ಬೆಂಗಳೂರು: ರಾಜರಾಜೇಶ್ವರಿ ನಗರ ವಿಧಾನಸಭಾ ಕ್ಷೇತ್ರದ ಉಪ ಚುನಾವಣೆಯ ಕಾಂಗ್ರೆಸ್ ಅಭ್ಯರ್ಥಿ ಕುಸುಮಾ ಹನುಮಂತರಾಯಪ್ಪ ವಿರುದ್ಧ, ನೀತಿ ಸಂಹಿತೆ ಉಲ್ಲಂಘನೆಯಡಿ ಎಫ್ಐಆರ್ ದಾಖಲಿಸಿರುವುದನ್ನು ವಿರೋಧಿಸಿ ಬೆಳಗಾವಿ ಗ್ರಾಮೀಣ ಕ್ಷೇತ್ರದ ಶಾಸಕಿ ಲಕ್ಷ್ಮೀ ಹೆಬ್ಬಾಳ್ಕರ್ ನೇತೃತ್ವದಲ್ಲಿ, ಕಾಂಗ್ರೆಸ್ ಮಹಿಳಾ ಘಟಕ ಆರ್ಆರ್ ನಗರ ಠಾಣೆ ಮುಂದೆ ಪ್ರತಿಭಟನೆ ನಡೆಸಿತು.
ಕಾಂಗ್ರೆಸ್ ಅಭ್ಯರ್ಥಿಯಾಗಿರುವ ಕುಸುಮಾ ವಿರುದ್ಧ ದುರುದ್ದೇಶದಿಂದ ಪ್ರಕರಣ ದಾಖಲಿಸಿರುವುದು ಸರಿಯಲ್ಲ. ಸೋಲಿನ ಭಯದಿಂದಲೇ ಬಿಜೆಪಿ ಸರ್ಕಾರ ಪ್ರಕರಣ ದಾಖಲಿಸಿದೆ ಎಂದು ಪ್ರತಿಭಟನಕಾರರು ಆರೋಪಿಸಿದರು.
ನಾಮಪತ್ರ ಸಲ್ಲಿಸುವ ವೇಳೆ ಕಚೇರಿಯ ನೂರು ಮೀಟರ್ ಅಂತರದಲ್ಲಿ ನಿಷೇಧಾಜ್ಞೆ ಜಾರಿಗೊಳಿಸಲಾಗಿತ್ತು. ನಿಯಮ ಗೊತ್ತಿದ್ದರೂ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಎಸ್ಕಾರ್ಟ್ ಹಾಗೂ ವಾಹನ ಚಾಲಕರು ನಿಯಮ ಉಲ್ಲಂಘಿಸಿ ನಾಮಪತ್ರ ಸಲ್ಲಿಸುವಾಗ ನೇರವಾಗಿ ತೆರಳಿದ್ದರು. ಈ ಸಂಬಂಧ ಐಪಿಸಿ ಸೆಕ್ಷನ್ 353, ಸರ್ಕಾರಿ ಅಧಿಕಾರಿಯ ಕರ್ತವ್ಯ ಸೆಕ್ಷನ್ 188ರಡಿ ಸರ್ಕಾರಿ ಅಧಿಕಾರಿ ಆದೇಶ ಉಲ್ಲಂಘನೆಯಡಿ ಕುಸುಮಾ ಹಾಗೂ ಚಾಲಕರ ವಿರುದ್ಧ ಪ್ರಕರಣ ದಾಖಲಾಗಿತ್ತು.