ಬೆಂಗಳೂರು: ಕಾಂಗ್ರೆಸ್ ಅಸ್ತಿತ್ವ ಉಳಿಸಿಕೊಳ್ಳಲು ಹೋರಾಟ ಮಾಡುತ್ತಿರುವ ಪಕ್ಷ. ನಾವಿದೀವಿ ಅಂತ ಆರ್‌ಎಸ್‌ಎಸ್ ವಿರುದ್ಧ ಮಾತಾಡುವ ಮೂಲಕ ಅಟೆಂಡೆನ್ಸ್ ಹಾಕಿದಾರೆ. ಒಂದು ಗರಿಕೆ ಹುಲ್ಲು ಸಿಕ್ಕಿದ್ರೂ ಅದನ್ನು ಹಿಡಿದು ಉಳಿದುಕೊಳ್ಳುವ ಪ್ರಯತ್ನದಂತೆ, ಮಾಡ್ತಿದ್ದಾರೆ ಎಂದು ಉನ್ನತ ಶಿಕ್ಷಣ ಸಚಿವ ಡಾ.ಅಶ್ವತ್ಥ ನಾರಾಯಣ್ ವಾಗ್ದಾಳಿ ನಡೆಸಿದ್ದಾರೆ.
ಯಶವಂತಪುರದ ಅಪಾರ್ಟ್‌ಮೆಂಟ್ ಸೋಲಾರ್ ಅಳವಡಿಕೆ ಉದ್ಘಾಟನೆ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದ ಅವರು, ಜೆಡಿಎಸ್ ಪರಿಸ್ಥಿತಿ ಸಹ ಹೀಗೆ ಆಗಿದೆ. ಜೆಡಿಎಸ್ ಸಹ ನೆಲೆ ಕಂಡುಕೊಳ್ಳಲು ಪ್ರಯತ್ನಪಡ್ತಿದೆ. ಜೆಡಿಎಸ್ ಪ್ರಸ್ತುತತೆ ಇಲ್ಲ, ನೆಲೆ ಇಲ್ಲ. ಬಾಯಿಗೆ ಬಂದ ಆಪಾದನೆ ಮಾಡೋ ಕೆಲಸ ಮಾಡ್ತಿದೆ ಎಂದು ಟೀಕಿಸಿದರು.
'ಐಟಿ ದಾಳಿಗೂ ಯಡಿಯೂರಪ್ಪಗೂ ಸಂಬಂಧ ಇಲ್ಲ'
ಯಡಿಯೂರಪ್ಪ, ವಿಜಯೇಂದ್ರ ಅವರನ್ನು ನಿಯಂತ್ರಿಸಲು ಐಟಿ ದಾಳಿ ಎಂಬ ಚರ್ಚೆ ಬಗ್ಗೆ ಪ್ರತಿಕ್ರಿಯಿಸಿದ ಅವರು, ಕಾನೂನಿಗಿಂತ ಯಾರೂ ದೊಡ್ಡವರಲ್ಲ. ಕಾನೂನು ಪಾಲನೆ ಎಲ್ಲರೂ ಮಾಡಬೇಕು. ಐಟಿ ದಾಳಿ ಯಡಿಯೂರಪ್ಪಗೆ ಸಂಬಂಧ ಪಟ್ಟಿಲ್ಲ. ಯಾರೋ ಒಬ್ಬ ವ್ಯಕ್ತಿ ಮೇಲೆ ಐಟಿ ದಾಳಿಯಾದರೆ ಇನ್ಯಾರಿಗೋ ಸಂಬಂಧ ಕಲ್ಪಿಸಬಾರದು. ಸಮಾಜ ಪಾರದರ್ಶಕತೆ ಬಯಸುತ್ತಿದೆ ಎಂದರು ಹೇಳಿದರು.
ಐಟಿ ದಾಳಿ ಆದ ಮಾತ್ರಕ್ಕೆ ತಪ್ಪಿತಸ್ಥರಾಗುವುದಿಲ್ಲ. ಎಲ್ಲರ ಮೇಲೂ ಐಟಿ ದಾಳಿ ಆಗುತ್ತೆ. ದಾಳಿ ಬಳಿಕ ಗಳಿಕೆಯಲ್ಲಿ ಹೆಚ್ಚಳ, ಬೇರೆ ಬೇರೆ ರೂಪದ ಆದಾಯ ಇದ್ರೆ ತಪ್ಪಾಗುತ್ತೆ. ಪ್ರತಿಪಕ್ಷಗಳು ಟಾರ್ಗೆಟ್ ಮಾಡಿ ಐಟಿ ದಾಳಿ ಮಾಡಲಾಗುತ್ತಿದೆ ಅಂತ ಆರೋಪ ಮಾಡ್ತಿದ್ರು. ಆದ್ರೆ ಇವತ್ತು ನಾವು ತೋರಿಸ್ತಿದೀವಿ. ಪಕ್ಷಾತೀತವಾಗಿ ದಾಳಿ ಆಗುತ್ತದೆ, ಯಾರೂ ದೊಡ್ಡವರಲ್ಲ. ನಮ್ಮ ಪಕ್ಷದವರ ಮೇಲೆ, ಕೇಂದ್ರ ಸಚಿವರ ಮೇಲೂ ದಾಳಿ ಆಗಿದೆ. ಯಾರ ಮೇಲಾದರೂ ಐಟಿ ದಾಳಿ ಆಗಬಹುದು, ಇದು ಹೊಸದೇನಲ್ಲ. ಐಟಿ ದಾಳಿಗೂ ಯಡಿಯೂರಪ್ಪಗೂ ಸಂಬಂಧ ಇಲ್ಲ ಎಂದು ಸಚಿವ ಅಶ್ವತ್ಥ ನಾರಾಯಣ್ ಸ್ಪಷ್ಟಪಡಿಸಿದರು.