ಬೆಂಗಳೂರು: ರಾಜ್ಯ ಬಿಜೆಪಿ ಸರ್ಕಾರವನ್ನು ಅಸ್ಥಿರಗೊಳಿಸುವ ಪ್ರಯತ್ನದ ಬದಲು ಉಪ ಚುನಾವಣೆಗೆ ಅಭ್ಯರ್ಥಿಗಳನ್ನು ಹುಡುಕಲು ಕಾಂಗ್ರೆಸ್ ಪಕ್ಷ ಗಂಭೀರವಾಗಿ ನಿರ್ಧರಿಸಿದೆ ಎನ್ನಲಾಗಿದೆ.
ಹೈಕಮಾಂಡ್ ಸೂಚನೆ ಹಿನ್ನೆಲೆ ಈ ನಿರ್ಧಾರಕ್ಕೆ ಬಂದಿರುವ ರಾಜ್ಯ ಕಾಂಗ್ರೆಸ್ ನಾಯಕರು, ಉಪ ಚುನಾವಣೆಯಲ್ಲಿ ಹೆಚ್ಚಿನ ಸ್ಥಾನವನ್ನು ಗೆಲ್ಲುವ ನಿಟ್ಟಿನಲ್ಲಿ ಸಿದ್ಧತೆ ಕೈಗೊಳ್ಳಲು ಮುಂದಾಗಿದ್ದಾರೆ. ಒಟ್ಟು 17 ಶಾಸಕರನ್ನು ಸ್ಪೀಕರ್ ಅನರ್ಹಗಳಿಸಿದ್ಧಾರೆ. ಇವರ ಸ್ಥಾನಗಳಿಗೆ ಆದಷ್ಟು ಶೀಘ್ರವೇ ಉಪ ಚುನಾವಣೆ ಘೋಷಣೆಯಾದರೂ ಆಗಬಹುದಾಗಿದ್ದು, ಇದಕ್ಕೆ ಆದಷ್ಟು ತ್ವರಿತವಾಗಿ ಸಿದ್ಧತೆ ಕೈಗೊಳ್ಳಲು ಕಾಂಗ್ರೆಸ್ ನಿರ್ಧರಿಸಿದೆ.
ಬಿಜೆಪಿ ಸರ್ಕಾರವನ್ನ ಅಸ್ಥಿರಗೊಳಿಸಲು ಮುಂದಾಗುವುದರಲ್ಲಿ ಯಾವುದೇ ಲಾಭವಿಲ್ಲ. ಇದರಿಂದ ಯೋಜನೆ ಕೈಬಿಡಲು ಕೈ ನಾಯಕರು ನಿರ್ಧರಿಸಿದ್ದಾರೆ. ಅತೃಪ್ತರ ಕ್ಷೇತ್ರಗಳಿಗೆ ಸಂಭಾವ್ಯರನ್ನು ಹುಡುಕಿ ಇವರನ್ನೇ ಮುಂದಿಟ್ಟು ಚುನಾವಣೆ ಎದುರಿಸಲು ಚಿಂತನೆ ನಡೆಸಿದ್ದಾರೆ ಎಂದು ತಿಳಿದು ಬಂದಿದೆ.
ಸಂಭಾವ್ಯರು ಯಾರು?
ಕಾಗವಾಡದಿಂದ ಮಾಜಿ ಸಂಸದ ಪ್ರಕಾಶ್ ಹುಕ್ಕೇರಿ ಅಭ್ಯರ್ಥಿ ಆಗುವುದು ಬಹುತೇಕ ಪಕ್ಕಾ ಆಗಿದೆ. ಇಲ್ಲಿ ಶಾಸಕರಾಗಿದ್ದ ಶ್ರೀಮಂತ ಪಾಟೀಲ್ ಅನಾರೋಗ್ಯದ ಕಾರಣ ಮುಂಬೈನಲ್ಲಿ ಚಿಕಿತ್ಸೆ ಪಡೆಯುತ್ತಿದ್ದು, ಅವರ ಶಾಸಕತ್ವವನ್ನು ಸ್ಪೀಕರ್ ರಮೇಶ್ ಕುಮಾರ್ ಅನರ್ಹಗೊಳಿಸಿದ್ದಾರೆ. ಅಂತೆಯೇ ಗೋಕಾಕ್ನಲ್ಲಿ ರಮೇಶ್ ಜಾರಕಿಹೊಳಿ ಸ್ಥಾನಕ್ಕೆ ಅವರ ಸಹೋದರ ಲಕನ್ ಜಾರಕಿಹೊಳಿ, ಹೊಸಕೋಟೆ ಎಂಟಿಬಿ ನಾಗರಾಜ್ ಸ್ಥಾನಕ್ಕೆ ಮಂಜುನಾಥ್ ಗೌಡ ( ಜೆಡಿಎಸ್ನಿಂದ ಕಾಂಗ್ರೆಸ್ಗೆ), ಚಿಕ್ಕಬಳ್ಳಾಪುರದ ಡಾ. ಕೆ.ಸುಧಾಕರ್ ಸ್ಥಾನಕ್ಕೆ ಎಂ.ಸಿ.ಸುಧಾಕರ್/ಆಂಜಿನಪ್ಪ (ಜೆಡಿಎಸ್ನಿಂದ ಕಾಂಗ್ರೆಸ್ಗೆ), ಕೆ.ಆರ್.ಪುರಂ ಭೈರತಿ ಬಸವರಾಜು ಸ್ಥಾನಕ್ಕೆ ಬಿಬಿಎಂಪಿ ಪಾಲಿಕೆ ಸದಸ್ಯ ಉದಯ್ ಕುಮಾರ್ ರೆಡ್ಡಿ/ಕೆಪಿಸಿಸಿ ಕಾನೂನು ಘಟಕದ ಅಧ್ಯಕ್ಷ ಧನಂಜಯ್ ಆಯ್ಕೆಯಾಗಬಹುದು.
ಮಹಾಲಕ್ಷ್ಮಿ ಲೇಔಟ್ ಗೋಪಾಲಯ್ಯ ಸ್ಥಾನಕ್ಕೆ ಮಾಜಿ ಶಾಸಕ ಮಾಗಡಿ ಬಾಲಕೃಷ್ಣ, ಎನ್ಎಸ್ಯುಐ ಅಧ್ಯಕ್ಷ ಹೆಚ್.ಎಸ್.ಮಂಜುನಾಥ್, ಆರ್.ಆರ್ ನಗರ ಮುನಿರತ್ನ ಜಾಗಕ್ಕೆ ಮಾಜಿ ಶಾಸಕ ಪ್ರಿಯಕೃಷ್ಣ/ ಬೆಂಗಳೂರು ಉತ್ತರ ಕೈ ಅಧ್ಯಕ್ಷ ರಾಜಕುಮಾರ್, ಕೆ.ಆರ್.ಪೇಟೆ ನಾರಾಯಣಗೌಡ ಸ್ಥಾನಕ್ಕೆ ಮಾಜಿ ಸಚಿವ ಚೆಲುವರಾಯಸ್ವಾಮಿ/ ಕೆ.ಬಿ.ಚಂದ್ರಶೇಖರ್, ಹುಣಸೂರು ಹೆಚ್. ವಿಶ್ವನಾಥ್ ಜಾಗಕ್ಕೆ ಮಾಜಿ ಶಾಸಕ ಹೆಚ್.ಸಿ.ಮಂಜುನಾಥ್, ರಾಣೆಬೆನ್ನೂರು ಆರ್. ಶಂಕರ್ ಜಾಗಕ್ಕೆ ಮಾಜಿ ಸ್ಪೀಕರ್ ಕೋಳಿವಾಡರ ಪುತ್ರನನ್ನು ಕಣಕ್ಕಿಳಿಸಲು ಚಿಂತಿಸಲಾಗುತ್ತಿದೆ. ಹಿರೆಕೆರೂರು ಬಿ.ಸಿ. ಪಾಟೀಲ್ ಜಾಗಕ್ಕೆ ಯು.ಬಿ.ಬಣಕಾರ್ ಪುತ್ರನಿಗೆ ಅವಕಾಶ ನೀಡುವ ಬಗ್ಗೆ ಚಿಂತನೆ ನಡೆಯುತ್ತದೆ ಎನ್ನಲಾಗಿದೆ.
ಚಿಕ್ಕಬಳ್ಳಾಪುರದ ಸುಧಾಕರ್ ಅವರಿಗೆ ಪಾಠ ಕಲಿಸಲು ಕೈ ನಾಯಕರು ರಣತಂತ್ರ ಹೆಣೆಯುತ್ತಿದ್ದಾರೆ. ಕೆಪಿಸಿಸಿ ಸದಸ್ಯ ಕೆ.ಎಸ್.ಜಗದೀಶ್ ರೆಡ್ಡಿ, ಮಾಜಿ ಶಾಸಕ ಎಂ.ಸಿ.ಸುಧಾಕರ್, ಸುಧಾಕರ್ ಮೇಲೆ ಮುನಿಸಿಕೊಂಡು ಕಾಂಗ್ರೆಸ್ ಪಕ್ಷ ತ್ಯಜಿಸಿ ಜೆಡಿಎಸ್ ಸೇರಿರುವ ಕಾಂಗ್ರೆಸ್ ಮಾಜಿ ಜಿಲ್ಲಾಧ್ಯಕ್ಷ ಆಂಜಿನಪ್ಪ ಹೆಸರು ಪ್ರಮುಖವಾಗಿ ಕೇಳಿಬರುತ್ತಿದೆ. ಕೆಪಿಸಿಸಿ ಸದಸ್ಯ ಕೆ.ಎಸ್.ಜಗದೀಶ್ ರೆಡ್ಡಿಗೆ ಟಿಕೆಟ್ ನೀಡುವ ಬಗ್ಗೆ ಮಾತುಕತೆ ಆಗುತ್ತಿದ್ದು, ಇವರ ಬಗ್ಗೆ ಮಾಜಿ ಡಿಸಿಎಂ ಡಾ. ಜಿ.ಪರಮೇಶ್ವರ್ ಒಲವು ಹೊಂದಿದ್ದಾರೆ. ಇವರ ಜೊತೆ ಉಳಿದವರ ಹೆಸರು ಬಲವಾಗಿ ಕೇಳಿ ಬರುತ್ತಿದ್ದು, ಆಂಜಿನಪ್ಪ ಪರವಾಗಿ ಮಾಜಿ ಸಂಸದ ಡಾ. ಎಂ.ವೀರಪ್ಪ ಮೊಯ್ಲಿ ಲಾಬಿ ನಡೆಸುತ್ತಿದ್ದಾರೆ ಎನ್ನಲಾಗಿದೆ.