ಬೆಂಗಳೂರು: ದಾವಣಗೆರೆ ಜಿಲ್ಲೆ ಚನ್ನಗಿರಿ ತಾಲ್ಲೂಕಿನ ಶಾಂತಿಸಾಗರ ಕೆರೆಯಲ್ಲಿ ಜಲವಿದ್ಯುತ್ ಸ್ಥಾವರವನ್ನು ಸ್ಥಾಪಿಸಲು ಸಲ್ಲಿಸಿರುವ ಪ್ರಸ್ತಾವನೆಯನ್ನು ರದ್ದುಪಡಿಸುವಂತೆ ಗ್ರಾಮೀಣಾಭಿವೃದ್ಧಿ ಪಂಚಾಯತ್ ರಾಜ್, ಜಲಸಂಪನ್ಮೂಲ, ವಾಣಿಜ್ಯ ಮತ್ತು ಕೈಗಾರಿಕೆ, ಅರಣ್ಯ, ಪರಿಸರ ಮತ್ತು ಜೀವಿಶಾಸ್ತ್ರ ಇಲಾಖೆಗಳಿಗೆ ಸಂಬಂಧಿಸಿದ ಅರ್ಜಿಗಳ ಸಮಿತಿ ಶಿಫಾರಸು ಮಾಡಿದೆ.
ಸಮಿತಿ ಅಧ್ಯಕ್ಷ, ವಿಧಾನಸಭೆ ಉಪಾಧ್ಯಕ್ಷ ಆನಂದ್ ಮಾಮನಿ ಅವರು ಇಂದು ವಿಧಾನಸಭೆಯಲ್ಲಿ ಈ ಕುರಿತ ವರದಿ ಮಂಡಿಸಿದರು.
2020-21ನೇ ಸಾಲಿನ 2ನೇ ವರದಿಯಲ್ಲಿ ಈ ಶಿಫಾರಸ್ಸು ಮಾಡಲಾಗಿದೆ. ಕೆರೆಯಲ್ಲಿ ಮೆ. ಸೆರೋಲಿಯನ್ ಎನರ್ಜಿ ಸಲ್ಯೂಷನ್ ಎಂಬ ಖಾಸಗಿ ಕಂಪನಿ ಜಲ ವಿದ್ಯುತ್ ಉತ್ಪಾದಿಸುವ ಪ್ರಸ್ತಾಪಿತ ಯೋಜನೆಯನ್ನು ಕೈಬಿಡುವಂತೆ ಸಮಿತಿ ತಿಳಿಸಿದೆ.
ಜಲ ಸಂಪನ್ಮೂಲ, ಕೈಗಾರಿಕಾ, ವಾಣಿಜ್ಯ, ಅರಣ್ಯ, ಪರಿಸರ, ಜೀವಶಾಸ್ತ್ರ ಇಲಾಖೆಯು ಈ ಯೋಜನೆಗೆ ಅನುಮತಿ ನೀಡಿಲ್ಲ. ರಾಜ್ಯ ಉನ್ನತ ಮಟ್ಟದ ನಿವಾರಣಾ ಸಮಿತಿ ಯೋಜನೆಗೆ ಮಂಜೂರಾತಿ ನೀಡಿದೆ. ಯೋಜನ ಜಾರಿಗೆ ಬಂದರೆ ಪರಿಸರದ ಮೇಲೆ ಹಾನಿಯಾಗುವುದಲ್ಲದೆ, ನೂರಾರು ಎಕರೆ ಜಮೀನಿಗೆ ತೊಂದರೆಯಾಗಲಿದೆ ಎಂದು ತಿಳಿಸಿದೆ. ಪ್ರಸ್ತಾಪಿತ ಯೋಜನೆಯನ್ನು ಜಾರಿಗೆ ತರುವುದು ಸಮಂಜಸವಲ್ಲ ಎಂದು ಸಮಿತಿ ಅಭಿಪ್ರಾಯ ವ್ಯಕ್ತಪಡಿಸಿದೆ.
ಇದನ್ನೂ ಓದಿ: ನರೇಗಾ ಯೋಜನೆಯಲ್ಲಿ ಮಹಿಳೆಯರು ಕೊಡುಗೆ ಅಪಾರ: ಸಚಿವ ಈಶ್ವರಪ್ಪ