ಬೆಂಗಳೂರು: ಮಾರ್ಕೆಟಿಂಗ್ ಎಕ್ಸಿಕ್ಯೂಟಿವ್ಗಳಿಗೆ ಕಂಪನಿಗಳಿಂದ ದಿಢೀರ್ ವಾಪಸ್ ಬರುವಂತೆ ಕರೆ ಬಂದಿದ್ದು,ಉದ್ಯೋಗಿಗಳು ಆತಂಕಕ್ಕೆ ಸಿಲುಕಿಸಿದ್ದಾರೆ.
ಒಂದು ವಾರದ ಒಳಗೆ ವಾಪಸ್ ಬರಬೇಕು. ಇಲ್ಲವಾದರೆ ಕೆಲಸವಿಲ್ಲ ಎಂದು ಕಂಪನಿಗಳ ಮ್ಯಾನೇಜರ್ಗಳು ಹೇಳುತ್ತಿದ್ದು,ವಾರದೊಳಗೆ ಹೇಗೆ ಹೋಗುವುದು ಎನ್ನುವ ಚಿಂತೆಯಲ್ಲಿದ್ದಾರೆ. ಇನ್ನು,ಎಲ್ಲಾ ಊರುಗಳಿಂದಲೂ ಮಹಾನಗರಕ್ಕೆ ವಾಹನ ಸೌಲಭ್ಯವಿಲ್ಲ. ಇರುವ ಕಡೆಯಿಂದಲೂ ಸೀಮಿತ ಸಂಖ್ಯೆಯಲ್ಲಿ ಸಾಮಾಜಿಕ ಅಂತರದೊಂದಿಗೆ ಕರೆತರುವ ಕಾರ್ಯ ಆಗುತ್ತಿದೆ. ಬರುವವರು ಮೊದಲೇ ಘಟಕ ವ್ಯವಸ್ಥಾಪಕರಿಗೆ ಕರೆ ಮಾಡಿ, ಪ್ರಯಾಣವನ್ನು ದೃಢೀಕರಿಸಿಕೊಳ್ಳಬೇಕು. ಘಟಕ ವ್ಯವಸ್ಥಾಪಕರು ತಿಳಿಸಿದ ದಿನಾಂಕದಂದು ಬಸ್ ಹತ್ತಿ ಬೆಂಗಳೂರು ತಲುಪಬಹುದಾಗಿದೆ. ಸೀಮಿತ ಸಂಖ್ಯೆಯ ಬಸ್ ಇರುವ ಹಿನ್ನೆಲೆ, ಸಾಕಷ್ಟು ಜನ ಊರಿಗೆ ತೆರಳಿದ್ದವರು ಕಂಪನಿಗಳಿಂದ ಬುಲಾವ್ ಬಂದ ತಕ್ಷಣ ವಾಪಸಾಗುತ್ತಿದ್ದಾರೆ.
ರಾಜ್ಯದ ಮೂಲೆ ಮೂಲೆಯಿಂದ ಬೆಂಗಳೂರು ತಲುಪಬೇಕಾಗಿರುವವರಲ್ಲಿ ಉತ್ತರ ಕನ್ನಡ, ದಕ್ಷಿಣ ಕನ್ನಡ, ದಾವಣಗೆರೆ, ಕಲಬುರುಗಿ, ಚಿತ್ರದುರ್ಗ, ತುಮಕೂರು, ಬಾಗಲಕೋಟೆ, ಮೈಸೂರು, ಬೆಳಗಾವಿ, ವಿಜಯಪುರ, ಮಂಡ್ಯ ಮತ್ತಿತರ ಜಿಲ್ಲೆಯಿಂದ ಬರುವವರಿಗೆ ಇನ್ನಷ್ಟು ಆತಂಕ ಎದುರಾಗಿದೆ. ದಿನದಿಂದ ದಿನಕ್ಕೆ ಹೆಚ್ಚು ಹೊಸ ಪ್ರಕರಣಗಳು ಕೆಲ ಜಿಲ್ಲೆಯಲ್ಲಿ ಕಂಡು ಬರುತ್ತಿದ್ದು, ಹಸಿರು ವಲಯ ಎಂದು ಘೋಷಿತವಾಗಿದ್ದ ಜಿಲ್ಲೆಗಳು ಕೆಂಪುವಲಯಗಳಾಗಿ ಮಾರ್ಪಟ್ಟಿವೆ. ಹೀಗಾಗಿ ಜಿಲ್ಲೆಗಳಿಂದ ಬೆಂಗಳೂರಿಗೆ ಬರುವುದು ಹೆಚ್ಚಿನವರಿಗೆ ಸುಲಭವಲ್ಲ.
ಅಲ್ಲದೆ, ಮೇ 17ರವರೆಗೆ ಲಾಕ್ಡೌನ್ ಅವಧಿಯಿದ್ದು, ಬಸ್ ಸಂಚಾರ ಇಲ್ಲವಾಗಿದೆ. ವಿವಿಧ ಜಿಲ್ಲೆಯ ಕುಗ್ರಾಮಗಳಲ್ಲಿರುವ ಉದ್ಯೋಗಿಗಳಿಗೆ ಸಾಕಷ್ಟು ಸಮಸ್ಯೆ ಎದುರಾಗಿದೆ.