ದೊಡ್ಡಬಳ್ಳಾಪುರ(ಬೆಂಗಳೂರು ಗ್ರಾಮಾಂತರ) : ಬಾಶೆಟ್ಟಿಹಳ್ಳಿಯ ರೈಲ್ವೆ ಮೇಲ್ಸೇತುವೆ ಕುಸಿದ ಹಿನ್ನೆಲೆ ಪ್ರಯಾಣಿಕರಲ್ಲಿ ಆತಂಕ ಮನೆಮಾಡಿದೆ. ಸೇತುವೆ ನಿರ್ಮಾಣ ಮಾಡಿ ನಾಲ್ಕು ವರ್ಷಗಳಾಗಿದ್ದು, 4 ಬಾರಿ ಕುಸಿದಿದೆ. ಮೇಲ್ಸೇತುವೆ ಕುಸಿದಾಗ ಅಧಿಕಾರಿಗಳು, ಜನಪ್ರತಿನಿಧಿಗಳನ್ನ ಭೇಟಿ ಮಾಡಿ ಮನವಿ ಮಾಡುವುದು ಮಾಮೂಲಿಯಾಗಿದೆ ಎಂದು ಸ್ಥಳೀಯರು ಆಕ್ರೋಶ ಹೊರಹಾಕಿದ್ದಾರೆ.
ಯಲಹಂಕ-ಹಿಂದೂಪುರ ರಾಜ್ಯ ಹೆದ್ದಾರಿಯ ಬಾಶೆಟ್ಟಿಹಳ್ಳಿ ಬಳಿ ರೈಲ್ವೆ ಗೇಟ್ ಇದ್ದ ಕಾರಣ 10 ರಿಂದ 15 ನಿಮಿಷ ವಾಹನ ಸವಾರರು ಕಾಯಬೇಕಿತ್ತು. ಹಾಗಾಗಿ, ವಾಹನಗಳ ಸುಗಮ ಸಂಚಾರಕ್ಕೆ ಸುಮಾರು 42 ಕೋಟಿ ರೂ. ವೆಚ್ಚದಲ್ಲಿ ರೈಲ್ವೆ ಮೇಲ್ಸೇತುವೆ ನಿರ್ಮಾಣ ಮಾಡಲಾಗಿದೆ. ಆದರೆ, ಉದ್ಘಾಟನೆಗೂ ಮುನ್ನವೇ 1 ಬಾರಿ ತಡೆಗೋಡೆಯ ಸ್ಲ್ಯಾಬ್ ಕಳಚಿ ಬಿದ್ದಿದ್ದು, ಉದ್ಘಾಟನೆ ನಂತರ ಮೂರು ಬಾರಿ ತಡೆಗೋಡೆಯ ಸ್ಲ್ಯಾಬ್ ಕಳಚಿ ಬಿದ್ದಿದೆ. ಮುಂದಿನ ದಿನಗಳಲ್ಲಿ ಮೇಲ್ಸೇತುವೆ ಕುಸಿಯೋದು ಪಕ್ಕಾ ಎನ್ನಲಾಗುತ್ತಿದೆ.
ಮೇಲ್ಸೇತುವೆಯನ್ನ ನೈರುತ್ಯ ರೈಲ್ವೆ, ಕೆಆರ್ಡಿಸಿಎಲ್ ಮತ್ತು ಟೋಲ್ ನವರ ಸಹಯೋಗದಲ್ಲಿ ನಿರ್ಮಾಣ ಮಾಡಲಾಗಿದೆ. ದುರ್ದೈವ ಅಂದ್ರೆ ಮೇಲ್ಸೇತುವೆಯ ನಿರ್ವಹಣೆಯನ್ನು ಮಾತ್ರ ಯಾರೂ ಮಾಡುತ್ತಿಲ್ಲ. ಪ್ರತಿ ಬಾರಿ ಮೇಲ್ಸೇತುವೆ ಕುಸಿದಾಗ ಒಬ್ಬರು ಮತ್ತೊಬ್ಬರ ಮೇಲೆ ಹೇಳಿ ನುಣುಚಿಕೊಳ್ಳುತ್ತಿದ್ದಾರೆ. ಅಷ್ಟೇ ಅಲ್ಲದೆ, ಮೇಲ್ಸೇತುವೆಯ ಮೇಲೆ ಗುಂಡಿಗಳಿವೆ, ಈ ಗುಂಡಿಗಳನ್ನ ತಪ್ಪಿಸಲು ಹೋಗಿ ವಾಹನ ಸವಾರರು ಬಿದ್ದು ಪ್ರಾಣ ಕಳೆದುಕೊಂಡಿದ್ದಾರೆ. ಕಳಪೆ ಕಾಮಗಾರಿಯಿಂದ ಜನರ ಪ್ರಾಣಕ್ಕೆ ಕಂಠಕವಾಗಿದ್ದು, ಇದನ್ನು ಕೆಡವಿ ಉತ್ತಮ ಗುಣಮಟ್ಟದ ಸೇತುವೆ ಕಟ್ಟಬೇಕೆಂದು ಸ್ಥಳೀಯರು ಒತ್ತಾಯಿಸಿದ್ದಾರೆ.
ಇದನ್ನೂ ಓದಿ: ಯೋಗ ದಿನಾಚರಣೆ -2022: ಮೈಸೂರಿಗೆ ಪ್ರಧಾನಿ ಮೋದಿ