ಬೆಂಗಳೂರು : ಶಿವಮೊಗ್ಗದಲ್ಲಿ ನಡೆದ ಜಿಲೆಟಿನ್ ಸ್ಫೋಟ ಪ್ರಕರಣ ರಾಜ್ಯದಲ್ಲಿನ ಅಕ್ರಮ ಗಣಿಗಾರಿಕೆಯ ಕರಾಳ ಮುಖ ಬಿಚ್ಚಿಟ್ಟಿದೆ. ಅಕ್ರಮ ಗಣಿಗಾರಿಕೆ ರಾಜ್ಯದಲ್ಲಿ ಯಾವ ರೀತಿ ಅವ್ಯಾಹತವಾಗಿ ನಡೆಯುತ್ತಿದೆ ಎಂಬುದಕ್ಕೆ ಭೀಕರ ಸ್ಫೋಟ ಕೈಗನ್ನಡಿಯಾಗಿದೆ. ಕರುನಾಡಿನಲ್ಲಿ ಗಣಿಗಾರಿಕೆಯ ಕರಾಳತೆ ಹೇಗಿದೆ ಎಂಬ ಬಗೆಗಿನ ಸಮಗ್ರ ವರದಿ ಇಲ್ಲಿದೆ.
ರಾಜ್ಯದಲ್ಲಿ ಅಕ್ರಮ ಗಣಿಗಾರಿಕೆಯ ಸದ್ದು ಆಗಾಗ ಕೇಳಿ ಬರುತ್ತಿರುತ್ತದೆ. ಸ್ಥಳೀಯವಾಗಿ ಅಲ್ಲಲ್ಲಿ ಅಕ್ರಮ ಗಣಿಗಾರಿಕೆ ವಿರುದ್ಧ ಹೋರಾಟಗಳೂ ನಡೆಯುತ್ತಿರುತ್ತವೆ. ಆದರೆ, ಅಧಿಕಾರಿಗಳು, ಜನಪ್ರತಿನಿಧಿಗಳು ನಾಮಕಾವಾಸ್ತೆ ಕ್ರಮ ಕೈಗೊಳ್ಳುತ್ತಾರೆ.
ವಾಸ್ತವದಲ್ಲಿ ಅಕ್ರಮ ಗಣಿಗಾರಿಕೆ ಅಬಾಧಿತವಾಗಿ ನಡೆಯುತ್ತಿರುತ್ತದೆ. ಮೊನ್ನೆ ಶಿವಮೊಗ್ಗದಲ್ಲಿ ಸಂಭವಿಸಿದ ಭೀಕರ ಸ್ಫೋಟ ರಾಜ್ಯದಲ್ಲಿನ ಅಕ್ರಮ ಗಣಿಗಾರಿಕೆಯ ಗಂಭೀರ ಸಮಸ್ಯೆ ಎತ್ತಿ ತೋರಿಸಿದೆ.
ರಾಜ್ಯದಲ್ಲಿ ಅವ್ಯಾಹತವಾಗಿ ಅಕ್ರಮ ಗಣಿಗಾರಿಕೆ : ಶಿವಮೊಗ್ಗದಲ್ಲಿ ಅವ್ಯಾಹತವಾಗಿ ಅಕ್ರಮ ಗಣಿಗಾರಿಕೆ ನಡೆಯುತ್ತಿದೆ ಎಂಬುದನ್ನು ಗಣಿ ಮತ್ತು ಭೂ ವಿಜ್ಞಾನ ಇಲಾಖೆಯೇ ಒಪ್ಪಿಕೊಂಡಿದೆ. ಜಿಲ್ಲೆಯಲ್ಲಿ ಪರವಾನಿಗೆ ಇಲ್ಲದೇ ಗಣಿಗಾರಿಕೆ ನಡೆಸಲಾಗುತ್ತಿದೆ ಎಂಬ ವಾಸ್ತವತೆಯನ್ನು ಇಲಾಖೆ ಕಳೆದ ಬಾರಿಯ ಅಧಿವೇಶನದಲ್ಲೇ ಒಪ್ಪಿತ್ತು. ಅಲ್ಲದೆ, ಕಳೆದ ಮೂರು ವರ್ಷಗಳಲ್ಲಿ ಸುಮಾರು 11 ಮಂದಿಗೆ ಕಲ್ಲು ಗಣಿಗಾರಿಕೆಗೆ ಪರವಾನಿಗೆ ನೀಡಲಾಗಿದೆ ಎಂದು ಗಣಿ ಮತ್ತು ಭೂ ವಿಜ್ಞಾನ ಇಲಾಖೆ ತಿಳಿಸಿದೆ.
ಓದಿ-ಶಶಿಕಲಾ ನಟರಾಜನ್ ಆರೋಗ್ಯ ಸ್ಥಿರ
3 ವರ್ಷದಲ್ಲಿ 1083 ಅಕ್ರಮ ಕಲ್ಲು ಗಣಿಕಾರಿಗೆ ಪ್ರಕರಣ : ಗಣಿ ಮತ್ತು ಭೂ ವಿಜ್ಞಾನ ಇಲಾಖೆ ನೀಡಿರುವ ಅಂಕಿ-ಅಂಶದ ಪ್ರಕಾರ ಕಳೆದ ಮೂರು ವರ್ಷಗಳಲ್ಲಿ ರಾಜ್ಯದಲ್ಲಿ ಸುಮಾರು 1083 ಅಕ್ರಮ ಕಲ್ಲು ಗಣಿಗಾರಿಕೆ ಪ್ರಕರಣಗಳನ್ನು ಪತ್ತೆ ಹಚ್ಚಲಾಗಿದೆ. ಅದರಂತೆ 2017-18ರಲ್ಲಿ ರಾಜ್ಯದಲ್ಲಿ 404 ಅಕ್ರಮ ಕಲ್ಲು ಗಣಿಗಾರಿಕೆ ಪ್ರಕರಣಗಳನ್ನು ಪತ್ತೆ ಹಚ್ಚಲಾಗಿತ್ತು. ಈ ಸಂಬಂಧ 114 ಮೊಕದ್ದಮೆಗಳನ್ನು ದಾಖಲಿಸಲಾಗಿತ್ತು. 6.13 ಕೋಟಿ ರೂ. ದಂಡ ವಸೂಲಿ ಮಾಡಲಾಗಿತ್ತು.
2018-19ರಲ್ಲಿ ಶಿವಮೊಗ್ಗ ಜಿಲ್ಲೆಯಲ್ಲಿ 413 ಅಕ್ರಮ ಕಲ್ಲು ಗಣಿಗಾರಿಕೆ ಪ್ರಕರಣಗಳನ್ನು ಪತ್ತೆ ಹಚ್ಚಲಾಗಿತ್ತು. ಈ ಸಂಬಂಧ 108 ಮೊಕದ್ದಮೆಗಳನ್ನು ದಾಖಲಿಸಲಾಗಿತ್ತು. ಒಟ್ಟು 12.13 ಕೋಟಿ ರೂ. ದಂಡ ವಸೂಲಿ ಮಾಡಲಾಗಿತ್ತು. 2019-20ರಲ್ಲಿ 266 ಅಕ್ರಮ ಕಲ್ಲು ಗಣಿಗಾರಿಕೆಯನ್ನು ಪತ್ತೆ ಹಚ್ಚಲಾಗಿತ್ತು. ಈ ಸಂಬಂಧ 117 ಮೊಕದ್ದಮೆಗಳನ್ನು ದಾಖಲಿಸಲಾಗಿತ್ತು. 9.08 ಕೋಟಿ ರೂ. ದಂಡ ವಸೂಲಿ ಮಾಡಲಾಗಿತ್ತು.
ಪರವಾನಿಗೆ ಪಡೆಯಲು ಸಲ್ಲಿಸಲಾದ ಅರ್ಜಿ ಎಷ್ಟು? : ರಾಜ್ಯ ಸರ್ಕಾರ ಕರ್ನಾಟಕ ಉಪಖನಿಜ ರಿಯಾಯಿತಿ (ತಿದ್ದುಪಡಿ) ನಿಯಮಗಳು 2016 ಜಾರಿಗೆ ತಂದಿದೆ. ಸದರಿ ನಿಯಮಗಳಂತೆ ಸರ್ಕಾರಿ ಜಮೀನುಗಳಲ್ಲಿ ಉಪಖನಿಜ ಗಣಿಗುತ್ತಿಗೆಗಳನ್ನು ಹರಾಜು ಮೂಲಕ ಮಂಜೂರು ಮಾಡಬೇಕಾಗಿರುತ್ತದೆ.
ಪಟ್ಟಾ ಜಮೀನುಗಳಲ್ಲಿ ಲಭ್ಯವಿರುವ ಖನಿಜವನ್ನು ತೆಗೆಯಲು ಪಟ್ಟಾದಾರರಿಗೆ ಅಥವಾ ಪಟ್ಟಾದಾರರು ಒಪ್ಪಿಗೆ ನೀಡುವ ವ್ಯಕ್ತಿಗಳಿಗೆ ಕಂದಾಯ ಮತ್ತು ಅರಣ್ಯ ಇಲಾಖೆ ನಿರಾಕ್ಷೇಪಣಾ ಪತ್ರ, ಭೂಪರಿವರ್ತನಾ ಆದೇಶ, ಪರಿಸರ ಅನುಮತಿ ಪತ್ರಗಳನ್ನು ಪಡೆದು ಕಲ್ಲುಗಣಿಗಾರಿಕೆಗೆ ಲೈಸೆನ್ಸ್ ನೀಡಲಾಗುತ್ತಿದೆ.
ಪಟ್ಟಾ ಜಮೀನುಗಳಲ್ಲಿ ಕಲ್ಲು ಗಣಿ ಗುತ್ತಿಗೆ ಕೋರಿ ಕಳೆದ 3 ವರ್ಷಗಳಲ್ಲಿ 306 ಅರ್ಜಿಗಳು ಸ್ವೀಕೃತವಾಗಿವೆ. ಕಲ್ಲು ಗಣಿಗೆ ಮಂಜೂರು ಮಾಡಿದ ಅರ್ಜಿಗಳ ಸಂಖ್ಯೆ 88. ಬಾಕಿ ಉಳಿದಿರುವ ಅರ್ಜಿಗಳ ಸಂಖ್ಯೆ 218.
ಗುತ್ತಿಗೆ ಪ್ರದೇಶ ಮೀರಿ ಗಣಿಗಾರಿಕೆ : ಕಲ್ಲುಗಣಿ ಗುತ್ತಿಗೆದಾರರು ತಮಗೆ ಮಂಜೂರಾದ ಗುತ್ತಿಗೆ ಪ್ರದೇಶದ ವ್ಯಾಪ್ತಿ ಮೀರಿ ಅಥವಾ ಗುತ್ತಿಗೆ ಅವಧಿ ಮುಗಿದರೂ ಗಣಿಗಾರಿಕೆ ಮಾಡುತ್ತಿರುವುದು ಸಿಎಜಿ ವರದಿಯಲ್ಲಿ ಬೆಳಕಿಗೆ ಬಂದಿದೆ. ದಕ್ಷಿಣ ಕನ್ನಡ, ವಿಜಯಪುರ, ಬೆಳಗಾವಿ, ಬೆಂಗಳೂರು ಗ್ರಾಮಾಂತರ ಮತ್ತು ಚಾಮರಾಜನಗರ ಜಿಲ್ಲೆಗಳಲ್ಲಿ ಇಂತಹ ಪ್ರಕರಣ ಪತ್ತೆಯಾಗಿರುವುದು ಸಿಎಜಿ ವರದಿಯಿಂದ ತಿಳಿದು ಬಂದಿದೆ.
ಗಣಿ ಮತ್ತು ಭೂವಿಜ್ಞಾನ ಇಲಾಖೆಯಿಂದ ಮುಖ್ಯ ಖನಿಜ (ಕಬ್ಬಿಣದ ಅದಿರು)ಗೆ 379 ಗುತ್ತಿಗೆಗಳನ್ನು ನೀಡಲಾಗಿದ್ದು, 97107.28 ಎಕರೆ ಪ್ರದೇಶಗಳಲ್ಲಿ ಗಣಿಗಾರಿಕೆ ಮಾಡಲಾಗುತ್ತಿದೆ. ಇನ್ನು, ನಿರ್ದಿಷ್ಟ ಉಪ ಖನಿಜ (ಗ್ರಾನೈಟ್) 470 ಗುತ್ತಿಗೆಗಳನ್ನು ನೀಡಲಾಗಿದ್ದು, 2353.06 ಎಕರೆ ವಿಸ್ತೀರ್ಣದಲ್ಲಿ ಗಣಿಗಾರಿಕೆ ಮಾಡಲು ಅನುಮತಿ ನೀಡಲಾಗಿದೆ.
ನಿರ್ದಿಷ್ಟವಲ್ಲದ ಉಪ ಖನಿಜ (ಮರಳು ಹೊರತುಪಡಿಸಿ)ಗೆ 2493 ಗುತ್ತಿಗೆ ನೀಡಲಾಗಿದ್ದು,10567.31 ಎಕರೆ ಪ್ರದೇಶದಲ್ಲಿ ಗಣಿಗಾರಿಕೆ ಮಾಡಲಾಗುತ್ತಿದೆ. ಆದರೆ, ಅಧಿಕೃತವಾಗಿ ಗಣಿಗಾರಿಕೆಗೆ ನೀಡಿದ ಗುತ್ತಿಗೆ ಪ್ರದೇಶಗಳನ್ನು ಹೊರತುಪಡಿಸಿ ಅನಧಿಕೃತವಾಗಿ ಕೆಲ ಪ್ರದೇಶಗಳಲ್ಲಿ ಗಣಿಗಾರಿಕೆ ನಡೆಯುತ್ತಿರುವುದು ಪತ್ತೆಯಾಗಿದೆ ಎಂದು ಇಲಾಖೆ ಅಧಿಕಾರಿಗಳು ಒಪ್ಪಿಕೊಂಡಿದ್ದಾರೆ.