ಬೆಂಗಳೂರು: ರಾಜ್ಯದ 15 ಕ್ಷೇತ್ರಗಳ ಉಪಚುನಾವಣೆಗೆ ಅಭ್ಯರ್ಥಿ ಆಯ್ಕೆ ಕಸರತ್ತು ನಡೆಸಿರುವ ಕಾಂಗ್ರೆಸ್, 2ನೇ ಹಂತದ ಪಟ್ಟಿಯನ್ನೂ ಸಿದ್ಧಪಡಿಸಿದ್ದು ಶಿವಾಜಿನಗರ ಹೊರತುಪಡಿಸಿ ಉಳಿದ ಎಲ್ಲಾ ಕ್ಷೇತ್ರಗಳನ್ನು ಅಂತಿಮಗೊಳಿಸಿದೆ ಎಂಬ ಮಾಹಿತಿ ಲಭ್ಯವಾಗಿದೆ.
ಮೊದಲ ಹಂತದಲ್ಲಿ 8 ಕ್ಷೇತ್ರಗಳಿಗೆ ಅಭ್ಯರ್ಥಿಗಳನ್ನು ಅಂತಿಮಗೊಳಿಸಿದ್ದಾಗಿ ಎಐಸಿಸಿ ಆದೇಶ ಹೊರಡಿಸಿತ್ತು. ಎರಡನೇ ಹಂತದಲ್ಲಿ 7 ಕ್ಷೇತ್ರಗಳು ಬಾಕಿ ಉಳಿದಿದ್ದವು. ಇದರಲ್ಲಿ ಶಿವಾಜಿನಗರ ಹೊರತುಪಡಿಸಿ ಉಳಿದ 6 ಕ್ಷೇತ್ರಗಳ ಅಭ್ಯರ್ಥಿಗಳ ಪಟ್ಟಿಯನ್ನು ರಾಜ್ಯದ ಕೈ ನಾಯಕರು ಅಂತಿಮಗೊಳಿಸಿದ್ದು, ಒಪ್ಪಿಗೆಗಾಗಿ ಹೈಕಮಾಂಡ್ಗೆ ಕಳಿಸಿಕೊಟ್ಟಿದ್ದಾರೆ ಎಂದು ಹೇಳಲಾಗುತ್ತಿದೆ.
ಶಿವಾಜಿನಗರ ಸಮಸ್ಯೆ: ಶಿವಾಜಿನಗರ ಅಭ್ಯರ್ಥಿ ಆಯ್ಕೆ ಗೊಂದಲದಲ್ಲಿದೆ. ಮಾಜಿ ಸಿಎಂ ಸಿದ್ದರಾಮಯ್ಯ ಹಾಗೂ ಕೆಪಿಸಿಸಿ ಅಧ್ಯಕ್ಷ ದಿನೇಶ್ ಗುಂಡೂರಾವ್ ಅವರು ರಿಜ್ವಾನ್ ಅರ್ಷದ್ ಪರ ಹೆಚ್ಚು ಒಲವು ತೊರುತ್ತಿದ್ದಾರೆ. ಆದರೆ, ಕ್ಷೇತ್ರದ ಉಸ್ತುವಾರಿ ಹಾಗೂ ರಾಜ್ಯಸಭೆ ಸದಸ್ಯ ಬಿ.ಕೆ. ಹರಿಪ್ರಸಾದ್ ಮಾತ್ರ ಸಲೀಂ ಅಹಮದ್ ಅವರನ್ನು ಅಭ್ಯರ್ಥಿಯನ್ನಾಗಿ ಮಾಡುವಂತೆ ಪಟ್ಟು ಹಿಡಿದಿದ್ದಾರೆ ಎನ್ನಲಾಗುತ್ತಿದೆ.
ಶಿವಾಜಿನಗರದ ಹಲವು ಕಾಂಗ್ರೆಸ್ ನಾಯಕರು, ಮುಸ್ಲಿಂ ಮುಖಂಡರು ರಿಜ್ವಾನ್ ಅವರಿಗೆ ಟಿಕೆಟ್ ನೀಡಬೇಡಿ. ಐಎಂಎ ಪ್ರಕರಣದಲ್ಲಿ ಅವರ ಹೆಸರು ತಳಕು ಹಾಕಿಕೊಂಡಿದೆ. ಆದ್ದರಿಂದ ಮತಗಳು ಸಿಗುವುದಿಲ್ಲ ಎಂದು ಸಲಹೆ ನೀಡಿದ್ದಾರೆ. ಈ ಸಮಸ್ಯೆಯಿಂದಾಗಿ ಯಾರಿಗೆ ಟಿಕೆಟ್ ಎಂಬುದು ಘೋಷಣೆ ಆಗಿಲ್ಲ.
ಅಥಣಿಗೆ ಗಜಾನನ ಮಂಗ್ಸೂಳಿ: ಅಥಣಿ ಟಿಕೆಟ್ ಆಕಾಂಕ್ಷಿ ಗಜಾನನ ಮಂಗ್ಸೂಳಿ ಅವರು ಕೆಪಿಸಿಸಿ ಕಚೇರಿಗೆ ಭೇಟಿ ನೀಡಿದರು. ಕೈ ನಾಯಕರ ಭೇಟಿ ಮಾಡಿ ತಾವು ಅಥಣಿಯಿಂದ ಕಣಕ್ಕಿಳಿಯುವ ಆಶಯ ವ್ಯಕ್ತಪಡಿಸಿದ್ದಾರೆ. ಸಿದ್ದರಾಮಯ್ಯ ಭೇಟಿ ಮಾಡಿ ಮಾತುಕತೆ ನಡೆಸಿದ್ದು, ಅಥಣಿಗೆ ಬಹುತೇಕ ಮಂಗ್ಸೂಳಿ ಕೈ ಅಭ್ಯರ್ಥಿ ಎಂದು ಹೇಳಲಾಗುತ್ತಿದೆ.
ಎರಡನೇ ಪಟ್ಟಿ
ಕ್ಷೇತ್ರ | ಅಭ್ಯರ್ಥಿ |
ಕಾಗವಾಡ | ರಾಜು ಕಾಗೆ |
ವಿಜಯನಗರ | ವಿ.ವೈ. ಘೋರ್ಪಡೆ |
ಅಥಣಿ | ಗಜಾನನ ಮಂಗ್ಸೂಳಿ |
ಕೆ.ಆರ್. ಪೇಟೆ | ಕೆ.ಬಿ.ಚಂದ್ರಶೇಖರ್ |
ಯಶವಂತಪುರ | ರಾಜ್ಕುಮಾರ್ |
ಗೋಕಾಕ್ | ಲಖನ್ ಜಾರಕಿಹೊಳಿ |