇಪೆ ಹಾಕಲು ಯತ್ನಿಸಿದ್ದಾರೆ ಎಂದರು.
ಈ ವಿಚಾರವಾಗಿ ನಲಪಾಡ್ ಹಾಗೂ ಬಳ್ಳಾರಿ ಯುವ ಘಟಕ ಅಧ್ಯಕ್ಷರ ಜೊತೆ ನೇರವಾಗಿ ಮಾತಾಡಿದ್ದೇನೆ. ಇಂತಹ ಘಟನೆಯೇ ನಡೆದಿಲ್ಲ ಎಂದು ಹೇಳಿದ್ದಾರೆ. ಬಳ್ಳಾರಿ ಯೂತ್ ಕಾಂಗ್ರೆಸ್ ಅಧ್ಯಕ್ಷ ಯಾವುದೇ ದೂರು ಕೊಟ್ಟಿಲ್ಲ. ಸ್ನೇಹಿತರು ಒಂದೆಡೆ ಕುಳಿತು ಊಟ ಮಾಡ್ತಾರೆ, ಅದನ್ನೇ ದೊಡ್ಡದು ಮಾಡುವ ಅವಶ್ಯಕತೆಯಿಲ್ಲ. ಹಲ್ಲೆಗೆ ಒಳಗಾದ ವ್ಯಕ್ತಿಯ ಹೇಳಿಕೆ, ದೂರು ಇಲ್ಲದೇ ಹಲ್ಲೆ ಆಗಿದೆ ಎಂದು ಹೇಗೆ ಹೇಳುತ್ತಿರಾ? ಹಲ್ಲೆ ಆಗಿಲ್ಲ ಅಂತ ಸ್ವತಃ ಸಿದ್ದು ಅವರೇ ನನಗೆ ಹೇಳಿದ್ದಾರೆ ಎಂದು ವಿವರಿಸಿದ್ದಾರೆ.
ಆದರೆ, ಇನ್ನೊಂದೆಡೆ ಸಿದ್ದು ಹಳ್ಳೇಗೌಡ ವಿಡಿಯೋ ಬಿಡುಗಡೆ ಮಾಡಿ, ಯಾವುದೇ ಹಲ್ಲೆ ಆಗಿಲ್ಲ. ನಾವೆಲ್ಲ ಅಣ್ಣ ತಮ್ಮಂದಿರ ಹಾಗೆ ಇದ್ದೇವೆ. ಇದೆಲ್ಲ ಸುಳ್ಳು ಎಂದು ಸ್ಪಷ್ಟನೆ ಕೂಡಾ ನೀಡಿದ್ದಾರೆ.
ಇದನ್ನೂ ಓದಿ: ಮೈಸೂರು: ಎರಡು ಮಕ್ಕಳ ತಾಯಿ ಹಳೆ ಲವರ್ ಜತೆ ಲವ್ವಿ-ಡವ್ವಿ.. ಗ್ರಾಮಸ್ಥರಿಂದ ಯುವಕನಿಗೆ ಧರ್ಮದೇಟು