ಬೆಂಗಳೂರು : ಇಂಧನ ಬೆಲೆ ಏರಿಕೆ ಖಂಡಿಸಿ ರಾಜ್ಯ ಕಾಂಗ್ರೆಸ್ ನಾಯಕರು ನಾಳೆ ವಿಧಾನಸೌಧಕ್ಕೆ ಸೈಕಲ್ ಜಾಥಾ ಹಮ್ಮಿಕೊಂಡಿದ್ದಾರೆ. ಕಳೆದ ವಾರ ವಿಧಾನಸೌಧಕ್ಕೆ ಎತ್ತಿನಗಾಡಿ ಮೂಲಕ ಆಗಮಿಸಿದ್ದ ಕಾಂಗ್ರೆಸ್ ನಾಯಕರು, ಈ ಬಾರಿ ಸೈಕಲ್ ಮೂಲಕ ಆಗಮಿಸಿ ಕೇಂದ್ರ ಸರ್ಕಾರದ ಬೆಲೆ ಏರಿಕೆ ನೀತಿ ಖಂಡಿಸಲಿದ್ದಾರೆ.
ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ, ಕೆಪಿಸಿಸಿ ಅಧ್ಯಕ್ಷ ಡಿ ಕೆ ಶಿವಕುಮಾರ್ ಹಾಗೂ ಇತರೆ ಕಾಂಗ್ರೆಸ್ ನಾಯಕರು ಕಳೆದ ವಾರ ತಮ್ಮ ನಿವಾಸಗಳಿಂದ ಪ್ರತ್ಯೇಕವಾಗಿ ಎತ್ತಿನಗಾಡಿ ಮೂಲಕ ಆಗಮಿಸಿದ್ದರು. ಇದಕ್ಕೆ ಸರ್ಕಾರದಿಂದ ಹೆಚ್ಚಿನ ಸ್ಪಂದನೆ ಸಿಗದ ಹಿನ್ನೆಲೆ ನಾಳೆ ಸೈಕಲ್ ಮೂಲಕ ಆಗಮಿಸಲು ನಿರ್ಧರಿಸಿದ್ದಾರೆ.
ವಿಪಕ್ಷ ನಾಯಕ ಸಿದ್ದರಾಮಯ್ಯ, ಡಿ ಕೆ ಶಿವಕುಮಾರ್ ಹಾಗೂ ವಿಧಾನ ಪರಿಷತ್ ಪ್ರತಿಪಕ್ಷ ನಾಯಕ ಎಸ್ ಆರ್ ಪಾಟೀಲ್ ನೇತೃತ್ವದಲ್ಲಿ ಕಾಂಗ್ರೆಸ್ ಪಕ್ಷದ ಮಾಜಿ ಮಂತ್ರಿಗಳು, ಶಾಸಕರು, ವಿಧಾನ ಪರಿಷತ್ ಸದಸ್ಯರು ಬೆಳಗ್ಗೆ 10 ಗಂಟೆಗೆ ಬೆಂಗಳೂರಿನ ಕ್ವೀನ್ಸ್ ರಸ್ತೆಯ ಕೆಪಿಸಿಸಿ ಕಚೇರಿಯಿಂದ ವಿಧಾನಸೌಧದವರೆಗೆ ಸೈಕಲ್ ಜಾಥಾ ನಡೆಸಲಿದ್ದಾರೆ.
ಎಚ್ಚರಿಕೆಯ ಹೆಜ್ಜೆ : ಕಳೆದ ವಾರ ಎತ್ತಿನ ಗಾಡಿ ಮೂಲಕ ಆಗಮಿಸಿ ವಿಧಾನಸೌಧದ ಮುಂಭಾಗ ಜಮಾವಣೆಗೊಂಡು ಸಿದ್ದರಾಮಯ್ಯ ಹಾಗೂ ಡಿಕೆಶಿ ಒಟ್ಟಾಗಿ ವಿಧಾನಸೌಧ ಒಳಗೆ ತೆರಳಿದ್ದರು.
ಈ ಸಂದರ್ಭ ಉಂಟಾದ ಎಡವಟ್ಟಿನಿಂದಾಗಿ ಶಾಸಕರಾದ ವೆಂಕಟರಮಣಪ್ಪ ಹಾಗೂ ಬಿ ಕೆ ಸಂಗಮೇಶ್ ಎತ್ತಿನ ಗಾಡಿಯಿಂದ ಬಿದ್ದು ದೊಡ್ಡ ಸುದ್ದಿಯಾಗಿದ್ದರು. ಹೀಗಾಗಿ, ಮತ್ತೊಮ್ಮೆ ಇಂತಹ ಘಟನೆ ಮರುಕಳಿಸ ಬಾರದು ಎಂಬ ಕಾರಣಕ್ಕೆ ಸೈಕಲ್ ಏರಿ ಬರಲು ಕಾಂಗ್ರೆಸ್ ಮುಖಂಡರು ತೀರ್ಮಾನಿಸಿದ್ದಾರೆ.
ಇದನ್ನೂ ಓದಿ: Video: ಪ್ರತಿಭಟನೆ ವೇಳೆ ಎತ್ತಿನ ಗಾಡಿಯಿಂದ ಕೆಳಗೆ ಬಿದ್ದ ಕಾಂಗ್ರೆಸ್ ನಾಯಕರು!