ಬೆಂಗಳೂರು : ಕೋವಿಡ್-19 ಹಿನ್ನೆಲೆ ಕೇಂದ್ರ ಹಾಗೂ ರಾಜ್ಯ ಸರ್ಕಾರದಿಂದ ಕೃಷಿ ಮತ್ತು ಕೃಷಿಯೇತರ ಚಟುವಟಿಕೆಗೆ 39 ಸಾವಿರ ಕೋಟಿ ರೂ. ಸಾಲ ವಿತರಣೆಗೆ ಸಹಕಾರಿ ವಲಯದ ಬ್ಯಾಂಕುಗಳು ಸಜ್ಜಾಗಿವೆ.
ಇದರ ನಿಮಿತ್ತ 'ಆರ್ಥಿಕ ಸ್ಪಂದನ' ಕಾರ್ಯಕ್ರಮವನ್ನು ಮುಖ್ಯಮಂತ್ರಿ ಯಡಿಯೂರಪ್ಪ ಅವರು ವಿಧಾನಸೌಧದ ಬ್ಯಾಂಕ್ವೆಟ್ ಹಾಲ್ನಲ್ಲಿ ನಾಳೆ 50 ಜನ ಫಲಾನುಭವಿಗಳಿಗೆ ಚೆಕ್ ವಿತರಿಸುವ ಮೂಲಕ ಉದ್ಘಾಟಿಸಲಿದ್ದಾರೆ. ಸಹಕಾರ ಸಚಿವ ಎಸ್ ಟಿ ಸೋಮಶೇಖರ್, ಡಿಸಿಎಂಗಳಾದ ಗೋವಿಂದ ಎಂ. ಕಾರಜೋಳ, ಡಾ. ಅಶ್ವತ್ಥ್ ನಾರಾಯಣ, ಲಕ್ಷ್ಮಣ್ ಸಂಗಪ್ಪ ಸವದಿ, ಸಚಿವರಾದ ಆರ್.ಅಶೋಕ್, ಬಸವರಾಜ ಬೊಮ್ಮಾಯಿ, ಎಸ್ ಸುರೇಶ್ ಕುಮಾರ್, ವಿ. ಸೋಮಣ್ಣ ಭಾಗವಹಿಸಲಿದ್ದಾರೆ.
ವಿಶೇಷ ಆಹ್ವಾನಿತರಾಗಿ ಕೇಂದ್ರ ಸರ್ಕಾರದ ಹಣಕಾಸು ಹಾಗೂ ಕಾರ್ಪೊರೇಟ್ ವ್ಯವಹಾರಗಳ ಸಚಿವೆ ನಿರ್ಮಲಾ ಸೀತಾರಾಮನ್, ರಾಸಾಯನಿಕ ಹಾಗೂ ರಸಗೊಬ್ಬರ ಸಚಿವ ಡಿ ವಿ ಸದಾನಂದ ಗೌಡ ಅವರು ಆಗಮಿಸಲಿದ್ದಾರೆ.
ದುರ್ಬಲರಾದವರಿಗೆ ಆರ್ಥಿಕ ನೆರವು : ಸರ್ವರಿಗೂ ಸಮಪಾಲು, ಸರ್ವರಿಗೂ ಸಮಬಾಳು ಎಂಬ ಸಹಕಾರ ತತ್ವದ ಅಡಿ ದೇಶದಲ್ಲಿ ಸಹಕಾರ ಆಂದೋಲನ ಇಂದು ಹೆಮ್ಮರವಾಗಿ ಬೆಳೆದಿದೆ. ಕೋಟ್ಯಂತರ ಜನರಿಗೆ ಉದ್ಯೋಗ ಅವಕಾಶಗಳು, ಆರ್ಥಿಕವಾಗಿ ದುರ್ಬಲರಾದವರಿಗೆ ಆರ್ಥಿಕ ನೆರವು ನೀಡಿ ಸ್ವಾವಲಂಬಿ ಜೀವನ ನಡೆಸಲು ಈ ಕ್ಷೇತ್ರ ನೆರವಾಗುತ್ತಾ ಬಂದಿದೆ.
ಪ್ರಸಕ್ತ ವರ್ಷ ಕೊರೊನಾ ಸೋಂಕಿನಿಂದ ವಿಶ್ವದ ಆರ್ಥಿಕ ವ್ಯವಸ್ಥೆ ಕುಸಿದಿದೆ. ಗ್ರಾಮೀಣ ಜನರೇ ಹೆಚ್ಚಿರುವ ಭಾರತದಲ್ಲಿ ಜನರು ಉತ್ತಮ ಜೀವನ ನಡೆಸಲು ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಉಪಯುಕ್ತ ಕ್ರಮಗಳನ್ನು ಕೈಗೊಳ್ಳುತ್ತಲೇ ಬಂದಿವೆ. ಕೋವಿಡ್-19ರ ಹಿನ್ನೆಲೆ ಆರ್ಥಿಕ ಹಿಂಜರಿತ ಮೆಟ್ಟಿ ನಿಲ್ಲಲು ಪ್ರಧಾನ ಮಂತ್ರಿ ನರೇಂದ್ರ ಮೋದಿ ಅವರು ದೇಶದ ಸಮಗ್ರ ಅಭಿವೃದ್ಧಿಗೆ 20 ಲಕ್ಷ ಕೋಟಿ ರೂಪಾಯಿಗಳ ಆತ್ಮನಿರ್ಭರ ಭಾರತ್ ಪ್ಯಾಕೇಜ್ ನಡಿ ಹಲವಾರು ಯೋಜನೆಗಳನ್ನು ಪ್ರಕಟಿಸಿದ್ದಾರೆ.
ಆತ್ಮನಿರ್ಭರ ಭಾರತ್ ಅಂದರೆ ಭಾರತವು ಎಲ್ಲ ವಲಯಗಳಲ್ಲಿ ಸ್ವಾವಲಂಬನೆ ಸಾಧಿಸುವುದರ ಮೂಲಕ ಸಂಕಷ್ಟದಲ್ಲಿರುವ ಜನರು, ರೈತರು, ಹೈನುಗಾರರು-ಮೀನುಗಾರರು, ಸಣ್ಣ, ಅತಿಸಣ್ಣ ಮತ್ತು ಮಧ್ಯಮ ಕೈಗಾರಿಕೆಗಳು, ಸಾರಿಗೆ- ಆರೋಗ್ಯ-ಶಿಕ್ಷಣ ಹೀಗೆ ಎಲ್ಲ ವಲಯಗಳ ಮೂಲಕ ಆರ್ಥಿಕ ಸ್ವಾವಲಂಬನೆಗೊಳಿಸುವುದು ಸರ್ಕಾರಗಳ ಆದ್ಯತೆಯೂ ಆಗಿದೆ.
ರಾಜ್ಯದಲ್ಲಿ ಕೃಷಿ ಸಾಲ ಉದ್ದೇಶಗಳಿಗೆ 24.50 ಲಕ್ಷ ರೈತರಿಗೆ ಶೂನ್ಯ ಬಡ್ಡಿ/ಶೇ.3ರ ಬಡ್ಡಿದರದಲ್ಲಿ ರೂ. 15,300 ಕೋಟಿ ಬೆಳೆ ಸಾಲ ವಿತರಣಾ ಗುರಿ ಇದ್ದು, 2020ರ ಏಪ್ರಿಲ್ 1ರಿಂದ ಸೆಪ್ಟೆಂಬರ್‌ವರೆಗೆ ಒಟ್ಟು 12,11,409 ರೈತರಿಗೆ ರೂ. 79,29.30 ಕೋಟಿ ರೂ. ವಿತರಿಸಲಾಗಿದೆ.
ಪ್ರಸ್ತುತ ಅನುಷ್ಠಾನಗೊಳ್ಳುತ್ತಿರುವ ಈ ಕಾರ್ಯಕ್ರಮದಲ್ಲಿ ರೈತರಿಗೆ ಕೃಷಿ ಮೂಲ ಸೌಕರ್ಯಗಳ ಅಭಿವೃದ್ಧಿಗೆ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘಗಳ ಮೂಲಕ ಆರ್ಥಿಕ ನೆರವು ನೀಡುವುದು, ಮೀನುಗಾರರು ಮತ್ತು ಹೈನುಗಾರರಿಗೆ ಪ್ಯಾಕೇಜ್‌ಗಳ ಮೂಲಕ ದುಡಿಯುವ ಬಂಡವಾಳ ದೊರಕಿಸಿ ಅವರೆಲ್ಲರೂ ಸಹಕಾರ ಕ್ಷೇತ್ರದ ಕಕ್ಷೆಯೊಳಗೆ ಸ್ವಾವಲಂಬನೆ ಸಾಧಿಸಲು ಸಿಎಂ ಅವರ ಮಾರ್ಗದರ್ಶನದಲ್ಲಿ ಸಹಕಾರ ಇಲಾಖೆಯ ಮೂಲಕ 4 ಕಂದಾಯ ವಿಭಾಗಗಳಲ್ಲಿ 'ಆರ್ಥಿಕ ಸ್ಪಂದನ' ಕಾರ್ಯಕ್ರಮ ಏರ್ಪಡಿಸಲಾಗಿದೆ.
ಪ್ರಥಮ ಹಂತದಲ್ಲಿ ಬೆಂಗಳೂರು ವಿಭಾಗ ಮಟ್ಟದ ಕಾರ್ಯಕ್ರಮವನ್ನು ಮುಖ್ಯಮಂತ್ರಿಗಳು ಉದ್ಘಾಟಿಸುತ್ತಿದ್ದು, ಈ ಯೋಜನೆಯನ್ವಯ ಕೃಷಿ ಕ್ಷೇತ್ರಕ್ಕೆ 15,300 ಕೋಟಿ ರೂ., ಕೃಷಿಯೇತರ ಕ್ಷೇತ್ರಕ್ಕೆ 24,000 ಕೋಟಿ ರೂ. ಸೇರಿ ಒಟ್ಟಾರೆ 39,300 ಕೋಟಿ ರೂ.ವನ್ನು ನೀಡಲಾಗುತ್ತಿದೆ. ಅಗ್ರಿ ಇನ್ಫ್ರಾ ಫಂಡ್ ಅಡಿ ಪ್ಯಾಕೇಜ್‌ಗಳಲ್ಲಿ ವಿವಿಧ ಸೇವೆಗಳ ಕೇಂದ್ರಗಳ ಸ್ಥಾಪನೆಗೆ ನಬಾರ್ಡ್‌ನಿಂದ 4525 ಕೋಟಿ ರೂಪಾಯಿಯನ್ನು ಕೇಂದ್ರ ಸರ್ಕಾರ ನೀಡಿದೆ.
ಈ ನಿಟ್ಟಿನಲ್ಲಿ ಏರ್ಪಡಿಸಿರುವ ಆರ್ಥಿಕ ಸ್ಪಂದನ ಕಾರ್ಯಕ್ರಮವು ಯಶಸ್ವಿಯಾಗಲೆಂದು ಶುಭ ಕೋರಿರುವ ಸಹಕಾರ ಸಚಿವ ಎಸ್ ಟಿ ಸೋಮಶೇಖರ್ ಅವರು, ಗ್ರಾಮೀಣ ಜನರು ಸಹಕಾರ ಇಲಾಖೆಯಿಂದ ಅನುಷ್ಠಾನಗೊಳಿಸುತ್ತಿರುವ ಯೋಜನೆಗಳ ಪ್ರಯೋಜನ ಫಲಾನುಭವಿಗಳು ಪಡೆಯಬೇಕೆಂದು ಮನವಿ ಮಾಡಿದ್ದಾರೆ.