ಬೆಂಗಳೂರು: ಮಹಾಲಕ್ಷ್ಮಿ ಲೇಔಟ್ ವಿಧಾನಸಭಾ ಕ್ಷೇತ್ರ ಉಪ ಚುನಾವಣೆ ಹಿನ್ನೆಲೆ ಅಭ್ಯರ್ಥಿಗಳ ಬಿರುಸಿನ ಪ್ರಚಾರ ನಡೆಯುತ್ತಿದೆ. ಕಾಂಗ್ರೆಸ್ ಅಭ್ಯರ್ಥಿ ಶಿವರಾಜ್ ಮುಂಜಾನೆಯಿಂದಲೇ ಪ್ರಚಾರದಲ್ಲಿ ತೊಡಗಿದ್ದಾರೆ. ಇನ್ನು ಜೆಡಿಎಸ್ನ ಹಲವರು ಬಿಜೆಪಿ ಅಭ್ಯರ್ಥಿ ಗೋಪಾಲಯ್ಯಗೆ ಬೆಂಬಲ ನೀಡುತ್ತಿರೋದು ಕೂಡ ಕಂಡು ಬಂದಿದೆ.
ಈ ಸಂಬಂಧ ಮಾತಾನಾಡಿದ ಶಿವರಾಜ್, ಜೆಡಿಎಸ್, ಬಿಜೆಪಿ ಪಕ್ಷದ ವಿರುದ್ಧ ವಾಗ್ದಾಳಿ ನಡೆಸಿದರು. ವಿರೋಧ ಪಕ್ಷಗಳು ಏನೇನು ತಂತ್ರಗಾರಿಕೆ ಉಪಯೋಗಿಸುತ್ತಿದ್ದಾರೆ, ಮೇಯರ್ ಚುನಾವಣೆ ವೇಳೆ ಏನೇನು ಮಾಡಿದ್ದಾರೆ, ಜೆಡಿಎಸ್ ಪಕ್ಷ ಸಂದರ್ಭಕ್ಕೆ ತಕ್ಕ ಹಾಗೆ ಏನೇನು ಮಾತಾನಾಡತ್ತೆ ಅನ್ನೋದು ಗೊತ್ತಿದೆ. ಇದೆಲ್ಲಾ ನಮ್ಮ ಕ್ಷೇತ್ರದ ಜನ ನೋಡ್ತಿದ್ದಾರೆ. ಜನರೇ ತೀರ್ಮಾನ ಮಾಡುತ್ತಾರೆ ಯಾರು ನಾಯಕರಾಗಬೇಕು ಎಂದು. ಹಣ ಬಲ, ಭುಜ ಬಲ ಏನೇ ಉಪಯೋಗಿಸಿದರು ಇಲ್ಲಿನ ಪ್ರಜ್ಞಾವಂತ ಜನರು ತಮ್ಮ ಮತ ಯಾರಿಗೆಂಬುದನ್ನು ನಿರ್ಧಾರ ಮಾಡುತ್ತಾರೆ.
ಕಾಂಗ್ರೆಸ್ ಪಕ್ಷದ ಎಲ್ಲಾ ನಾಯಕರು ನಮ್ಮ ಜೊತೆ ಇದ್ದಾರೆ. ಕಾಂಗ್ರೆಸ್ಗೆ ಜನ ಆಶೀರ್ವಾದ ಮಾಡಿ ಗೆಲ್ಲಿಸುತ್ತಾರೆ ಎಂಬ ನಂಬಿಕೆ ಇದೆ. ನಮ್ಮ ನಡೆ ಎಂದಿದ್ದರೂ ಮತದಾರರ ಕಡೆ. ಮತದಾರರ ತೀರ್ಪಿಗೆ ನಾವು ತಲೆ ಬಾಗುತ್ತೇವೆ ಎಂದರು.