ಮಹದೇವಪುರ: ಕ್ಷೇತ್ರದಲ್ಲಿ ಕಾಂಗ್ರೆಸ್ ಸಕ್ರಿಯವಾಗಿದ್ದು, ಪಕ್ಷದ ನಾಯಕರು ಸೂಕ್ತ ಅಭ್ಯರ್ಥಿಯ ಹುಡುಕಾಟದಲ್ಲಿದ್ದಾರೆ. ಚುನಾವಣೆಗೆ ಇನ್ನೂ ಎರಡು ವರ್ಷವಿರುವ ಮುನ್ನವೇ ಕೆಪಿಸಿಸಿ ಅಧ್ಯಕ್ಷ ಡಿ. ಕೆ. ಶಿವಕುಮಾರ್ ಪಕ್ಷ ಸಂಘಟನೆಗೆ ಮುಂದಾಗಿ ಮಹದೇಪುರ ಕ್ಷೇತ್ರಕ್ಕೆ ಖಾಸಗಿ ಭೇಟಿ ನೀಡಿದ್ದು, ಕುತೂಹಲಕ್ಕೆ ಎಡೆಮಾಡಿಕೊಟ್ಟಿದೆ.
ಬಳಿಕ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಡಿಕೆಶಿ, ಈಗಾಗಲೇ ನಾವು ಅಭ್ಯರ್ಥಿಗಾಗಿ ಶೋಧ ಕಾರ್ಯ ಮಾಡುತ್ತಿದ್ದೇವೆ. ಸ್ಥಳೀಯರನ್ನೇ ಆಯ್ಕೆಮಾಡುವ ಆಲೋಚನೆ ಇದೆ. ಬರೀ ಟಿಕೆಟ್ ಬೇಕು ಎನ್ನುವರಿಗೆ ಅವಕಾಶ ವಿಲ್ಲ. ಯಾರು ಕೋವಿಡ್ ಸಮಯದಲ್ಲಿ ನಿಷ್ಠಾವಂತರಾಗಿ ಕಾರ್ಯ ನಿರ್ವಹಿಸಿದ್ದಾರೆ, ಯಾರು ಜನರ ಕಷ್ಟಗಳಿಗೆ ಸ್ಪಂದಿಸಿದ್ದಾರೆ ಅಂತಹವರಿಗೆ ಟಿಕೆಟ್ ನೀಡಲಾಗುವುದು ಎಂದರು.
ಈ ಬಾರಿ ಎಲ್ಲಾ ಕ್ಷೇತ್ರದಲ್ಲಿ ಚುನಾವಣೆಗೂ ಮುನ್ನವೇ ಅಭ್ಯರ್ಥಿಗಳ ಘೋಷಣೆ ಮಾಡಲಾಗುತ್ತದೆ. ಈಗ ಹೊಸ ಕಾಲ, ಎಲ್ಲವೂ ಮುಂಚಿತವಾಗಿಯೇ ಆಗುತ್ತದೆ. ಯಾರು ಟಿಕೆಟ್ ಆಕಾಂಕ್ಷಿಗಳು ಇದ್ದಾರೋ ಅವರು ಫೀಲ್ಡ್ ನಲ್ಲಿರಬೇಕು. ಪಕ್ಷ ಸಂಘಟನೆಯಲ್ಲಿ ತೊಡಗಿರಬೇಕು. ಜನ ಸೇವೆ ಮಾಡಬೇಕು ಎಂದು ಹೇಳಿದ್ದೇವೆ ಎಂದು ತಿಳಿಸಿದರು.
ಸೋಲಿನಿಂದ ಹೊರಬರಲು ಪೂರ್ವ ಸಿದ್ಧತೆ
ಕಳೆದ ಮೂರು ಚುನಾವಣೆಗಳಿಂದ ಮಹದೇವಪುರ ಕ್ಷೇತ್ರದಲ್ಲಿ ಕಾಂಗ್ರೆಸ್ ಕಡಿಮೆ ಅಂತರದಿಂದ ಸೋಲು ಅನುಭವಿಸುತ್ತಿದೆ. ಹೀಗಾಗಿ ಆದಷ್ಟು ಬೇಗ ಅಭ್ಯರ್ಥಿಯನ್ನು ಆಯ್ಕೆ ಮಾಡಿ ಪಕ್ಷ ಸಂಘಟನೆಗೆ ಮುಂದಾಗಲು ತಯಾರಿ ನಡೆಯುತ್ತಿದೆ. ಈ ನಿಟ್ಟಿನಲ್ಲಿ ಹಲವು ದಿನಗಳಿಂದ ಕಾಂಗ್ರೆಸ್ ನಾಯಕರ ದಂಡು ಕ್ಷೇತ್ರದಲ್ಲಿ ಸಭೆ-ಸಮಾರಂಭಗಳನ್ನು ನಡೆಸುತ್ತಿದೆ.