ಬೆಂಗಳೂರು: ಅತೃಪ್ತ ಶಾಸಕರ ರಾಜೀನಾಮೆ ಅಂಗೀಕರಿಸಲು ವಿಳಂಬ ಮಾಡುತ್ತಿರುವ ಸ್ಪೀಕರ್ ನಿರ್ಧಾರದಿಂದ ಬಿಜೆಪಿ ತನ್ನ ರಾಜಕೀಯ ತಂತ್ರಗಾರಿಕೆ ಬದಲಿಸಲು ಕಾನೂನು ತಜ್ಞರರೊಂದಿಗೆ ಸಮಾಲೋಚನೆ ನಡೆಸತೊಡಗಿದೆ. ಸಂಖ್ಯಾಬಲ ಕುಸಿದ ಸಮ್ಮಿಶ್ರ ಸರ್ಕಾರದ ವಿರುದ್ಧ ಈ ತಿಂಗಳ 12ರಿಂದ ಆರಂಭವಾಗುವ ವಿಧಾನಮಂಡಲ ಅಧಿವೇಶನದಲ್ಲಿ ಅವಿಶ್ವಾಸ ನಿರ್ಣಯ ಮಂಡಿಸಲು ಬಿಜೆಪಿ ಚಿಂತನೆ ನಡೆಸಿದೆ ಎಂದು ತಿಳಿದು ಬಂದಿದೆ.
ಅಷ್ಟೇ ಅಲ್ಲ ಸ್ಪೀಕರ್ ರಮೇಶ್ಕುಮಾರ್ ಬದಲಾವಣೆ ಪ್ರಯತ್ನಕ್ಕೂ ಕೈ ಹಾಕುವ ಕುರಿತು ಅಭಿಪ್ರಾಯ ಸಂಗ್ರಹಿಸುತ್ತಿದೆ. ರಮೇಶ್ ಕುಮಾರ್ ಅವರು ಅತೃಪ್ತ ಶಾಸಕರ ರಾಜೀನಾಮೆ ಅಂಗೀಕಾರಕ್ಕೆ ಬಹಳಷ್ಟು ಪ್ರಕ್ರಿಯೆಗಳಿವೆ. ಐವರು ಶಾಸಕರ ರಾಜೀನಾಮೆ ಪತ್ರ ಹೊರತುಪಡಿಸಿ ಇನ್ನುಳಿದ 8 ಶಾಸಕರ ರಾಜೀನಾಮೆ ಪತ್ರ ಕ್ರಮಬದ್ಧವಾಗಿಲ್ಲ. ಯಾವ ಕಾರಣಕ್ಕೆ ರಾಜೀನಾಮೆ ನೀಡಲಾಗಿದೆ ಎನ್ನುವ ಕಾರಣ ತಿಳಿದುಕೊಳ್ಳಬೇಕಾಗುತ್ತದೆ.
ಶಾಸಕರ ರಾಜೀನಾಮೆ ಅಂಗೀಕರಿಸದಂತೆ ಕಾಂಗ್ರೆಸ್ ಮತ್ತು ಸಾರ್ವಜನಿಕರು ನೀಡಿರುವ ದೂರುಗಳನ್ನು ಪರಿಶೀಲಿಸಿ ಮುಂದಿನ ಹೆಜ್ಜೆ ಇಡಲಾಗುತ್ತದೆ ಎಂದು ಸ್ಪೀಕರ್ ತಿಳಿಸಿರುವ ಕಾರಣ ಬಿಜೆಪಿ ಈಗ ಪರ್ಯಾಯ ಮಾರ್ಗಗಳ ಶೋಧನೆಯಲ್ಲಿ ತೊಡಗಿದೆ. ಶಾಸಕರ ರಾಜೀನಾಮೆ ಅಂಗೀಕಾರಗೊಂಡರೆ ಮೈತ್ರಿ ಸರ್ಕಾರದ ಸಂಖ್ಯಾಬಲ 103ಕ್ಕೆ ಕುಸಿಯಲಿದೆ. ಪಕ್ಷೇತರ ಶಾಸಕರಿಬ್ಬರು ಬಿಜೆಪಿಗೆ ಬೆಂಬಲ ನೀಡಿರುವ ಪರಿಣಾಮ ಬಿಜೆಪಿಯ ಬಲ 107 ಆಗಲಿದೆ. ಈ ಸಂಖ್ಯಾಬಲದ ಆಧಾರದ ಮೇಲೆ ಸಿಎಂ ಕುಮಾರಸ್ವಾಮಿ ವಿರುದ್ಧ ಅವಿಶ್ವಾಸ ಗೊತ್ತುವಳಿ ಮಂಡಿಸಿ ಕಾಂಗ್ರೆಸ್-ಜೆಡಿಎಸ್ ಸಮ್ಮಿಶ್ರ ಸರ್ಕಾರ ಪತನಗೊಳಿಸುವ ಸಾಧ್ಯತೆಗಳ ಬಗ್ಗೆ ಬಿಜೆಪಿ ಕಾನೂನು ತಜ್ಞರ ಜತೆ ಚರ್ಚೆ ನಡೆಸುತ್ತಿದೆ ಎನ್ನಲಾಗಿದೆ.
ಅತೃಪ್ತ ಶಾಸಕರ ಅನರ್ಹತೆಯ ದೂರು ಸ್ಪೀಕರ್ ಮುಂದಿರುವುದರಿಂದ ಭವಿಷ್ಯದಲ್ಲಿ ತೊಡಕಾಗಬಹುದು ಎಂದು ಸ್ಪೀಕರ್ ಬದಲಾಯಿಸಲು ಯೋಚಿಸುತ್ತಿದ್ದಾರೆ. ನಂತರ ಸ್ಪೀಕರ್ ಚುನಾವಣೆ ನಡೆಸಿ ಬಿಜೆಪಿ ಅಭ್ಯರ್ಥಿ ಕಣಕ್ಕಿಳಿಸಿ ಸಂಖ್ಯಾಬಲದಿಂದ ಗೆಲ್ಲಿಸುವ ಕುರಿತೂ ಚಿಂತನೆಯನ್ನು ಬಿಜೆಪಿ ನಡೆಸಿದೆ. ಪ್ರಸಕ್ತ ರಾಜಕೀಯ ಬೆಳವಣಿಗೆಗಳನ್ನ ಗಮನಿಸಿದರೆ ಶುಕ್ರವಾರದಿಂದ ಆರಂಭವಾಗಲಿರುವ ಅಧಿವೇಶನ ಸಾಕಷ್ಟು ಗಲಾಟೆ-ಗದ್ದಲಗಳಿಗೆ ಸಾಕ್ಷಿಯಾಗುವ ಎಲ್ಲಾ ಸಾಧ್ಯತೆಗಳು ಕಂಡುಬರುತ್ತಿವೆ ಎನ್ನಲಾಗಿದೆ.