ಬೆಂಗಳೂರು: ರಮೇಶ್ ಜಾರಕಿಹೊಳಿ ಕಾಂಗ್ರೆಸ್ ಪಕ್ಷ ಬಿಟ್ಟು ವರ್ಷ ಕಳೆದರೂ ಇನ್ನೂ ಪಕ್ಷದ ಕೆಲ ಶಾಸಕರೊಂದಿಗೆ ಆತ್ಮೀಯತೆಯನ್ನು ಉಳಿಸಿಕೊಂಡಿದ್ದಾರೆ.
ರಮೇಶ್ ಜಾರಕಿಹೊಳಿ ಅವರ ಸದಾಶಿವನಗರ ನಿವಾಸಕ್ಕೆ ಇಂದು ಮಾಜಿ ಸಚಿವ ಹಾಗೂ ಶಾಸಕ ವೆಂಕಟ ರಮಣಪ್ಪ, ಕಂಪ್ಲಿ ಗಣೇಶ್, ರಾಮಪ್ಪ, ಮಾಜಿ ಶಾಸಕ ಕೆ.ಎನ್.ರಾಜಣ್ಣ ಭೇಟಿ ನೀಡಿ, ಕೆಲ ವಿಚಾರಗಳ ಕುರಿತು ಚರ್ಚೆ ನಡೆಸಿದರು.
ರಮೇಶ್ ಜಾರಕಿಹೊಳಿ ಕಾಂಗ್ರೆಸ್ ಪಕ್ಷವನ್ನು ತ್ಯಜಿಸಿ, ಬಿಜೆಪಿ ಸೇರಿ ಮರು ಚುನಾವಣೆಯಲ್ಲಿ ಗೆದ್ದು ಸಚಿವರಾಗಿ, ಇದೀಗ ಸಿಡಿ ಹಗರಣದ ವಿಚಾರವಾಗಿ ರಾಜೀನಾಮೆ ನೀಡಿದ್ದಾರೆ. ಈ ಸಂದರ್ಭದಲ್ಲಿ ತಮ್ಮ ಆತ್ಮೀಯತೆಯನ್ನು ಮರೆಯದ ನಾಲ್ವರು ಕಾಂಗ್ರೆಸ್ ನಾಯಕರು ಇಂದು ರಮೇಶ್ ಜಾರಕಿಹೊಳಿ ಮನೆಗೆ ಭೇಟಿ ನೀಡಿ ಸುದೀರ್ಘ ಚರ್ಚೆ ನಡೆಸಿದ್ದಾರೆ. ಯಾವುದೇ ಕಾರಣಕ್ಕೂ ಧೈರ್ಯಗೆಡಬೇಡಿ, ಈ ಮುಜುಗರದಿಂದ ನೀವು ಆದಷ್ಟು ಶೀಘ್ರ ಹೊರಬರುತ್ತೀರಿ. ತಮ್ಮನ್ನು ರಾಜಕೀಯವಾಗಿ ಮುಗಿಸಲು ಇಂತಹದ್ದೊಂದು ಷಡ್ಯಂತ್ರ ನಡೆಸಲಾಗಿದೆ. ಕೆಲವೇ ದಿನಗಳಲ್ಲಿ ತಾವು ಆರೋಪ ಮುಕ್ತರಾಗಿ ಬರುತ್ತೀರಿ ಎಂದು ಧೈರ್ಯ ತುಂಬುವ ಕಾರ್ಯವನ್ನು ಕಾಂಗ್ರೆಸ್ ನಾಯಕರು ಮಾಡಿದ್ದಾರೆ.
ರಮೇಶ್ ಭೇಟಿಯಾದ ಪ್ರಣವಾನಂದ ಸ್ವಾಮೀಜಿ:
ಇಂದು ರಮೇಶ್ ಜಾರಕಿಹೊಳಿ ನಿವಾಸಕ್ಕೆ ಪ್ರಣವಾನಂದ ಸ್ವಾಮೀಜಿ ಭೇಟಿ ನೀಡಿದ್ದರು. ಶ್ರೀಗಳನ್ನು ರಮೇಶ್ ಜಾರಕಿಹೊಳಿ ಸತ್ಕರಿಸಿ, ಆಶೀರ್ವಾದ ಪಡೆದರು.
ರಮೇಶ್ ಜಾರಕಿಹೊಳಿ ಭೇಟಿ ನಂತರ ಮಾತನಾಡಿದ ಪ್ರಣವಾನಂದ ಸ್ವಾಮೀಜಿ, ಹಿಂದುಳಿದ ವರ್ಗದ ನಾಯಕರ ವಿರುದ್ಧ ಷಡ್ಯಂತ್ರ ನಡೆಯುತ್ತಿದೆ. ರಾಜಕೀಯದಿಂದ ದೂರ ಇಡಲು ಈ ರೀತಿಯ ಷಡ್ಯಂತ್ರ ಮಾಡಲಾಗಿದೆ. ರಮೇಶ್ ಜಾರಕಿಹೊಳಿ ಸಿಡಿ ವಿಚಾರದ ಕುರಿತು ತನಿಖೆ ನಡೆಸುವ ಅಗತ್ಯವಿಲ್ಲ. ಸತ್ಯಾಂಶ ಏನಿದೆ ಎಂಬುದು ಎಲ್ಲರಿಗೂ ಗೊತ್ತಿದೆ. ಸಂತ್ರಸ್ತ ರಮೇಶ್ ಜಾರಕಿಹೊಳಿಗೆ ಕೂಡಲೇ ಸಚಿವ ಸ್ಥಾನ ನೀಡಬೇಕು. ರಮೇಶ್ ಜಾರಕಿಹೊಳಿಯನ್ನು ಮಂತ್ರಿ ಮಾಡಬೇಕು. ಹಾಗೂ ಷಡ್ಯಂತ್ರ ಮಾಡಿದವರ ವಿರುದ್ಧ ತನಿಖೆಯಾಗಲಿ, ತಪ್ಪಿತಸ್ಥರ ವಿರುದ್ಧ ಕ್ರಮ ಕೈಗೊಳ್ಳಬೇಕು. ಹಾಗೂ ಈಡಿಗ ಸಮುದಾಯಕ್ಕೆ ಡಿಸಿಎಂ ಸ್ಥಾನ ನೀಡಲಿ ಎಂದು ಒತ್ತಾಯಿಸಿದರು.
ಇನ್ನು ಒಂದು ಗಂಟೆಗಳ ಕಾಲ ರಮೇಶ್ ಜಾರಕಿಹೊಳಿ ಜೊತೆ ಕಂಪ್ಲಿ ಗಣೇಶ್ ಚರ್ಚೆ ನಡೆಸಿ ವಾಪಸ್ ಆದ ಸಂದರ್ಭದಲ್ಲಿ ಸುದ್ದಿಗಾರರ ಜೊತೆ ಮಾತನಾಡಿದ ಅವರು, ರಾಜಕೀಯ ಬೇರೆ, ವೈಯಕ್ತಿಕ ಸಂಬಂಧ ಬೇರೆ. ಸಂಕಷ್ಟದ ಸಮಯದಲ್ಲಿ ಧೈರ್ಯ ತುಂಬಲು ಬಂದಿದ್ದೇನೆ. ಸಿಡಿ ವಿಚಾರದ ಕುರಿತು ಯಾವುದೇ ಪ್ರತಿಕ್ರಿಯೆ ನೀಡಲ್ಲ ಎಂದರು.