ಬೆಂಗಳೂರು : ಮಹಾನಗರ ಸಂಪೂರ್ಣ ಸ್ತಬ್ಧಗೊಂಡಿದೆ. ಎರಡು ದಿನ ರಾಜ್ಯ ಕಾಂಗ್ರೆಸ್ ನಾಯಕರು ಕೇವಲ ಆಡಳಿತ ಪಕ್ಷದ ವಿರುದ್ಧ ಸಾಮಾಜಿಕ ಜಾಲತಾಣದಲ್ಲಿ ಆಕ್ರೋಶ ವ್ಯಕ್ತಪಡಿಸಿದಾರೆ. ಅಷ್ಟೇ ಅಲ್ಲ, ಸರ್ಕಾರದ ನಡೆಯನ್ನು ಸೂಕ್ಷ್ಮವಾಗಿ ಗಮನಿಸಿ ಮುಂದಿನ ಹೆಜ್ಜೆ ಇರಿಸಲು ತೀರ್ಮಾನಿಸಿದ್ದಾರೆ.
ರಾಜ್ಯ ಸರ್ಕಾರ ಕೈಗೊಂಡಿರುವ ವಾರಾಂತ್ಯ ಕರ್ಫ್ಯೂ ಹಾಗೂ ಮುಂದಿನ ದಿನಗಳಲ್ಲಿ ವಿಧಿಸಲು ಉದ್ದೇಶಿಸುತ್ತಿರುವ ಲಾಕ್ಡೌನ್ ವಿಚಾರವಾಗಿ ಪ್ರತಿರೋಧ ಒಡ್ಡುವ ನಿಟ್ಟಿನಲ್ಲಿ ಅಗತ್ಯ ಸಿದ್ಧತೆ ಮಾಡಿಕೊಳ್ಳುವ ಕಾರ್ಯವನ್ನು ಕಾಂಗ್ರೆಸ್ ಕಳೆದ ಎರಡು ದಿನದಿಂದ ಮಾಡಿದೆ.
ವಾಹನ ಸವಾರರನ್ನು ತಡೆದು ಪೊಲೀಸರು ನಡೆಸಿದ ವಿಚಾರಣೆ, ಅಮಾಯಕರಿಗೆ ಓಡಾಟಕ್ಕೆ ಉಂಟಾದ ತೊಂದರೆ, ಅಘೋಷಿತ ಲಾಕ್ಡೌನ್ ಮಾದರಿಯ ಸ್ಥಿತಿ ನಿರ್ಮಿಸಿ, ವಾರಾಂತ್ಯ ಕರ್ಫ್ಯೂವನ್ನು ಲಾಕ್ಡೌನ್ ಮಾದರಿಗೆ ಪರಿವರ್ತಿಸಿದ್ದನ್ನು ಖಂಡಿಸಲು ಕಾಂಗ್ರೆಸ್ ತೀರ್ಮಾನಿಸಿದೆ.
ಹಿಂದೆ ಲಾಕ್ಡೌನ್ ಅವಧಿಯಲ್ಲಿ ಅಗತ್ಯ ವಸ್ತುಗಳ ಖರೀದಿಗೆ ಅವಕಾಶ ಇತ್ತು. ಆದರೆ, ಈ ಸಾರಿ ಕೇವಲ ಔಷಧ ಮಳಿಗೆ ಹಾಗೂ ಕೆಲ ಹೋಟೆಲ್ಗಳಿಂದ ಪಾರ್ಸಲ್ ವ್ಯವಸ್ಥೆ ಹೊರತುಪಡಿಸಿದರೆ ಬೇರೆ ಯಾವುದೇ ಅಗತ್ಯ ಪೂರೈಸಿಕೊಳ್ಳಲು ಜನ ಪರದಾಡಬೇಕಾಗಿ ಬಂದಿದೆ.
ಆಹಾರ ಪೂರೈಸುವವರು ಕೂಡ ದುಪ್ಪಟ್ಟು ಬೆಲೆ ಕೇಳುತ್ತಿದ್ದಾರೆ. ಈ ಎಲ್ಲಾ ವಿಚಾರವನ್ನು ಮುಂದಿಟ್ಟುಕೊಂಡು ಸರ್ಕಾರದ ವಿರುದ್ಧ ಮುಗಿಬೀಳಲು ಕಾಂಗ್ರೆಸ್ ತೀರ್ಮಾನಿಸಿದೆ. ಇನ್ನೆರಡು ದಿನಗಳ ನಂತರ ಬರುವ ಕೋವಿಡ್ ಪಾಸಿಟಿವ್ ವರದಿಯನ್ನು ಗಮನಿಸಿ ಮುಂದಿನ ಹೋರಾಟಕ್ಕೆ ಅಣಿಯಾಗಲು ನಿರ್ಧರಿಸಿದೆ.
ಶೇ.20ರಷ್ಟು ಇಲ್ಲವೇ ಇದಕ್ಕಿಂತ ಹೆಚ್ಚಿನ ಪ್ರಮಾಣದ ನಿಯಂತ್ರಣವಾಗಿದ್ದರೆ ಪರವಾಗಿಲ್ಲ. ಇಲ್ಲವಾದರೆ ವಾರಾಂತ್ಯ ಕರ್ಫ್ಯೂವನ್ನೇ ವಿಚಾರವಾಗಿಕೊಟ್ಟುಕೊಂಡು ಹೋರಾಡಲು ಕಾಂಗ್ರೆಸ್ ತೀರ್ಮಾನ ಕೈಗೊಂಡಿದೆ.
ಇಂದು ಕಾಂಗ್ರೆಸ್ ರಾಜ್ಯ ನಾಯಕರು ಮಹತ್ವದ ತೀರ್ಮಾನ ಕೈಗೊಂಡಿದ್ದು, ಕೋವಿಡ್ ವಿಕೋಪಕ್ಕೆ ಹೋಗುತ್ತಿರುವುದನ್ನು ತಡೆಯುವಲ್ಲಿ ಬಿಜೆಪಿ ಸರ್ಕಾರ ವಿಫಲವಾಗಿದೆ. ಇಂದು ಮಹಾಮಾರಿ ಸಮುದಾಯಕ್ಕೆ ವ್ಯಾಪಿಸಿದೆ.
ಸೂಕ್ತ ಕಾರ್ಯ ಯೋಜನೆ ಹಾಗೂ ಕ್ರಮ ಕೈಗೊಳ್ಳದಿರುವುದೇ ಈ ಸಮಸ್ಯೆಗೆ ಕಾರಣ. ಸರ್ಕಾರ ಮುಂಚಿತವಾಗಿ ತಿಳಿಸದೆ ಲಾಕ್ಡೌನ್ ಘೋಷಿಸಿ ಕಳೆದ ವರ್ಷ ತಪ್ಪು ಮಾಡಿತ್ತು. ಈ ವರ್ಷ ವಾರಾಂತ್ಯ ಕರ್ಫ್ಯೂ ಹೆಸರಿನಲ್ಲಿ ಜನರಿಗೆ ಸಮಸ್ಯೆ ತಂದಿಟ್ಟಿದೆ.
ಇದನ್ನು ನಾವು ಸರ್ಕಾರಕ್ಕೆ ಅರಿವು ಮೂಡಿಸುವ ಕಾರ್ಯ ಮಾಡಬೇಕು. ಸರ್ಕಾರ ಜನರ ಬದುಕಿಗೆ ಮಾರಕವಾಗುವ ಲಾಕ್ಡೌನ್ ಮಾಡಲು ಮುಂದಾಗಿದೆ. ಇದನ್ನು ನಾವು ಖಂಡಿಸಬೇಕೆಂದು ತೀರ್ಮಾನಿಸಿದ್ದೇವೆ ಎಂದು ಪಕ್ಷದ ನಾಯಕರು ಹೇಳುತ್ತಿದಾರೆ.
ರಾಜ್ಯ ಸರ್ಕಾರ ಕಳೆದ ಎರಡು ದಿನ ಯಾವುದೇ ಚಟುವಟಿಕೆಯಲ್ಲಿ ಭಾಗಿಯಾಗಿಲ್ಲ. ನಾಳೆ ಬೆಳಗ್ಗೆ ಕಾಂಗ್ರೆಸ್ ನಾಯಕರು ಒಂದೆಡೆ ಸೇರಿ ಚರ್ಚಿಸುವ ಸಾಧ್ಯತೆ ಇದೆ. ಈ ಸಂದರ್ಭ, ರಾಜ್ಯದ ಜನತೆಗೆ ಅನ್ಯಾಯವಾಗದಂತೆ ಲಾಕ್ಡೌನ್ ಇಲ್ಲವೇ ವಾರಾಂತ್ಯ ಕರ್ಫ್ಯೂ ಜಾರಿಗೆ ತರುವಂತೆ ಸರ್ಕಾರದ ಮೇಲೆ ಒತ್ತಡ ತರಲಿದ್ದಾರೆ. ಇದನ್ನೇ ರಾಜ್ಯ ಕಾಂಗ್ರೆಸ್ ನಾಯಕರು ತೀರ್ಮಾನಿಸಿದ್ದಾರೆ ಕೂಡ.