ಬೆಂಗಳೂರು: ರಾಜ್ಯ ಸರ್ಕಾರದ ನೈಟ್ ಕರ್ಫ್ಯೂ ನಿರ್ಧಾರವನ್ನು ಇಂದು ಕೂಡ ಕಾಂಗ್ರೆಸ್ ನಾಯಕರು ಖಂಡಿಸಿದ್ದಾರೆ.
ಕೆಪಿಸಿಸಿ ಮಾಜಿ ಅಧ್ಯಕ್ಷ ದಿನೇಶ್ ಗುಂಡೂರಾವ್ ಕೂಡ ಈ ಕುರಿತು ಟ್ವೀಟ್ ಮಾಡಿದ್ದು, ಕೊರೊನಾ ನಿಯಂತ್ರಿಸಲು ರಾಜ್ಯ ಸರ್ಕಾರ ಕೈಗೊಂಡಿರುವ ಕ್ರಮಗಳು ಹುಚ್ಚರ ಸಂತೆಯಲ್ಲಿ ತೆಗೆದುಕೊಳ್ಳುವ ನಿರ್ಧಾರದಂತೆ ಇದೆ. ಕಾಟಾಚಾರಕ್ಕೆ ರಾತ್ರಿ ಕರ್ಫ್ಯೂ ಹೇರಿ ಸರ್ಕಾರ ಏನನ್ನು ಸಾಧಿಸಲು ಹೊರಟಿದೆ?, ವಿವೇಕಯುತ ಸರ್ಕಾರ ತೆಗೆದುಕೊಳ್ಳುವ ನಿರ್ಧಾರವೇ ಇದು?, ಸರ್ಕಾರಕ್ಕೆ ಅರಳು-ಮರಳೋ ಅಥವಾ ಸರ್ಕಾರ ನಡೆಸುವವರಿಗೆ ಅರಳು ಮರಳೋ? ಎಂದು ಅರ್ಥವಾಗುತ್ತಿಲ್ಲ ಎಂದಿದ್ದಾರೆ.
ರಾಜ್ಯ ಕಾಂಗ್ರೆಸ್ ಟ್ವೀಟ್ ಮಾಡಿದ್ದು, ಮೊದಲಿಂದಲೂ ಎಡವಟ್ಟು ನಿರ್ಧಾರಗಳಿಂದ ಕೊರೊನಾ ನಿರ್ವಹಣೆಯಲ್ಲಿ ಸೋತಿರುವ ರಾಜ್ಯ ಬಿಜೆಪಿ ಸರ್ಕಾರ, ಈಗ ರಾತ್ರಿ ಕರ್ಫ್ಯೂ ಎನ್ನುವ ಹಾಸ್ಯಾಸ್ಪದ ನಿರ್ಧಾರ ಕೈಗೊಂಡಿದೆ. ಇಂತಹ ಎಡಬಿಡಂಗಿ ಆಲೋಚನೆಗಳನ್ನು ಬಿಟ್ಟು ಸೂಕ್ತ ತಜ್ಞರ ಸಲಹೆ ಪಡೆದು, ಪ್ರಬುದ್ಧ ನಿರ್ಧಾರ ಕೈಗೊಳ್ಳಿ ಎಂದು ಸೂಚನೆ ನೀಡಲಾಗಿದೆ.