ಬೆಂಗಳೂರು: 2019 ರವರೆಗೆ ಅಪಘಾತಗಳ ಸಂಖ್ಯೆಯಲ್ಲಿ ಯಾವುದೇ ಇಳಿಕೆ ಕಂಡು ಬಂದಿಲ್ಲ. ಆದರೆ, 2020 ರಲ್ಲಿ ಚಾಲ್ತಿಯಲ್ಲಿದ್ದ ಲಾಕ್‌ಡೌನ್ ನಿರ್ಬಂಧಗಳ ಕಾರಣದಿಂದ ಆ ವರ್ಷದಲ್ಲಿ ಇಳಿಕೆಯಾಗಿದೆ ಎಂದು ಭಾರತದ ನಿಯಂತ್ರಕರು ಮತ್ತು ಮಹಾಲೆಕ್ಕ ಪರಿಶೋಧಕರ (ಸಿಎಜಿ) ವರದಿ ಬಹಿರಂಗಪಡಿಸಿದೆ.
ಆದರೂ, 2015 ಕ್ಕೆ ಹೋಲಿಸಿದರೆ 2020 ರಲ್ಲಿ ಮಾರಣಾಂತಿಕ ಅಪಘಾತಗಳು ಹೆಚ್ಚಾದ ಕಾರಣ ರಸ್ತೆ ಸುರಕ್ಷಣಾ ನೀತಿಯಲ್ಲಿ ನಿಗದಿಪಡಿಸಿದ ಗುರಿಗಳನ್ನು ಸಾಧಿಸಿಲ್ಲ. ಮಾರಣಾಂತಿಕ ಅಪಘಾತಗಳು ಸಂಭವಿಸಿದ ಮತ್ತು ಗುರುತಿಸಲಾದ ಕಪ್ಪು ಚುಕ್ಕೆ ಸ್ಥಳಗಳನ್ನು ಶೀಘ್ರವಾಗಿ ಸರಿಪಡಿಸುವಲ್ಲಿ ಸಂಬಂಧಿಸಿದ ರಸ್ತೆ ನಿರ್ವಹಣಾ ಸಂಸ್ಥೆಗಳು ವಿಫಲವಾಗಿವೆ ಎಂದು ವರದಿ ಹೇಳುತ್ತದೆ.
ವಿಧಾನಸಭೆಯಲ್ಲಿ ಇಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು, ಕರ್ನಾಟಕ ರಾಜ್ಯ ರಸ್ತೆ ಸುರಕ್ಷತಾ ಪ್ರಾಧಿಕಾರದ (ಕೆಎಸ್‌ಆರ್‌ಎಸ್‌ಎ) ಕಾರ್ಯನಿರ್ವಹಣೆಯ ಕಾರ್ಯಕ್ಷಮತೆ ಕುರಿತು ಸಿಎಜಿ ವರದಿಯನ್ನು ಮಂಡಿಸಿದರು.
ಸೂಕ್ತ ಪ್ರಕ್ರಿಯೆ ಅನುಸರಿಸದೇ ಪ್ರಮಾಣ ಪತ್ರ: ಮೋಟಾರು ವಾಹನಗಳ ನಿರೀಕ್ಷಕರ ಶ್ರೇಣಿಯಲ್ಲಿ ಹೆಚ್ಚಿನ ಹುದ್ದೆಗಳು ಖಾಲಿ ಇರುವುದರಿಂದ ವಾಹನಗಳಿಗೆ ಚಾಲನಾ ಪರವಾನಗಿ ಮತ್ತು ಅರ್ಹತಾ ಪ್ರಮಾಣ ಪತ್ರಗಳನ್ನು ಸೂಕ್ತ ಪ್ರಕ್ರಿಯೆ ಅನುಸರಿಸದೆ ನೀಡಲಾಗಿದೆ ಎಂದು ವರದಿಯಲ್ಲಿ ಉಲ್ಲೇಖ ಮಾಡಲಾಗಿದೆ.
ರಸ್ತೆ ಸುರಕ್ಷತಾ ನಿಧಿಗಾಗಿ ಸಂಗ್ರಹಿಸಲಾದ ಸೆಸ್ನಿಂದ 2017-18 ರಿಂದ 2019-20 ರ ಅವಧಿಯಲ್ಲಿ 480.50 ಕೋಟಿ ಸಂಗ್ರಹವಾಗಿದ್ದ ಮೊತ್ತವನ್ನು 2020-21 ರಲ್ಲಿ ನಿಧಿಗೆ ವರ್ಗಾಯಿಸಲಾಗಿದೆ. ಪೊಲೀಸ್ ಮತ್ತು ಸಾರಿಗೆ ಇಲಾಖೆಗೆ ಸಂಬಂಧಿಸಿದ ಕಾಮಗಾರಿಗಳಿಗೆ ಪ್ರಾಧಿಕಾರವು 100 ಕೋಟಿ ರೂ. ಅನುದಾನಕ್ಕೆ ಅನುಮೋದನೆ ನೀಡಿದೆ. ಆದರೆ, ಪ್ರಾಧಿಕಾರವು ಅನುದಾನ ಪಡೆದವರಿಂದ ಬಳಕೆ ಪ್ರಮಾಣ ಪತ್ರ ಪಡೆದಿಲ್ಲ ಎಂದು ಸಿಎಜಿ ವರದಿಯಲ್ಲಿ ತಿಳಿಸಿದೆ.
ಆಂಬ್ಯುಲೆನ್ಸ್ ಕೊರತೆ: 22 ಜಿಲ್ಲೆಗಳಲ್ಲಿ ಆಘಾತ ಆರೈಕೆ ಕೇಂದ್ರ (ಟಿಸಿಸಿ) ಸ್ಥಾಪನೆಗೆ ಆರೋಗ್ಯ ಇಲಾಖೆ ಯಾವುದೇ ಕ್ರಿಯಾ ಯೋಜನೆಗಳನ್ನು ಸಿದ್ದಪಡಿಸಿಲ್ಲ. 90 ಸಾವಿರ ನಿದರ್ಶನಗಳಲ್ಲಿ, ಅಪಘಾತ ಸ್ಥಳಗಳಿಂದ ಆಂಬ್ಯುಲೆನ್ಸ್‌ಗಳ ಮೂಲ ಸ್ಥಳವು ದೂರದಲ್ಲಿದ್ದರಿಂದ ಮತ್ತು ಆರು ಸಾವಿರ ಪ್ರಕರಣಗಳಲ್ಲಿ 30 ನಿಮಿಷಗಳಿಗಿಂತ ಹೆಚ್ಚು ವಿಳಂಬವಾದ ಕಾರಣ ಅಪಘಾತಕ್ಕೀಡಾದವರಿಗೆ ಸಕಾಲದಲ್ಲಿ ವೈದ್ಯಕೀಯ ಸೇವೆ ದೊರೆತಿಲ್ಲ ಮತ್ತು ಇದು ಆಂಬ್ಯುಲೆನ್ಸ್‌ಗಳ ಕೊರತೆಯನ್ನು ಸೂಚಿಸುತ್ತದೆ ಎಂದು ಹೇಳಲಾಗಿದೆ.
ಅಪಘಾತಕ್ಕೊಳಗಾದವರು ಗೋಲ್ಡನ್ ಅವರ್‌ನಲ್ಲಿ ಚಿಕಿತ್ಸೆ ಪಡೆಯಲು ಅನುಕೂಲವಾಗುವಂತೆ ಎಲ್ಲಾ ಜಿಲ್ಲೆಗಳಲ್ಲಿ ವೈದ್ಯಕೀಯ ತಜ್ಞರನ್ನೊಳಗೊಂಡಂತೆ ಟಿಸಿಸಿಗಳನ್ನು ಸ್ಥಾಪಿಸಲು ಪ್ರಾಧಿಕಾರವು ಕ್ರಿಯಾ ಯೋಜನೆಯನ್ನು ಸಿದ್ದಪಡಿಸಿ ಕಾರ್ಯಗತಗೊಳಿಸಬೇಕು ಎಂದು ಒತ್ತಾಯಿಸಿದೆ.
ಇದನ್ನೂ ಓದಿ: ಆರ್ಥಿಕ ಅಭಿವೃದ್ದಿ ಸಾಧಿಸಲು ಶಕ್ತಿಮೀರಿ ಪ್ರಯತ್ನ: ಸಿಎಂ ಬಸವರಾಜ ಬೊಮ್ಮಾಯಿ