ಬೆಂಗಳೂರು: ಗೃಹ ಬಳಕೆ ಅಡುಗೆ ಅನಿಲ ಹೆಚ್ಚಳ ಮಾಡಿರುವ ಕೇಂದ್ರ ಸರ್ಕಾರದ ಕ್ರಮ ಖಂಡಿಸಿ ರಾಜ್ಯ ಯುವ ಕಾಂಗ್ರೆಸ್ ಪ್ರತಿಭಟನೆ ನಡೆಸಿತು.
ಬೆಂಗಳೂರಿನ ರೇಸ್ ಕೋರ್ಸ್ ರಸ್ತೆಯ ಕಾಂಗ್ರೆಸ್ ಭವನದಲ್ಲಿ ಬೆಂಗಳೂರು ನಗರ ಕಾಂಗ್ರೆಸ್ ಪ್ರಚಾರ ಸಮಿತಿ ಮುಖ್ಯಸ್ಥರಾದ ಎಸ್ ಮನೋಹರ್ ನೇತೃತ್ವದಲ್ಲಿ ಹಮ್ಮಿಕೊಂಡಿದ್ದ ಪ್ರತಿಭಟನೆಯಲ್ಲಿ ಕಾರ್ಯಕರ್ತರು ಕೇಂದ್ರ ಸರ್ಕಾರದ ವಿರುದ್ಧ ಘೋಷಣೆ ಕೂಗಿ ತಮ್ಮ ಆಕ್ರೋಶ ವ್ಯಕ್ತಪಡಿಸಿದರು.
ಪ್ರತಿಭಟನಾಕಾರರನ್ನು ಉದ್ದೇಶಿಸಿ ಕಾಂಗ್ರೆಸ್ ಮುಖಂಡ ಮನೋಹರ್ ಮಾತನಾಡಿ, ಕೇಂದ್ರ ಬಿಜೆಪಿ ಸರ್ಕಾರ ಎಲ್ಪಿಜಿ ದರವನ್ನು ಏರಿಕೆ ಮಾಡುವುದರ ಮೂಲಕ ಸಬ್ಸಿಡಿ ಕಡಿತ ಗೊಳಿಸಿ 1ತಿಂಗಳ ಅವಧಿಯಲ್ಲಿ ನೂರು ರೂ. ಹೆಚ್ಚುವರಿ ಹಣವನ್ನು ಗ್ರಾಹಕರಿಂದ ವಸೂಲು ಮಾಡಿ ಜನರ ಮೇಲೆ ಹೊರೆ ಹಾಕುತ್ತಿದೆ. ನಿರಂತರವಾಗಿ ಪೆಟ್ರೋಲ್ ಡೀಸೆಲ್ ದರ ಏರಿಕೆ ಮಾಡಿ ವಾಹನ ಸವಾರರಿಗೆ ತೀವ್ರ ಸಂಕಷ್ಟ ತಂದಿದೆ. ಈ ದೇಶದ ಅನ್ನದಾತರು ಬಿಜೆಪಿ ಸರ್ಕಾರದ ರೈತ ವಿರೋಧಿ ನೀತಿಯ ಮಸೂದೆ ವಿರೋಧಿಸಿ ಪ್ರತಿಭಟನೆ ನಡೆಸುತ್ತಿದ್ದರೂ ಪ್ರಧಾನಿ ನರೇಂದ್ರ ಮೋದಿ ಪ್ರತಿಭಟನೆ ಕಡೆ ಗಮನಹರಿಸದೇ ರೈತರ ಸಾವು ನಿರ್ಲಕ್ಷಿಸಿ ನಿತ್ಯ ಪ್ರಚಾರದಲ್ಲಿ ತೊಡಗಿದ್ದಾರೆ. ಇವರ ವರ್ತನೆ ಹಾಗೂ ಜನವಿರೋಧಿ ನೀತಿ ಖಂಡಿಸಿ ಇಂದು ಪ್ರತಿಭಟನೆ ನಡೆಸಿ ಕೂಡಲೇ ದರ ಕಡಿತಗೊಳಿಸಬೇಕು ಎಂದು ಆಗ್ರಹಿಸಲಾಗಿದೆ ಎಂದು ತಿಳಿಸಿದರು.
ಅಚ್ಚೇದಿನ್, ಸಬ್ಕಾ ಸಾಥ್ ಸಬ್ ಕಾ ವಿಕಾಸ್ ಘೋಷಣೆ ಮೂಲಕ ಅಧಿಕಾರಕ್ಕೆ ಬಂದ ನರೇಂದ್ರ ಮೋದಿ ದೇಶದ ಜನರ ಮೇಲೆ ನಿರಂತರವಾಗಿ ಸಾಲದ ಹೊರೆ ಹೊರಿಸುತ್ತಿದ್ದಾರೆ. ಕೇವಲ ಪ್ರಚಾರಕ್ಕಾಗಿ ನಿತ್ಯ ಕಾಲಹರಣ ಮಾಡಿ ಜನರನ್ನು ವಂಚಿಸುತ್ತಿದ್ದಾರೆ. ಕೂಡಲೇ ದರ ಏರಿಕೆಯನ್ನು ಕಡಿತಗೊಳಿಸಬೇಕು. ಸಾರ್ವಜನಿಕರ ಸಂಕಷ್ಟಕ್ಕೆ ಸ್ಪಂದಿಸದೇ ಕೇವಲ ಚುನಾವಣೆಗಳಲ್ಲಿ ಮಾತ್ರ ಭಾಗವಹಿಸಿ ಪ್ರಚಾರ ನಡೆಸಿ ಬಿಜೆಪಿ ಬಲವರ್ಧನೆಗೆ ಶ್ರಮಿಸುತ್ತಿದ್ದಾರೆಯೇ ಹೊರತು ದೇಶದ ಅಭಿವೃದ್ಧಿಗೆ ಕಿಂಚಿತ್ತೂ ಶ್ರಮವನ್ನು ನರೇಂದ್ರ ಮೋದಿ ಹಾಗೂ ಅವರ ತಂಡ ವಹಿಸುತ್ತಿಲ್ಲ. ಇಂತಹ ಬೇಜವಾಬ್ದಾರಿ ಸರ್ಕಾರ ಸ್ವಾತಂತ್ರ್ಯ ನಂತರ ಬಂದ ಮೊದಲ ಸರ್ಕಾರವಾಗಿದೆ. ರೈತರ ಬೇಡಿಕೆ ಈಡೇರಿಸಬೇಕು. ರೈತ ವಿರೋಧಿ ಮಸೂದೆಯನ್ನು ಕೈಬಿಡಬೇಕೆಂದು ಆಗ್ರಹಿಸುತ್ತಿದ್ದರೂ ಕಿಂಚಿತ್ತೂ ಕಾಳಜಿ ವಹಿಸದೇ ಬೇಜವಾಬ್ದಾರಿತನವನ್ನು ಕೇಂದ್ರ ಬಿಜೆಪಿ ಸರ್ಕಾರ ನಡೆಸುತ್ತಿದೆ.
ಇದನ್ನೂ ಓದಿ: ಪ್ರಧಾನಿ ನರೇಂದ್ರ ಮೋದಿ ಆಧುನಿಕ ಭಸ್ಮಾಸುರ: ವಿ.ಎಸ್.ಉಗ್ರಪ್ಪ
ಕಾರ್ಮಿಕರು ಜನಸಾಮಾನ್ಯರು ರೈತರ ಮನವಿಗೂ ಸ್ಪಂದಿಸದೇ ನರೇಂದ್ರ ಮೋದಿ ಆಡಳಿತ ನಡೆಸುತ್ತಿದ್ದಾರೆ. ಇವರು ಕೇವಲ ಚುನಾವಣೆಗೋಸ್ಕರ ಸೃಷ್ಟಿಯಾಗಿರುವ ಪ್ರಧಾನಿಮಂತ್ರಿ ಎಂಬುದು ಈಗ ಜಗಜ್ಜಾಹೀರಾಗಿದೆ. ಕೂಡಲೇ ದರ ಏರಿಕೆ ಕಡಿತಗೊಳಿಸಿ ಜನಸಾಮಾನ್ಯರ ನೋವಿನ ಮನವಿಗೆ ಸ್ಪಂದಿಸಬೇಕು ಎಂದು ನಾವು ಕಾಂಗ್ರೆಸ್ ಪಕ್ಷದ ಪರವಾಗಿ ಆಗ್ರಹಿಸುತ್ತೇವೆ ಎಂದರು.